ಬೆಂಗಳೂರು : ಪ್ರಸಕ್ತ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) 2019ರ ಫೆ.3ರಂದು ನಡೆಯಲಿದ್ದು, ಈ ಸಂಬಂಧ ಪಠ್ಯಕ್ರಮ ಹಾಗೂ ಪರೀಕ್ಷಾ ವಿವರದ ಮಾಹಿತಿಯ ಸುತ್ತೋಲೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದೆ.
ಟಿಇಟಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಮಾತ್ರ ಸರ್ಕಾರಿ ಶಾಲೆಗಳ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಧ್ಯ. ಈಗಾಗಲೇ ಪದವಿ ಸಹಿತವಾಗಿ ಬಿ.ಇಡಿ ಪೂರೈಸಿರುವ ಅಥವಾ ಬಿ.ಇಡಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಸಕ್ತರು ಡಿ.25ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಪರೀಕ್ಷೆಯ ಪ್ರವೇಶ ಪತ್ರ 2019ರ ಜ.23ರ ನಂತರ ಇಲಾಖೆ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ. ಪತ್ರಿಕೆ -1 ಮತ್ತು ಪತ್ರಿಕೆ-2ರ ಶುಲ್ಕ ವಿವರ ಹಾಗೂ ಅರ್ಹತಾ ಮಾನದಂಡ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ವಿಶೇಷ ಅಗತ್ಯವುಳ್ಳ ಅಭ್ಯರ್ಥಿಗಳಿಗೆ ಅರ್ಹ ವಿದ್ಯಾರ್ಹತೆಯಲ್ಲಿ ನಿಗದಿ ಪಡಿಸಿರುವ ಕನಿಷ್ಠ ಅಂಕಗಳಲ್ಲಿ ಶೇ.5ರಷ್ಟು ವಿನಾಯ್ತಿ ಇದೆ. ಎನ್‌ಸಿಟಿಇ ಮಾನ್ಯ ಮಾಡಿರುವ ಡಿಪ್ಲೊಮಾ ಮತ್ತು ಪದವಿ ಕೋರ್ಸ್‌ಗಳನ್ನು ಟಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ವಿದ್ಯಾರ್ಹತೆಯಲ್ಲಿ ಪರಿಗಣಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಟಿಇಟಿ ನೋಟಿಫಿಕೇಷನ್ ಸಂಪೂರ್ಣ ಮಾಹಿತಿ
www.schooleducation.kar.nic.in ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಡಿ.27ರೊಳಗೆ ಶುಲ್ಕ ಪಾವತಿಸಬೇಕು. ಪೇಪರ್-1 ಮತ್ತು ಪೇಪರ್-2ರ ಪಠ್ಯಕ್ರಮ ಹೇಗಿರುತ್ತದೆ ಎಂಬುದನ್ನು ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ. ಮಗುವಿನ ಅಭಿವೃದ್ಧಿ, ಅಂತರ್ಗತ ಶಿಕ್ಷಣದ ಪರಿಕಲ್ಪನೆ, ಕಲಿಕೆ ಮತ್ತು ಬೋಧನಾ ಶಾಸ್ತ್ರ, ಭಾಷಾ ಗ್ರಹಿಕೆ, ಭಾಷಾ ಬೆಳವಣಿಗೆಯ ಶೈಕ್ಷಣಿಕ ತಳಹದಿ, ಗಣಿತ, ಪರಿಸರ ಅಧ್ಯಯನ ಹೀಗೆ ಎಲ್ಲ ವಿಷಯದ ಮಾಹಿತಿ ನೀಡಲಾಗಿದೆ.