ಕಣ್ಣೂರು: ನವೆಂಬರ್ 2021 ರಿಂದ 26 ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಜಿಲ್ಲೆಯ ಅನುದಾನಿತ ಶಾಲೆಯೊಂದರ 52 ವರ್ಷದ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಚೈಲ್ಡ್‌ಲೈನ್ ಅಧಿಕಾರಿಗಳ ದೂರುಗಳ ಆಧಾರದ ಮೇಲೆ ಜನವರಿ 12 ರಂದು ಪೋಕ್ಸೊ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಹಿರಿಯ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ತಾನು ಎದುರಿಸಿದ ದೌರ್ಜನ್ಯವನ್ನು ಶಾಲೆಯ ಮತ್ತೊಬ್ಬ ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾಳೆ. ಆಕೆ ತತ್ ಕ್ಷಣ ಚೈಲ್ಡ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ನಮಗೆ ಮಾಹಿತಿ ನೀಡಿದರು. ನಾವು ಜನವರಿ 11 ರಂದು ದೂರು ಪಡೆದಿದ್ದೇವೆ” ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಹೆಚ್ಚಿನ ಕೌನ್ಸೆಲಿಂಗ್ ನಂತರ, ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ದೂರುಗಳನ್ನು ನೀಡಿದರು. ಜನವರಿ 12ರಂದು ಐದು ಪ್ರಕರಣಗಳನ್ನು ದಾಖಲಿಸಿ ಬಂಧಿಸಿದ್ದೆವು, ಬಳಿಕ ನಿನ್ನೆ 21 ಪ್ರಕರಣಗಳು ದಾಖಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ನಂತರ ಶಾಲೆಯು ಪುನರಾರಂಭವಾದಾಗ 2021 ರ ನವೆಂಬರ್‌ನಿಂದ ಕಿರುಕುಳದ ಘಟನೆಗಳನ್ನು ವಿದ್ಯಾರ್ಥಿಗಳು ವಿವರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.