ಚಿತ್ರದುರ್ಗ: ಶಿಕ್ಷಕರ ಅರ್ಹತಾ ಟಿ.ಇ.ಟಿ ಪರೀಕ್ಷೆ ಫೆ. 3 ರಂದು ನಗರದ 36 ಕೇಂದ್ರಗಳಲ್ಲಿ ನಡೆಯಲಿದ್ದು, ಯಾವುದೇ ಲೋಪವಾಗುವಂತೆ ಪರೀಕ್ಷೆ ನಡೆಸಬೇಕೆಂದು ಅಪರ ಜಿಲ್ಲಾಧಿಕಾರಿ ಕೆ. ಸಂಗಪ್ಪ ಸೂಚಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಪರೀಕ್ಷಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ. 3 ರಂದು ಮೊದಲ ಅಧಿವೇಶನದ ಪರೀಕ್ಷೆ ಬೆಳಿಗ್ಗೆ 9 ರಿಂದ 12 ಗಂಟೆಯವರೆಗೆ ನಡೆಯಲಿದ್ದು, 3171 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಮಧ್ಯಾಹ್ನದ ಅಧಿವೇಶನ ಮಧ್ಯಾಹ್ನ 2 ರಿಂದ 4 ಗಂಟೆವರೆಗೆ ನಡೆಯಲಿದೆ. ಇದರಲ್ಲಿ 7240 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷರು, ಸ್ಥಾನಿಕ ಜಾಗೃತ ದಳದ ಅಧಿಕಾರಿಗಳು, ಬಹಳ ಜವಾಬ್ದಾರಿಯಿಂದ ಜಂಟಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಕೊಠಡಿ ಮೇಲ್ವಿಚಾರಕರನ್ನು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಮಾತ್ರ ನೇಮಿಸಿಕೊಳ್ಳಬೇಕು. ಮುಖ್ಯ ಅಧೀಕ್ಷಕರು ಹಾಗೂ ಮೇಲ್ವಿಚಾರಕರು ಬೆಳಿಗ್ಗೆ ಸರಿಯಾಗಿ 7:30ಕ್ಕೆ ಕೇಂದ್ರದಲ್ಲಿ ಹಾಜರಿರಬೇಕು. ಮಾರ್ಗಾಧಿಕಾರಿಗಳು ನಿಗದಿತ ವೇಳೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಜಿಲ್ಲಾ ಖಜಾನೆಯಿಂದ ಪಡೆದು ಕೇಂದ್ರಗಳಿಗೆ ವಿತರಿಸಬೇಕು. ಅದೇ ರೀತಿ ಉತ್ತರಪತ್ರಿಕೆಗಳನ್ನು ಸಹ ಜಿಲ್ಲಾ ಖಜಾನೆಯಲ್ಲಿ ಭದ್ರಪಡಿಸಿ ಇಡಬೇಕು ಎಂದರು.
ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ಅವರನ್ನು ಸರಿಯಾಗಿ ತಪಾಸಣೆ ನಡೆಸಿ ಕೇಂದ್ರಗಳಲ್ಲಿ ಪ್ರವೇಶ ನೀಡಬೇಕು. ಕೇಂದ್ರದೊಳಗೆ ಮೊಬೈಲ್ ಸೇರಿದಂತೆ ಯಾವುದೇ ವಿದ್ಯುನ್ಮಾನ ಉಪಕರಣಗಳನ್ನು ತರದಂತೆ ಎಚ್ಚರಿಕೆ ವಹಿಸಬೇಕು, ಅದೇ ರೀತಿಯಾಗಿ ಒಎಂಆರ್ ಶೀಟ್‌ಗಳನ್ನು ಭರ್ತಿ ಮಾಡುವ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದರು.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ಶೌಚಾಲಯ, ವೀಡಿಯೋ ಚಿತ್ರೀಕರಣವನ್ನು ಕಡ್ಡಾಯವಾಗಿ ಮಾಡಬೇಕು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ಮುಖ್ಯ ಅಧಿಧೀಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ನೋಡಲ್ ಅಧಿಕಾರಿ ರಾಮಯ್ಯ ಅವರ ಗಮನಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು.
ಒಟ್ಟಾರೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿ ಪರೀಕ್ಷೆಗಳನ್ನು ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ನಡೆಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ರಕ್ಷಣಾಧಿಕಾರಿ ಪ್ರತಾಪ್ ಪಾಟೀಲ್, ಶಿಕ್ಷಣಾಧಿಕಾರಿ ರಾಮಯ್ಯ, ತಿಪ್ಪೇಸ್ವಾಮಿ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು.