Advertisement

ಶಿಕ್ಷಕರು ಸಮಾಜದ ಶಿಲ್ಪಿಗಳು: ಗ್ರೇಸ್‌ ಪಿಂಟೋ

01:39 PM Sep 05, 2018 | Team Udayavani |

ಮುಂಬಯಿ: ಪ್ರತಿ ವರ್ಷ ಸೆ. 5ರಂದು ನಾವೆಲ್ಲಾ ನಮ್ಮ ದೇಶದ ಎರಡನೇ ರಾಷ್ಟ್ರಪತಿ ಡಾ| ಸರ್ವಪಳ್ಳಿ ರಾಧಾಕೃಷ್ಣನ್‌ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುತ್ತೇವೆ.  ಡಾ| ಸರ್ವಪಳ್ಳಿ ರಾಧಾಕೃಷ್ಣನ್‌ ಒಬ್ಬ ಶ್ರೇಷ್ಠ ತಣ್ತೀಜ್ಞಾನಿ, ನೆನಪಿನಲ್ಲಿ ಅಚ್ಚಳಿಯದೆ ಉಳಿಯುವ ಶಿಕ್ಷಕ ಮಾತ್ರವಲ್ಲ ಹೃದಯವಂತಿಕೆಯಲ್ಲಿ ಒಬ್ಬ ಮಹಾನ್‌ ಮಾನವತಾವಾದಿ. ಹಾಗಾಗಿ ಈ ದೇಶದ ಭಾವೀ ನಾಯಕರನ್ನು ಬೆಳೆಸಿ, ಪೋಷಿಸುವ, ಅವರಲ್ಲಿ ದೂರದೃಷ್ಟಿತ್ವ ಬೆಳೆಸುವ ಮತ್ತು ಜವಾಬ್ದಾರಿಯುತ ನಾಗರಿಕರನ್ನು ಸೃಷ್ಟಿಸುವಲ್ಲಿ ಅಪಾರ ಕೊಡುಗೆಯನ್ನು ನೀಡುವ ಶಿಕ್ಷಕರಿಗೆ ಅವರ ಹುಟ್ಟಿದ ದಿನವನ್ನು ಅರ್ಪಿಸಲಾಗಿದೆ ಎಂದು ರಾಯನ್‌ ಇಂಟರ್‌ನ್ಯಾಷನಲ್‌ ಶಿಕ್ಷಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಗ್ರೇಸ್‌ ಪಿಂಟೋ ನುಡಿದರು.

Advertisement

ಶಿಕ್ಷಕರ ದಿನಾಚರಣೆಯ ಮುನ್ನಾದಿನವಾದ ಮಂಗಳವಾರ ವಿದ್ಯಾರ್ಥಿಗಳನ್ನು  ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವು, ವಿದ್ಯಾರ್ಥಿ ಜೀವನದಲ್ಲಿ ದೇಶದ ಭಾವೀ ಪ್ರಜೆಗಳನ್ನು ಕೈಹಿಡಿದು ಮುನ್ನಡೆಸಿ ಉದಾತ್ತ ಮಾರ್ಗದಲ್ಲಿ ಹೆಜ್ಜೆ ಇಡಲು ಬೆಳಕು ನೀಡುವವರು ಈ ಶಿಕ್ಷಕರು. ಅವರು ಸಮಾಜಕ್ಕೆ ನೀಡುವ ನಿಷ್ಕಲ್ಮಷ ಮತ್ತು ನಿಸ್ವಾರ್ಥ ಸೇವೆಗೆ ನಾನು ಆ ಭಗವಂತನಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಮೌಲ್ಯಗಳನ್ನು ತಿಳಿಹೇಳುತ್ತಾರೆ, ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ, ಕಾಳಜಿಯುಳ್ಳ ಮಾನವರಾಗಿ ರೂಪಿಸುತ್ತಾರೆ. ನಮ್ಮ ಕಳೆದ ದಿನಗಳನ್ನು ಒಂದು ಬಾರಿ ಹಿಂತಿರುಗಿ ನೋಡಿದರೆ ನಮ್ಮ ಜೀವನವನ್ನು ರೂಪಿಸಲು ಶಿಕ್ಷಕರು ನಿರ್ವಹಿಸಿದ ಪಾತ್ರದ ಮಹತ್ವವೇನು ಎಂಬುವುದು ಅರ್ಥವಾಗುತ್ತದೆ. ನಮ್ಮ ಜೀವನಕ್ಕೆ ಆಕಾರ, ಸ್ವರೂಪ ನೀಡಿದ ಶಿಕ್ಷಕರಿಗೆ ನಾವು ಚಿರಋಣಿ. ಇಂದು ತಾಂತ್ರಿಕತೆಯ ಹುಟ್ಟು ಮತ್ತು ತ್ವರಿತ ಬೆಳವಣಿಗೆ ಶಿಕ್ಷಣದ ಭೂದೃಶ್ಯವನ್ನೇ ಬದಲಾಯಿಸಿದೆ. 

ಪರಿಣಾಮವಾಗಿ ನಮ್ಮ ಶಿಕ್ಷಕರ ಪಾತ್ರವೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಶಿಕ್ಷಕರು ಶಿಕ್ಷಣ ವ್ಯವಸ್ಥೆಯ ಸಮಗ್ರ ಭಾಗವಾಗಿದ್ದಾರೆ ಮತ್ತು ಈ ವಿಕಸಿಸುತ್ತಿರುವ ಜಾಗತೀಕರಣದ ಜಗತ್ತಿನಲ್ಲಿ ಶಿಕ್ಷಕರು ಎಂದಿಗೂ ನಿಂತ ನೀರಾಗಿಲ್ಲ ಅಥವಾ  ಕಲಿಕಾ ಪ್ರವೃತ್ತಿಯಲ್ಲಿ ಹಳೆಯ ಶೈಲಿಯಲ್ಲಿಲ್ಲ. ಶಿಕ್ಷಕರು ಕಲಿಕಾ ವಿಚಾರದಲ್ಲಿ ನಿರಂತರ ಮೇಲ್ದರ್ಜೆಗೇರುವ ಅಗತ್ಯವಿದೆ. ಕಲಿಕಾ ವಿಧಾನ ಮತ್ತು ಕಲಿಕಾ ವೈವಿಧ್ಯತೆಗಳನ್ನು ಅಭಿವೃದ್ಧಿಪಡಿಸುವುದು ಆವಶ್ಯಕ. ಇಂದಿನ ದಿನಗಳಲ್ಲಿ ಒಂದು ಮೌಸ್‌ ಬಟನ್‌ ಕ್ಲಿಕ್‌ ಮಾಡಿದರೆ ಎಲ್ಲಾ ವಿಷಯಗಳು ದೊರೆಯಬಲ್ಲವು, ಆದರೆ ಹೊಸ ಪರಿಕಲ್ಪನೆ ಮತ್ತು ಕೌಶಲ್ಯಗಳನ್ನು ಕಲಿಯಲು ಶಿಕ್ಷಕರ ನೆರವು ಅಗತ್ಯವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರಲ್ಲಿ ಮಾರ್ಗದರ್ಶಕರನ್ನು ಕಾಣುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಧೈರ್ಯ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಸ್ವಸ್ಥ ಸಮಾಜದ ಭಾವೀ ಪ್ರಜೆಗಳ ನಿರ್ಮಾತೃಗಳಾಗಿದ್ದಾರೆ. 

ಈ ಬಾರಿಯ ಶಿಕ್ಷಕರ ದಿನಾಚರಣೆಗೆ ನಾವೆಲ್ಲರೂ ಸಮಾಜಕ್ಕೆ ನೀವು ನೀಡಿದ ಅಮೂಲ್ಯವಾದ ಕೊಡುಗೆಯನ್ನು ಅರ್ಥೈಸಿಕೊಂಡು ಗೌರವಿಸುತ್ತೇವೆ. ಸಮಾಜಕ್ಕೆ ನೀವು ಕೊಡುತ್ತಿರುವ ನಿಸ್ವಾರ್ಥ ಸೇವೆಯನ್ನು ಉದಾರವಾಗಿ ಮುಂದುವರಿಸಿ. ಭಗವಂತನ ಕೃಪೆ ನಿಮ್ಮೆಲ್ಲರ ಮೇಲಿರಲಿ ಎಂದು ನುಡಿದು ಶುಭಹಾರೈಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next