Advertisement

ಶಿಕ್ಷಕರ ಸಮಸ್ಯೆ ಅರಿವಿದೆ: ಚಂದ್ರಶೇಖರ

05:41 PM May 18, 2022 | Shwetha M |

ವಿಜಯಪುರ: ಪ್ರಸ್ತುತ ಸಂದರ್ಭದಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳು ಹತ್ತು ಹಲವಾರಿದ್ದು, ಪರಿಹಾರ ಕ್ರಮಗಳು ಮಾತ್ರ ಸಾಧ್ಯವಾಗಿಲ್ಲ. ಓರ್ವ ಶಿಕ್ಷಕನಾಗಿ ಶಿಕ್ಷಕರ ಸಮಸ್ಯೆಗಳ ನೈಜ ಅರಿವು ಇರುವ ನಾನು ಸದನದಲ್ಲಿ ಶಿಕ್ಷಕರ ನೋವಿಗೆ ಧ್ವನಿಯಾಗುತ್ತದೆ. ಆ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದೇ ನನ್ನ ಆದ್ಯತೆ ಎಂದು ವಾಯುವ್ಯ ಶಿಕ್ಷಕರ ಮೇಲ್ಮನೆ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ ಚಂದ್ರಶೇಖರ ಲೋಣಿ ಭರವಸೆ ನೀಡಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದಿಂದ ಈಗಾಗಲೇ ನನಗೆ ಅಭೂತಪೂರ್ವ ಬೆಂಬಲ ದೊರೆತಿದ್ದು, ನಾನು ಅವರ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ನಿವಾರಣೆಗೆ ನನ್ನ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಿದ್ದೇನೆ. ಮತದಾನ ಅರ್ಹತೆ ಇರುವ ಶಿಕ್ಷಕ ಪ್ರಭುಗಳು ನನಗೆ ಹೆಚ್ಚಿನ ಮತಗಳ ಆಶೀರ್ವಾದ ಮಾಡಿ ಗುರು ಸ್ವರೂಪಿ ಶಿಕ್ಷಕರ ಸೇವೆ ಮಾಡುವ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಶಿಕ್ಷಕ ಬಂಧುಗಳು ಎದುರಿಸುತ್ತಿರುವ ನೋವುಗಳನ್ನು ಸ್ವಯಂ ಅನುಭವಿಸಿರುವ ನಾನು, ಹತ್ತಿರದಿಂದ ಇತರೆ ಶಿಕ್ಷಕರ ನೋವಿನ ಅರಿವೂ ಇದೆ. ಹೀಗಾಗಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಸಂಕಲ್ಪ ಮಾಡಿರುವ ನನಗೆ ನನ್ನ ಬದ್ಧತೆ ತೋರಲು ಶಿಕ್ಷಕರು ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಬೆಳಗಾವಿ ಭಾಗದಲ್ಲಿ ಗಡಿ ಪ್ರದೇಶಗಳಲ್ಲಿ ಕನ್ನಡ ಶಾಲೆಗಳು ಅನೇಕ ತೊಂದರೆ ಎದುರಿಸುತ್ತಿವೆ. ಇವುಗಳನ್ನು ಸಶಕ್ತಗೊಳಿಸಲು ಸರ್ಕಾರ ವಿಶೇಷ ಅನುದಾನ ನೀಡಬೇಕಿದೆ. ಈ ಕುರಿತು ಸದನದಲ್ಲಿ ಧ್ವನಿ ಎತ್ತುವ ಮೂಲಕ ಗಡಿ ಭಾಗದ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಪಣ ತೊಟ್ಟಿದ್ದೇನೆ ಎಂದರು.

Advertisement

ಇದಲ್ಲದೇ 2006ರ ನಂತರ ನೇವಕವಾದ ಶಿಕ್ಷಕ ವೃತ್ತಿ ಬಾಂಧವರಿಗೆ ಪಿಂಚಣಿ ವ್ಯವಸ್ಥೆ ಜಾರಿಗೆ ಧ್ವನಿಯಾಗುತ್ತೇನೆ. 1994-95 ನಂತರ ಆರಂಭವಾದ ಎಲ್ಲ ಖಾಸಗಿ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವುದ ನನ್ನ ಆದ್ಯತೆಯಲ್ಲಿ ಒಂದು. ರಾಜ್ಯದ ನಿರ್ಲಕ್ಷಿತ ಶಿಕ್ಷಣ ವ್ಯವಸ್ಥಯಾಗಿರುವ ಐಟಿಐ ಕಾಲೇಜು ಸಿಬ್ಬಂದಿಗಳಿಗೂ ಅನುದಾನ ವ್ಯಾಪ್ತಿಗೆ ತರಬೇಕಿದೆ. ಅಲ್ಲಿನ ಶಿಕ್ಷಕರ ಸಮಸ್ಯೆಗೆ ಗಮನ ಹರಿಸಬೇಕಿದೆ. ಹೀಗಾಗಿ ನನ್ನ ಗೆಲುವಿಗೆ ಸಮಸ್ಯೆಗಳ ಅರಿವಿರುವ ಶಿಕ್ಷಕರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಸಹಜಾನಂದ ದಂಧರಗಿ ಮಾತನಾಡಿ, ರಾಜಕೀಯೇತರ ಸಂಘವಾಗಿರುವ ಮಾಧ್ಯಮಿಕ ಶಾಲಾ ನೌಕರರ ಸಂಘಕ್ಕೆ ಅಧ್ಯಕ್ಷರಾಗಿರುವ ಚಂದ್ರಶೇಖರ ಲೋಣಿ ಅವರಿಗೆ ನಮ್ಮ ಸಂಘಟನೆ ಸಂಪೂರ್ಣ ಬೆಂಬಲ ನೀಡಿದೆ. ಓರ್ವ ಶಿಕ್ಷಕರಾಗಿ ಶಿಕ್ಷಕರ ನೋವಿನ ಅರಿವು ಇರುವ ಕಾರಣ, ಅವರು ಸದನದಲ್ಲಿ ನಮ್ಮ ಭಾವನೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲಿದ್ದಾರೆ. ಹೀಗಾಗಿ ಅವರ ಆಯ್ಕೆಯೂ ಖಚಿತವಾಗಲಿದೆ ಎಂದರು.

ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಶಿಕ್ಷಕರ ನೋವಿಗೆ ಕಾಳಜಿ ಹೊಂದಿರುವ ಪ್ರಗತಿಪರ ಚಿಂತನೆಯ ಶಿಕ್ಷಕ ಚಂದ್ರಶೇಖರ ಅವರಿಗೆ ಮೂರೂ ಜಿಲ್ಲೆಗಳ ಶಿಕ್ಷಕ ಮತದಾರರು ಪ್ರಥಮ ಆಧ್ಯತೆಯ ಮತ ನೀಡಿ ಗೆಲ್ಲಿಸುವ ವಿಶ್ವಾಸವಿದೆ ಎಂದರು. ಜೆಡಿಎಸ್‌ ಜಿಲ್ಲಾಧ್ಯಕ್ಷ ಬಿ.ಎಸ್‌. ಪಾಟೀಲ ಮಾಡಗಿ, ರಾಜುಗೌಡ ಪಾಟೀಲ ಕುದರಿ ಸಾಲೋಡಗಿ, ಜೆಡಿಎಸ್‌ ಜಿಲಾಧ್ಯಕ್ಷೆ ಸ್ನೇಹಲತಾ ಶೆಟ್ಟಿ ಸೇರಿದಂತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next