Advertisement

ನಲುಗಿದ ನೇಮಕ: ಶಿಕ್ಷಕರ ನೇಮಕಾತಿ: ತಕರಾರು ಅರ್ಜಿಗೆ ಹೈಕೋರ್ಟ್‌ ಪುರಸ್ಕಾರ

12:35 AM Jan 31, 2023 | Team Udayavani |

ಬೆಂಗಳೂರು: ಖಾಲಿ ಇರುವ 15 ಸಾವಿರ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಹೊರಡಿಸಿದ್ದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದು, ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವ ರಾಜ್ಯ ಸರಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

Advertisement

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಪಡಿಸುವಂತೆ ಕೋರಿ ಉಡುಪಿಯ ಯೆಡ್ತಾಡಿ ಗ್ರಾಮದ ಅನಿತಾ ಹಾಗೂ ಮೈಸೂರಿನ ಕೆ. ಮಮತಾ ಸೇರಿ 40ಕ್ಕೂ ಅಧಿಕ ಶಿಕ್ಷಕ ಹುದ್ದೆ ಆಕಾಂಕ್ಷಿ ಮಹಿಳಾ ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.

ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ವಿವಾಹಿತ ಮಹಿಳಾ ಅಭ್ಯರ್ಥಿಗಳ ಪತಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿರುವ ಬಗ್ಗೆ ಅರ್ಜಿ ದಾರರ ಆಕ್ಷೇಪವನ್ನು ನ್ಯಾಯಪೀಠ ಪುರಸ್ಕರಿಸಿದೆ. ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರ ಪರಿಗಣಿಸಿ ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ರಾಜ್ಯ ಸರಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿದ್ದರು. 15 ಸಾವಿರ ಶಿಕ್ಷಕರ ನೇಮಕಾತಿಗೆ ಒಂದು ವರ್ಷದಿಂದ ನಡೆಸಿದ್ದ ಸರಕಾರದ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ.

ಏನಿದು ಪ್ರಕರಣ?
ಪದವೀಧರರ ಪ್ರಾಥಮಿಕ ಶಾಲಾ ಶಿಕ್ಷಕರ (6-8 ತರಗತಿ) ನೇಮಕಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಫೆ. 22ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಜಿದಾರರೂ ನೇಮಕಾತಿ ಬಯಸಿ ಅರ್ಜಿ ಸಲ್ಲಿ ಸಿದ್ದರು. ಲಿಖೀತ ಪರೀಕ್ಷೆಗೆ ಹಾಜರಾಗಿ ಉತ್ತಮ ರ್‍ಯಾಂಕ್‌ ಗಳಿಸಿದ್ದರು. ಅಲ್ಲದೆ 1:2 ಅನುಪಾತದ ತಾತ್ಕಾಲಿಕ ಪಟ್ಟಿಯಲ್ಲಿ ದಾಖಲೆಗಳ ಪರಿಶೀಲನೆಗೆ ಅವರು ಅರ್ಹರಾಗಿದ್ದರು. ದಾಖಲೆ ಪರಿ ಶೀಲಿಸಿದ್ದ ಇಲಾಖೆ ಪ್ರತಿಕ್ರಿಯೆ ನೀಡಿರಲಿಲ್ಲ.

Advertisement

ಆದರೆ 2022ರ ನ. 18ರಂದು 1:1 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕ ಟಿಸಿದ್ದು, ಅರ್ಜಿದಾರರು ಅದರಲ್ಲಿ ಸ್ಥಾನ ಪಡೆದಿರಲಿಲ್ಲ. ಇದರಿಂದ ಅರ್ಜಿದಾರರು ತಾತ್ಕಾಲಿಕ ಪಟ್ಟಿಯನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು.
ಶಿಕ್ಷಣ ಇಲಾಖೆ ಪ್ರಕಟಿಸಿದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರಿಗಿಂತ ಕಡಿಮೆ ಅಂಕ ಪಡೆದಿರುವವರ ಹೆಸರುಗಳಿವೆ. ಈ ಬಗ್ಗೆ ಡಿಡಿಪಿಐಗಳನ್ನು ವಿಚಾರಿಸಿದಾಗ ವಿವಾಹಿತ ಮಹಿಳಾ ಅಭ್ಯರ್ಥಿಗಳು ಪತಿಯ ಆದಾಯ ಮತ್ತು ಜಾತಿ ಪ್ರಮಾಣಪತ್ರದ ಬದಲಾಗಿ ತಂದೆಯ ಆದಾಯ ಮತ್ತು ಜಾತಿ ಪ್ರಮಾಣಪತ್ರವನ್ನು ಸಲ್ಲಿಸಿರುವುದರಿಂದ ಅರ್ಜಿದಾರರ ಹೆಸರುಗಳನ್ನು ಹಿಂದುಳಿದ ಪ್ರವರ್ಗ ಗಳ ಪಟ್ಟಿಯಿಂದ ಕೈಬಿಟ್ಟು, ಸಾಮಾನ್ಯ ವರ್ಗಕ್ಕೆ ಸೇರಿಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಅಭ್ಯರ್ಥಿಗಳಿಗೆ ಮಾಹಿತಿ ನೀಡದೆ ಸಾಮಾನ್ಯ ಅಭ್ಯರ್ಥಿಗಳ ವರ್ಗಕ್ಕೆ ಸೇರಿಸಿರುವುದು ಸರಿಯಲ್ಲ. ಜತೆಗೆ ಪತಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಕೋರುವುದು ಕಾನೂನಿಗೆ ವಿರುದ್ಧ. ಆದ್ದರಿಂದ 2022ರ ನ. 18ರಂದು ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಅರ್ಜಿಯನ್ನು 2022ರ ನ. 30ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಶಿಕ್ಷಣ ಇಲಾಖೆ 2022ರ ನ. 18ರಂದು ಹೊರಡಿಸಿದ ತಾತ್ಕಾಲಿಕ ಪಟ್ಟಿಗೆ ಡಿ.9ರ ವರೆಗೆ ತಡೆಯಾಜ್ಞೆ ನೀಡಿತ್ತು.

ಅರ್ಜಿದಾರರ ವಾದವೇನು?
-ಮದುವೆಯಾಗಿರುವ ಮಹಿಳಾ ಅಭ್ಯರ್ಥಿಗಳು ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಅವರನ್ನು ಕೈಬಿಟ್ಟದ್ದು ಸರಿಯಲ್ಲ.
-ಜತೆಗೆ ಅವರ ಹೆಸರುಗಳನ್ನು ಹಿಂದುಳಿದ ಪ್ರವರ್ಗದಿಂದ ಕೈಬಿಟ್ಟು ಸಾಮಾನ್ಯ ವರ್ಗಕ್ಕೆ ಸೇರಿಸಿದ್ದು ಸರಿಯಲ್ಲ.

ಹಿನ್ನೋಟ
2022ರ ಫೆ. 22 – ನೇಮಕಕ್ಕೆ ಅಧಿಸೂಚನೆ
2022ರ ನ. 18- ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ; ಅಭ್ಯರ್ಥಿಗಳಿಂದ ಮೇಲ್ಮನವಿ

ಯಾವ ವರ್ಗಕ್ಕೆ ನೇಮಕ?
6-8ನೇ ತರಗತಿ ಶಿಕ್ಷಕರ ನೇಮಕ
15 ಸಾವಿರ- ಹುದ್ದೆಗಳ ಸಂಖ್ಯೆ

ಹೈಕೋರ್ಟ್‌ ಆದೇಶವನ್ನು ಪರಿ ಶೀಲಿಸು ತ್ತೇವೆ. ಕಾನೂನು ತಜ್ಞರ ಅಭಿಪ್ರಾಯ ಪಡೆದು, ಚರ್ಚಿಸಿ ಸರಕಾರದ ಸಲಹೆಯಂತೆ ಮುಂದಿನ ಹೆಜ್ಜೆ ಇಡುತ್ತೇವೆ.
– ವಿಶಾಲ್‌ ಆರ್‌.,
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next