Advertisement

ಶಿಕ್ಷಕರ ನೇಮಕ ಗೊಂದಲ-ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ

01:13 PM Aug 29, 2017 | |

ವಿಜಯಪುರ: ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಹಲವು ಗೊಂದಲಗಳಿದ್ದು, ಕೂಡಲೇ ನಿವಾರಣೆಗೆ ಕ್ರಮ ಕೈಗೊಳ್ಳಬೇಕೆಂದು ಎಐಡಿವೈಒ ನೇತೃತ್ವದಲ್ಲಿ ಉದ್ಯೋಗಾಕಾಂಕ್ಷಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಹಾತ್ಮ ಗಾಂಧೀಜಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು
ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಡಿವೈಒ ಅಧ್ಯಕ್ಷ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಶಿಕ್ಷಕರ ನೇಮಕಾತಿ ಅಧಿಸೂಚನೆ ಸಾಕಷ್ಟು
ಗೊಂದಲ ಮೂಡಿಸಿದೆ. ಇದರಿಂದಾಗಿ ಲಕ್ಷಾಂತರ ಉದ್ಯೋಗಕಾಂಕ್ಷಿಗಳು ಆತಂಕ ಎದುರಿಸುವಂತಾಗಿದೆ.
ಮತ್ತೂಂದೆಡೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಮುಂದಾಗಿಲ್ಲ. ಕೇವಲ ಪದವೀಧರರನ್ನು
ಮಾತ್ರ ಶಿಕ್ಷಕರಾಗಿ ನೇಮಿಸಿಕೊಳ್ಳುತ್ತಿದೆ. ಡಿಎಸ್‌ ಶಿಕ್ಷಣ ಪಡೆದಿರುವವರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ ಎಂದರು ಕಿಡಿ ಕಾರಿದರು. ಶಿಕ್ಷಣ ಇಲಾಖೆಯು 3 ಬಾರಿ ನಡೆಸಿದ ಟಿಇಟಿ ಪರೀಕ್ಷೆಯಲ್ಲಿ 39,692 ಅಭ್ಯರ್ಥಿಗಳು ಪತ್ರಿಕೆ-1 ಪರೀಕ್ಷೆಯಲಿ ಉತ್ತೀರ್ಣರಾಗಿದ್ದಾರೆ. ಆದರೆ ಅವರೆಲ್ಲರೂ ಈ ಬಾರಿ ಅರ್ಜಿ ಸಲ್ಲಿಸುವಂತಿಲ್ಲ. ಏಕೆಂದರೆ ಇಲಾಖೆಯ ಪ್ರಕಾರ ಅವರನ್ನು ಅರ್ಹರು ಎಂದು ಪರಿಗಣಿಸುವಂತಿಲ್ಲ. ಡಿ.ಇಡಿ ಬೋಧನಾವಾರು ವಿಷಯಕ್ಕೂ ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ವಿಷಯಕ್ಕೂ ತಾಳಮೇಳ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಮುಖಂಡ ಭೈರವ ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಇತಿಹಾಸದಲ್ಲೇ ಮೊದಲ ಬಾರಿಗೆ ವಿವರಣಾತ್ಮಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಇದರಿಂದ ಪಾರದರ್ಶಕತೆ ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಟಿಇಟಿಯಲ್ಲಿ ಉತ್ತೀರ್ಣರಾದ ಅರ್ಹರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಡಿ.ಇಡಿ ತರಬೇತಿಯಲ್ಲಿ ಅಭ್ಯರ್ಥಿಯ ಬೋಧನಾ ವಿಷಯಗಳನ್ನು ಮೂಲಭೂತ ಅಂಶ ಎಂದು
ಪರಿಗಣಿಸಬೇಕು. ವಿವರಾಣಾತ್ಮಕ ಪರೀಕ್ಷೆ ಕೈ ಬಿಟ್ಟು, ಬಹು ಆಯ್ಕೆಯ ಪ್ರಶ್ನೆಯ ಮಾದರಿ ಅನುಸರಿಸಬೇಕು. ದುಬಾರಿ ಅರ್ಜಿ ಶುಲ್ಕ ಕಡಿಮೆ ಮಾಡಬೇಕು ಎಂಬುವುದು ಸೇರಿದಂಥೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು. ಬಾಳು ಜೇವೂರ, ಹಬೀಬ ಪಟೇಲ್‌, ಯಲಗೋಡ, ಎಸ್‌.ಪಠಾಣ, ಜ್ಯೋತಿ, ರಾಘವೇಂದ್ರ ಸುಣಗಾರ, ಏಸಪ್ಪಾ ಕೇದಾರ,ಬಸವರಾಜ ಯಾದವ, ಸೈಯ್ಯದ್‌, ಪಿ.ಎಲ್‌. ಪೂಜಾರಿ, ಮುಬಾರಕ ಆಲಮೇಲ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next