Advertisement

Ayodhya: 30 ಲಕ್ಷ ರೂ. ವೆಚ್ಚದ ಬಸ್‌ನಲ್ಲಿ ಬಸವನ ಅಯೋಧ್ಯೆ ಯಾತ್ರೆ

11:30 AM Sep 22, 2024 | Team Udayavani |

ದೊಡ್ಡಬಳ್ಳಾಪುರ (ಬೆಂ.ಗ್ರಾ): ಅಯೋಧ್ಯೆ, ಕಾಶಿ ಮೊದಲಾದ ತೀರ್ಥ ಕ್ಷೇತ್ರಗಳಿಗೆ ಹಿರಿಯರನ್ನು ಕರೆದುಕೊಂಡು ಹೋಗುವುದು ಹಾಗೂ ಕುಟುಂಬಸ್ಥರು ಹೋಗುವುದು ವಾಡಿಕೆ. ಆದರೆ ಅಯೋ ಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಿರುವ ಬಾಲರಾಮನ ದರ್ಶನಕ್ಕೆ ಬಸವ (ಎತ್ತು)ನನ್ನು ಕರೆದೊಯ್ಯಲೆಂದೇ ಬಸ್‌ ಒಂದನ್ನು 30 ಲಕ್ಷ ರೂ ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಸಿರುವುದು ಗಮನ ಸೆಳೆಯುತ್ತಿದೆ.

Advertisement

ತಾಲೂಕಿನ ಪೆರಮಗೊಂಡನಹಳ್ಳಿಯ ದಿನ್ನೆ ಆಂಜನೇಯಸ್ವಾಮಿ ದೇವಸ್ಥಾನದ ಆರ್ಚಕ ವಾಸುದೇವಚಾರ್‌ ಅವರು ಎತ್ತು (ಹನುಮಂತ) ಒಂದನ್ನು ಅಯೋಧ್ಯೆಗೆ ಕರೆದೊಯ್ಯುತ್ತಿದ್ದು ಇದಕ್ಕಾಗಿ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಿಸಿದ್ದಾರೆ.

ಶ್ರೀ ರಾಮನ ಪರಮಭಕ್ತನಾಗಿರುವ ಅರ್ಚಕ ವಾಸುದೇವಚಾರ್‌, ಒಂದೂವರೆ ವರ್ಷದಿಂದ ಎತ್ತನ್ನು ಸಾಕಿದ್ದು ಇದಕ್ಕೆ ಹನುಮಂತ ದೇವರು ಎಂಬ ಹೆಸರು ನಾಮಕರಣ ಮಾಡಿ ದೇವರ ಪಟ್ಟ ನೀಡಿದ ವರ್ಷಕ್ಕೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿತ್ತು. ಇದರ ಅಂಗವಾಗಿ ಶ್ರೀ ರಾಮನ ದರ್ಶನ ಮಾಡಿಸಲು ಹನುಮಂತನನ್ನು ಕರೆದೊಯ್ಯುವ ತೀರ್ಮಾನ ಮಾಡಿ, ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ವಿಶೇಷ ಬಸ್‌ನಲ್ಲಿ ಯಾತ್ರೆ ಶುರು: ಹನುಮಂತನ (ಎತ್ತು) ತೀರ್ಥಯಾತ್ರೆ ಸಲುವಾಗಿಯೇ ಬಸ್‌ನ್ನು ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಸಲಾಗಿದೆ. ಬಸ್‌ನ ಒಂದು ಭಾಗದಲ್ಲಿ ಹನುಮಂತನಿಗೆ ಬೇಕಾದ ಮೇವು, ನೀರು ಇಡಲು, ಮತ್ತೂಂದು ಭಾಗದಲ್ಲಿ ಮೆತ್ತನೆಯ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ.

18 ದಿನ ಸಾಗಲಿದೆ ಯಾತ್ರೆ: ಆರು ಜನರ ತಂಡ ಹನುಮಂತನ ಜತೆಗೆ ತೀರ್ಥಯಾತ್ರೆ ಮಾಡುತ್ತಿ ದ್ದೇವೆ. ಶುಕ್ರವಾರದಿಂದ ಪ್ರಾರಂಭವಾಗಿರುವ ಯಾತ್ರೆಯು ಸುಮಾರು 18 ದಿನ ಸಾಗಲಿದ್ದು ಮೊದಲಿಗೆ ಮಂತ್ರಾಲಯದ ರಾಯರ ದರ್ಶನ ದಿಂದ ತೀರ್ಥಯಾತ್ರೆ ಪ್ರಾರಂಭವಾಗಲಿದೆ. ಆನಂತರ ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಮಾಡಿಕೊಂಡು, ಗಂಗಾನದಿಯಲ್ಲಿ ಸ್ನಾನ ಮಾಡಿಸಿ, ಮುಂದೆ ಕಾಶಿ, ಗಯಾ ಹಾಗೂ ನೇಪಾಳದ ಸಾಲಿಗ್ರಾಮಕ್ಕೆ ಭೇಟಿ ನೀಡಲಾಗುವುದು ಎಂದು ಅರ್ಚಕ ವಾಸುದೇವಚಾರ್‌ ಮಾಹಿತಿ ನೀಡಿದ್ದಾರೆ.

Advertisement

ಒಂದೂವರೆ ವರ್ಷದಿಂದ ಬಸ್‌ಪ್ರಯಾಣದ ಅನುಭವ ತರಬೇತಿ ಹನುಮಂತನನ್ನು ಅಯೋಧ್ಯೆಗೆ ಕರೆದೊಯ್ಯಬೇಕಾದರೆ ಸುಮಾರು 1900 ಕಿ.ಮೀ. ಕ್ರಮಿಸಬೇಕು. ಇಷ್ಟು ದೂರ ಎತ್ತನ್ನು ಬಸ್‌ನಲ್ಲಿ ಸಾಗಿಸಲು ಕಷ್ಟಕರ ಹಾಗೂ ಎತ್ತು ಯಾವ ರೀತಿ ಇರುತ್ತದೆಯೋ ಎಂಬುವ ಆತಂಕ ಕಾಡಿತ್ತು. ಆದ್ದರಿಂದ ಒಂದೂವರೆ ವರ್ಷದಿಂದ ವಾಹನದಲ್ಲಿ ಕರೆದೊಯ್ದು ತರಬೇತಿ ನೀಡಲಾಗಿದೆ.

ಈ ಮೊದಲು ಶಾಲಾ ವಾಹನ ಬಸ್‌ನಲ್ಲಿ ಕೇರಳ, ತಮಿಳುನಾಡು ರಾಜ್ಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಗೃಹಪ್ರವೇಶ, ಸತ್ಯನಾರಾಯಣ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿ ಬರಲಾಗಿದೆ. ಹಾಗಾಗಿ ಬಸ್‌ ಪ್ರಯಾಣದ ಅನುಭವ ಇದ್ದು ದೀರ್ಘ‌ ತೀರ್ಥಯಾತ್ರೆ ಪ್ರಯಾಣಕ್ಕೆ ಯಾವುದೇ ತೊಂದರೆಯಿಲ್ಲ ಎನ್ನುತ್ತಾರೆ ಅರ್ಚಕ ವಾಸುದೇವಾಚಾರ್‌.

Advertisement

Udayavani is now on Telegram. Click here to join our channel and stay updated with the latest news.

Next