Advertisement

ಕೃಷಿಕರ ಏಳಿಗೆಗೂ ಕಸರತ್ತು ಮಾಡಿ!

11:31 AM Nov 17, 2017 | Team Udayavani |

ಬೆಂಗಳೂರು: ಉದ್ಯಮಿಗಳಿಗೆ ಇನ್ನಿಲ್ಲದ ಕಸರತ್ತು ನಡೆಸಿ ವಿದ್ಯುತ್‌ ತಂದುಕೊಡುವ ಸರ್ಕಾರ, ಅದಕ್ಕಿಂತ ಹೆಚ್ಚು ಶ್ರಮ ಹಾಕಿ ಪ್ರತಿಯೊಬ್ಬ ರೈತರಿಗೆ ಸಮರ್ಪಕ ನೀರು, ವಿದ್ಯುತ್‌  ಪೂರೈಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲ ಸೂಚನೆ ನೀಡಿದರು. 

Advertisement

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಗುರುವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ನಾಲ್ಕು ದಿನಗಳ “ಕೃಷಿ ಮೇಳ-2017’ಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೈಗಾರಿಕೆಗಳಿಗೆ ವಿದ್ಯುತ್‌ ಎಷ್ಟು ಅವಶ್ಯಕವೋ ಕೃಷಿ ಉತ್ಪಾದನೆಗೆ ನೀರು ಕೂಡ ಅಷ್ಟೇ ಅವಶ್ಯಕ. ಆದ್ದರಿಂದ ಉದ್ಯಮಿಗಳಿಗೆ ಕಷ್ಟಪಟ್ಟು ಅಗತ್ಯ ವಿದ್ಯುತ್‌ ಪೂರೈಕೆ ಮಾಡುವಂತೆಯೇ ಪ್ರತಿಯೊಬ್ಬ ರೈತರಿಗೂ ಅಗತ್ಯ ನೀರು ಪೂರೈಕೆ ಮಾಡುವುದು ಸರ್ಕಾರಗಳ ಕರ್ತವ್ಯ. ಇದನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು. 

ರೈತರು ಕೂಡ ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ಸಾಂಪ್ರದಾಯಿಕ ನೀರಾವರಿಗಿಂತ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸೂಕ್ಷ್ಮ, ಹನಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ನೀರು ಪೋಲು ಆಗುವುದನ್ನು ತಗ್ಗಿಸಬೇಕು. ಇದರಿಂದ ಇತರ ರೈತರಿಗೂ ಅನುಕೂಲ ಆಗುತ್ತದೆ. ಈ ನಿಟ್ಟಿನಲ್ಲಿ ನಮಗೆ ಇಸ್ರೇಲ್‌ ಮಾದರಿ ಆಗಬೇಕು ಎಂದು ಹೇಳಿದರು.

ಅಲ್ಲದೆ, ಬರೀ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯದೆ, ಮೌಲ್ಯಾಧಾರಿತ ಉತ್ಪನ್ನಗಳತ್ತ ರೈತರು ಗಮನಹರಿಸಬೇಕು. ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಬೆಳೆಗಳನ್ನು ಬೆಳೆಯಬೇಕು. ಆಗ ರೈತರು ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದ ಅವರು, ಸರ್ಕಾರ ಕೂಡ ಮಣ್ಣಿನ ಆರೋಗ್ಯ ಚೀಟಿಗಳನ್ನು ಆದಷ್ಟು ಬೇಗ ವಿತರಿಸಬೇಕು. ಅದಕ್ಕೆ ತಕ್ಕಂತೆ ಬೆಳೆ, ರಸಗೊಬ್ಬರ ಮತ್ತಿತರ ಸಲಹೆ ನೀಡಬೇಕು. ಇದರಿಂದ ಉತ್ಪಾದನೆ ಪ್ರಮಾಣ ಹೆಚ್ಚಲಿದೆ ಎಂದು ತಿಳಿಸಿದರು. 

Advertisement

ಇದೇ ವೇಳೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದ ಸಿ.ಆರ್‌. ರಾಧಾಕೃಷ್ಣ ಅವರಿಗೆ “ದಿವಂಗತ ಸಿ. ಬೈರೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ’ ಹಾಗೂ ಗೋಕಾಕ್‌ ತಾಲ್ಲೂಕಿನ ರಾಜಾಪೂರದ ರಾಜು ಸತ್ತೆಪ್ಪಾ ಬೈರುಗೋಳ ಅವರಿಗೆ “ಡಾ.ಎಂ.ಎಚ್‌. ಮರೀಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ’, ತುಮಕೂರಿನ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ.ಬಿ. ಹನುಮಂತೇಗೌಡ ಅವರಿಗೆ

“ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿ’, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬೀಡಿಗಾನಹಳ್ಳಿಯ ಮಂಜುನಾಥ್‌ ಅವರಿಗೆ “ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಪ್ರಶಸ್ತಿ’, ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಓಂಕಾರಮೂರ್ತಿ ಅವರಿಗೆ “ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಮತ್ತು ಚಿಕ್ಕಬಳ್ಳಾಪುರದ ಗುಡಿಬಂಡೆಯ ಶಾರದಮ್ಮ ಅವರಿಗೆ “ಕ್ಯಾನ್‌ ಬ್ಯಾಂಕ್‌ ಅತ್ಯುತ್ತಮ ರೈತ ಮಹಿಳೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು. 

ಅಲ್ಲದೆ, ಕಬ್ಬು (ವಿಸಿಎಫ್ 0517), ಮೇವಿನ ಅಲಸಂಎ (ಎಂಎಫ್ಸಿ-09-1), ಮುಸುಕಿನಜೋಳದ ಸಂಕರಣ ತಳಿ (ಎಂಎಎಚ್‌-14-5), ತೊಗರಿ (ಬಿಆರ್‌ಜಿ-3), ಅಲಸಂದೆ (ಎವಿ-6), ಬೀಜದ ದಂಟು (ಕೆಬಿಜಿಎ-4) ನೇರಳೆ (ಚಿಂತಾಮಣಿ ಸೆಲೆಕ್ಷನ್‌-1), ಸ್ಟೀವಿಯ ರೆಬುಡಿನ ಎಂಬ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಯಿತು.  ಬೆಂಗಳೂರು ಕೃಷಿ ವಿವಿ ಕುಲಪತಿ ಡಾ.ಎಚ್‌. ಶಿವಣ್ಣ ಉಪಸ್ಥಿತರಿದ್ದರು. 

ರೈತರು ಕೇಳುತ್ತಿರುವುದು ಕೇವಲ 10 ಟಿಎಂಸಿ ನೀರು: ಸಮುದ್ರದ ಪಾಲಾಗುತ್ತಿರುವ 200 ಟಿಎಂಸಿಯಷ್ಟು ನೀರಿನಲ್ಲಿ ರಾಜ್ಯದ ರೈತರು ಕೇಳುತ್ತಿರುವುದು ಕೇವಲ 10 ಟಿಎಂಸಿ ನೀರು. ಆದ್ದರಿಂದ ಸಾಧ್ಯವಾದಷ್ಟು ಬೇಗ ಈ ವಿವಾದವನ್ನು ಸರ್ಕಾರಗಳು ಇತ್ಯರ್ಥಗೊಳಿಸಿ, ಉತ್ತರ ಕರ್ನಾಟಕದ ರೈತರಿಗೆ ಸಮರ್ಪಕ ನೀರು ಪೂರೈಸಬೇಕು ಎಂದು ರಾಜ್ಯಪಾಲ ವಜುಭಾಯಿ ವಾಲ ತಿಳಿಸಿದರು. 

ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆರಂಭಗೊಂಡ ಮೂರು ದಿನಗಳ ಕೃಷಿ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಮಹದಾಯಿಯಿಂದ ಕೇವಲ 10 ಟಿಎಂಸಿ ನೀರನ್ನು ರಾಜ್ಯದ ರೈತರಿಗೆ ಕೊಟ್ಟರೆ, ಆ ಭಾಗದ ರೈತರ ಬದುಕು ಹಸನಾಗಲಿದೆ. ಹಾಗಾಗಿ, ಸರ್ಕಾರಗಳು ಸಾಧ್ಯವಾದಷ್ಟು ಬೇಗ ಈ ವಿವಾದವನ್ನು ಇತ್ಯರ್ಥಗೊಳಿಸಬೇಕು ಎಂದು ಹೇಳಿದರು. 

ಅದೇ ರೀತಿ, ಕಾವೇರಿ ಕೂಡ ರಾಜ್ಯದಲ್ಲಿ ಹುಟ್ಟಿದರೂ ಆ ನೀರು ತಮಿಳುನಾಡು, ಪುದುಚೇರಿಗೂ ಹೋಗುತ್ತದೆ. ಆದ್ದರಿಂದ ಇದನ್ನು ಬಳಸಿಕೊಳ್ಳುವಲ್ಲಿ ತಾರತಮ್ಯ ಧೋರಣೆ ಅನುಸರಿಸಬಾರದು. ರೈತರಿಗೆ ಅಗತ್ಯಕ್ಕೆ ತಕ್ಕಂತೆ ನೀರಿನ ಹಂಚಿಕೆ ಆಗಬೇಕು. ದೇಶದ ರೈತರೆಲ್ಲರೂ ಒಂದೇ. ಇದರಲ್ಲಿ ಬೇಧಭಾವ ಇರಬಾರದು. ಅದೇ ರೀತಿ, ನೀರು ಕೂಡ ದೇವರು ಕೊಟ್ಟ ವರ.

ಈ ವಿಚಾರದಲ್ಲೂ ವಿವಾದ ಸಲ್ಲದು. ಸರ್ಕಾರಗಳು ಪರಸ್ಪರ ಸಮಾಲೋಚನೆ ಮಾಡಿ, ಈ ಜಲವಿವಾದಗಳನ್ನು ಬಗೆಹರಿಸಬೇಕು ಎಂದು ತಿಳಿಸಿದರು. ಅಷ್ಟಕ್ಕೂ ನೀರು ಎನ್ನುವುದು ದೇವರು ಕೊಟ್ಟ ವರ. ಅದು ಯಾರೊಬ್ಬರ ಸ್ವತ್ತು ಅಲ್ಲ ಮತ್ತು ಅದರ ಮೇಲೆ ಪ್ರತಿಯೊಬ್ಬರ ಹಕ್ಕು ಇದೆ. ಹಾಗಾಗಿ, ನೀರಿನ ಸಮರ್ಪಕ ಹಂಚಿಕೆ ಆಗಬೇಕು ಎಂದು ನೆರೆ ರಾಜ್ಯಗಳ “ನೀರಿನ ಕ್ಯಾತೆ’ಗೆ ರಾಜ್ಯಪಾಲರು ಎಚ್ಚರಿಕೆಯನ್ನೂ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next