Advertisement

ಶಿಕ್ಷಕರೇ ಸಮಾಜ ಬದಲಾವಣೆಯ ಹರಿಕಾರರು

12:06 AM Jan 02, 2021 | Team Udayavani |

ಬದಲಾವಣೆ ಜಗದ ನಿಯಮ. ಸಾಮಾನ್ಯವಾಗಿ ಜನರು ಕಾಲ ಬದಲಾಗಿದೆ ಎನ್ನುತ್ತಾರೆ. ಆದರೆ ಬದಲಾಗಿರುವುದು ಕಾಲವಲ್ಲ, ಜನರು. ಕಾಲ ಮುಂದೆ ಸಾಗುತ್ತಿರುವಂತೆ ಕಾಲದೊಡನೆ ನಾವು ಹೆಜ್ಜೆ ಇಟ್ಟು ಸಾಗುತ್ತಿರಬೇಕು. ಬದಲಾವಣೆಗಳೊಂದಿಗೆ ಬದುಕು ವುದನ್ನು ಕಲಿಸುವುದೇ ನಿಜವಾದ ಶಿಕ್ಷಣ. ಆ ನಿಟ್ಟಿ ನಲ್ಲಿಂದು ಬದಲಾವಣೆ ಶಿಕ್ಷಣದಿಂದ ಆಗಬೇಕೋ? ಅಥವಾ ಶಿಕ್ಷಣದಲ್ಲಿ ಬದಲಾವಣೆ ಆಗಬೇಕೋ? ಎಂಬುದನ್ನು ಚಿಂತಿಸಬೇಕಿದೆ.

Advertisement

ಪುರಾತನ ಕಾಲದಲ್ಲಿ ಭಾರತೀಯ ಶಿಕ್ಷಣ ಸಚ್ಚಾರಿತ್ರ್ಯ, ನೈತಿಕತೆ ಹಾಗೂ ಮಾನವೀಯತೆಯಂತಹ ಮೌಲ್ಯಗಳನ್ನು ಧಾರೆಯೆರೆಯುತ್ತಿತ್ತು. ರಾಮ, ಕೃಷ್ಣರಿಂದ ಹಿಡಿದು ಮಹಾವೀರ, ಬುದ್ಧರಲ್ಲದೆ, ಸ್ವಾಮಿ ವಿವೇಕಾನಂದರ ವರೆಗೆ ವ್ಯಕ್ತಿಗಳು ದೈವೀ ಸ್ವರೂಪದ ಮಹತ್ವ ಪಡೆದು ಇಡೀ ಭಾರತಕ್ಕೆ ಆದರ್ಶಪ್ರಾಯರಾಗಿದ್ದಾರೆ. “ಯಾವಾಗ ಇತರ ದೇಶಗಳ ಜನರಿಗೆ ಓದುವ ಬರೆಯುವ ಜ್ಞಾನವೇ ಇರಲಿಲ್ಲವೋ, ಆವಾಗ ಭಾರತೀಯರು ವೇದಗಳನ್ನು ಬರೆದಿದ್ದರು. ಯಾವಾಗ ಇತರ ದೇಶಗಳ ಜನರಿಗೆ ಶಿಕ್ಷಣದ ಅರಿವೇ ಇರಲಿಲ್ಲವೋ, ಆವಾಗ ಭಾರತದಲ್ಲಿ ಗುರುಕುಲ ಶಿಕ್ಷಣ ನಡೆಯುತ್ತಿತ್ತು’ ಎಂದು ಪ್ರಸಿದ್ಧ ಲೇಖಕ ಡೇವಿಡ್‌ ವೇಲ್ಸ್‌ ಅವರ ಹೇಳಿಕೆ ಇಲ್ಲಿ ಉಲ್ಲೇಖನೀಯ. ಆದರೆ ಇಂತಹ ಶ್ರೇಷ್ಠ ಭಾರತ ದಲ್ಲಿ ದಿಲ್ಲಿ ಸುಲ್ತಾನರು, ಮೊಘಲರು ಹಾಗೂ ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಒಂದೊಂದೇ ಮೌಲ್ಯಗಳು ಕಳಚುತ್ತಾ, ಪರಿವರ್ತನೆಗೊಂಡ ಮೌಲ್ಯಗಳು ಸೇರ್ಪಡೆಗೊಳುತ್ತಾ ಸಾಗಿ ಬಂದು ಆಧುನಿಕ ಭಾರತದಲ್ಲಿ ಪ್ರಾಚೀನ ಕಾಲದ ಮೌಲ್ಯಗಳ ಅವಶ್ಯವನ್ನು ಅನಿವಾರ್ಯಗೊಳಿಸಿದೆ. ಆ ನಿಟ್ಟಿನಲ್ಲಿ ಆಧುನಿಕ ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಇದು ಸಕಾಲವಾಗಿದೆ.

ಸ್ವತಂತ್ರ ಭಾರತದಲ್ಲಿ ಇದ್ದ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಮೆಕಾಲೆ ವರದಿಯ ತದ್ರೂಪವಾಗಿತ್ತು. ಅನಂತರ 1968 ರಲ್ಲಿ ಕೊಠಾರಿ ಶಿಕ್ಷಣ ಆಯೋಗದ ಶಿಫಾರಸುಗಳಂತೆ ಜಾರಿಗೆ ಬಂದ ಹೊಸ ಶಿಕ್ಷಣ ನೀತಿ ಶಿಕ್ಷಣ ಮಾಧ್ಯಮದಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೊಳಿಸಿತು. ಅದು ಜನಸಾಮಾನ್ಯರ ನಡುವಿನ ಕೊರತೆಯನ್ನು ತಗ್ಗಿಸಲು ಅವಶ್ಯವಾಗಿತ್ತು. ಜತೆಗೆ ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿ ಅಳವಡಿಸಿಕೊಳ್ಳುವ ನಿರ್ಧಾರವು ವಿವಾದಾತ್ಮಕ ವಾಗಿದ್ದರೂ ಭಾರತೀಯರೆಲ್ಲರಿಗೂ ಒಂದು ಸಾಮಾನ್ಯ ಭಾಷೆಯನ್ನು ಉತ್ತೇಜಿಸಲು ಸಮಾನವಾಗಿ ಪ್ರೋತ್ಸಾಹಿಸಬೇಕೆಂದು ಹಿಂದಿ ಭಾಷೆಯ ಬಳಕೆ ಮತ್ತು ಕಲಿಕೆಗೆ ಈ ನೀತಿ ಕರೆ ನೀಡಿತು. ಪ್ರಾಚೀನ ಸಂಸ್ಕೃತ ಭಾಷೆಯ ಬೋಧನೆಯನ್ನೂ ಸಹ ಈ ನೀತಿಯು ಪ್ರೋತ್ಸಾಹ ನೀಡಿತು. ಇದು ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಒಂದು ಪ್ರಮುಖ ಭಾಗವೆಂದು ಪರಿಗಣಿಸಲ್ಪಟ್ಟಿತು.ಆ ಬಳಿಕ 1986ರಲ್ಲಿ ಜಾರಿಗೆ ಬಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಹಾಗೂ ಅಂಗವಿಕಲರ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಿತು. ಅಲ್ಲದೆ ಪಠ್ಯಕ್ರಮದಲ್ಲಿ ಸಾಮಾನ್ಯ ಹತ್ತು ಬೀಜಾಂಶಗಳನ್ನು ಎಲ್ಲ ಹಂತಗಳಲ್ಲಿ ಅಳವಡಿಸಲು ಮಾರ್ಗದರ್ಶನ ನೀಡಿತ್ತು. ಹೀಗೆ ಕಾಲ ಮುಂದುವರಿದಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಬದಲಾವಣೆಗಳು ಅನಿವಾರ್ಯ.

2020ರಲ್ಲಿ ರೂಪಿಸಲಾಗಿರುವುದು ಮೂರನೇ ಹಾಗೂ ಅತೀ ಮುಖ್ಯವಾದ ನೀತಿಯಾಗಿದೆ. ಈ ನೀತಿಯು ಮಕ್ಕಳ ಕಲಿಕಾ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಅವರ ಆಸಕ್ತಿ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಸಂವೇದನಾಶೀಲ ಪಠ್ಯಕ್ರಮ ಹಾಗೂ ಬೋಧನಾ ಕ್ರಮಗಳನ್ನು ರೂಪಿಸಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಬಲಪಡಿಸಿದೆ. ಅಲ್ಲದೆ ಶಿಕ್ಷಣ ಮಾಧ್ಯಮ ಕನಿಷ್ಠ 5ನೇ ತರಗತಿ ವರೆಗೆ ಸಾಧ್ಯವಾದರೆ 8 ನೇ ತರಗತಿ ವರೆಗೆ ಮಾತೃಭಾಷೆ/ಪ್ರಾದೇಶಿಕ ಭಾಷೆಯಲ್ಲಿ ಇರಬೇಕೆಂದು ಸ್ಪಷ್ಟಪಡಿಸಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇದು ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಸರ್ವರಿಗೂ ಉತ್ತಮ ಶಿಕ್ಷಣ ನೀಡುವುದರೊಂದಿಗೆ ನಮ್ಮ ಸಮಾಜವನ್ನು ಒಂದು ಸುಸ್ಥಿರ, ಸಮಾನ ಹಾಗೂ ಜೀವಂತಿಕೆಯುಳ್ಳ ಸಮಾಜವನ್ನಾಗಿ ಮಾರ್ಪಡಿಸಲು ಶ್ರಮಿಸುತ್ತದೆ.

ಸಮಾಜದಲ್ಲಿ ಅಂತಹ ಒಂದು ಮಾರ್ಪಾಡು ಮಾಡುವಲ್ಲಿ ಮುಖ್ಯ ಪಾತ್ರಧಾರಿಗಳಾದ ಶಿಕ್ಷಕರನ್ನು ನಮ್ಮ ಸಮಾಜದ ಅತೀ ಮುಖ್ಯ ವ್ಯಕ್ತಿಗಳು ಮತ್ತು ಬದಲಾವಣೆಯ ಹರಿಕಾರರು ಎಂದು ಹೊಸ ಶಿಕ್ಷಣ ನೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಶಿಕ್ಷಕರ ಗುಣಮಟ್ಟವನ್ನು ಅವಲಂಬಿಸಿರುತ್ತದೆ ಎಂಬುದನ್ನು ಒತ್ತಿ ಹೇಳಿದೆ. ಆ ನಿಟ್ಟಿನಲ್ಲಿ ಕೆಲವು ಬದಲಾವಣೆಗಳನ್ನು ಹೊಸ ಶಿಕ್ಷಣ ನೀತಿಯಲ್ಲಿ ಅಳವಡಿಸಿರುವುದನ್ನು ಹಾಲಿ ಹಾಗೂ ಭವಿಷ್ಯದಲ್ಲಿ ಶಿಕ್ಷಕರಾಗಬಯಸುವವರು ತಪ್ಪದೇ ತಿಳಿದುಕೊಳ್ಳಬೇಕಾಗುತ್ತದೆ.

Advertisement

ಶಿಕ್ಷಣ ನಿಂತ ನೀರಲ್ಲ. ಸದಾ ಹರಿಯುತ್ತಿರುವ ನೀರಿನಂತೆ. ಅದರಲ್ಲಿ ಕೆಲವೊಮ್ಮೆ ಕೊಳಕು ಬಂದು ಸೇರಿದರೂ ಹರಿಯುವ ನೀರು ಪರಿಶುದ್ಧವಾಗುತ್ತಾ ಸಾಗುವಂತೆ ಶಿಕ್ಷಣ ವ್ಯವಸ್ಥೆಯೂ ಪರಿಶುದ್ಧಗೊಳ್ಳುತ್ತಾ ಸಾಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಯಾವುದೇ ಬದ ಲಾವಣೆಗಳಾದರೂ ಅವುಗಳನ್ನು ವ್ಯವಸ್ಥಿತವಾಗಿ ಜಾರಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿರುತ್ತದೆ. ಸಂವಿಧಾನದ ಆಶಯದಂತೆ ಯಾರೂ ಶಿಕ್ಷಣ ದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾ ರಿಯೂ ಶಿಕ್ಷಕರ ಮೇಲಿದೆ. ಹಾಗಾಗಿ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣದಲ್ಲಿ ಬದಲಾವಣೆ ಆಗಬೇಕು ಹಾಗೂ ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಉಂಟಾಗಬೇಕು. ಅಂದರೆ ಶಿಕ್ಷಣದಲ್ಲಿ ಬದಲಾವಣೆ, ಶಿಕ್ಷಣದಿಂದ ಬದಲಾವಣೆ ಎರಡೂ ಮುಖ್ಯ.

ಪ್ರಾಮಾಣಿಕತೆ, ಬದ್ಧತೆ ಮುಖ್ಯ
ಶಿಕ್ಷಣ ಕ್ಷೇತ್ರದಲ್ಲಿ ಸರಕಾರವೇ ಬದಲಾವಣೆಗಳನ್ನು ಮಾಡಬೇಕು. ಆದರೆ ಆ ಬದಲಾವಣೆಗಳನ್ನು ಕೆಳ ಹಂತದಲ್ಲಿ ಕಾರ್ಯರೂಪಕ್ಕೆ ತರುವವರು ಶಿಕ್ಷಕರು. ಅಂತಹ ಶಿಕ್ಷಕ ವೃತ್ತಿ ಜಗತ್ತಿನ ಪರಮ ಪವಿತ್ರ ವೃತ್ತಿ ಎಂಬುದು ಬಹುತೇಕರ ನಂಬಿಕೆ. ಏಕೆಂದರೆ ಉಳಿದ ಎಲ್ಲವುಗಳಿಗೆ ಶಿಕ್ಷಣ ಮತ್ತು ಮಾರ್ಗದರ್ಶನ ನೀಡು ವುದೇ ಶಿಕ್ಷಕ ವೃತ್ತಿ. ಒಬ್ಬ ವೈದ್ಯ ಕೆಟ್ಟವನಾಗಿದ್ದರೆ ತನ್ನಲ್ಲಿ ಬರುವ ನೂರಾರು/ಸಾವಿರಾರು ರೋಗಿಗಳನ್ನು ಕೊಲ್ಲಬಹುದು. ಒಬ್ಬ ಎಂಜಿನಿಯರ್‌ ಕೆಟ್ಟವನಾಗಿದ್ದರೆ ಹಲವು ಕಟ್ಟಡಗಳು ಉರುಳಬಹುದು. ಆದರೆ ಶಿಕ್ಷಕ ಕೆಟ್ಟವನಾದರೆ ದೇಶದ ಭವಿಷ್ಯವೇ ಹಾಳಾಗುತ್ತದೆ ಎನ್ನುತ್ತಾರೆ ಹಿರಿಯರು. ಹೀಗಾಗಿ ಶಿಕ್ಷಕರು ವೃತ್ತಿ ಪ್ರಾಮಾಣಿಕತೆ ಜತೆಗೆ ಸಾಮಾಜಿಕ ಬದ್ಧತೆಯನ್ನು ಕಾಪಾಡಿಕೊಂಡು ಸಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next