Advertisement
ಬೆಳ್ಳಂದೂರು ಉಪವಿಭಾಗದ ಎಂಜಿನಿಯರಿಂಗ್ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ 7.30ರ ಸುಮಾರಿಗೆ ಶಾರ್ಟ್‌ಸರ್ಕಿಟ್‌ನಿಂದ ಸಂಭವಿಸಿದೆ ಎನ್ನಲಾದ ಅಗ್ನಿ ಅವಘಡದಿಂದ ಮಹತ್ವದ ದಾಖಲೆಗಳು, ಕಂಪ್ಯೂಟರ್, ಪೀಠೊಪಕರಣಗಳು ಸುಟ್ಟು ಕರಕಲಾಗಿವೆ. ಅಧಿಕಾರಿಗಳು ಶಾರ್ಟ್‌ಸರ್ಕಿಟ್ ಕಾರಣ ನೀಡುತ್ತಿದ್ದರೂ, ಬೆಂಕಿ ಅವಘಡದ ಹಿಂದೆ ಟಿಡಿಆರ್ ಮಾಫಿಯಾ ಕೆಲಸ ಮಾಡಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
Related Articles
Advertisement
ಸಂಶಯ ಮೂಡಲು ಕಾರಣವೇನು?: ಬೆಳ್ಳಂದೂರು ಉಪ ವಲಯ ಕಛೇರಿಯ ನೆಲ ಮಹಡಿಯಲ್ಲಿ ಪಾಲಿಕೆ ಸದಸ್ಯರ ಕಚೇರಿಯಿದ್ದು, ಮೊದಲ ಮಹಡಿಯಲ್ಲಿ ನಾಡ ಕಚೇರಿಗೆ ಹೊಂದಿಕೊಂಡು ಎಂಜಿನಿಯರಿಂಗ್ ಕೊಠಡಿಯಿದೆ. ಎಂಜಿನಿಯರಿಂಗ್ ಕೊಠಡಿಯಲ್ಲಿ ಕೆಲವೇ ದಿನಗಳ ಹಿಂದೆ ವಿದ್ಯುತ್ ವೈರಿಂಗ್ ಕೆಲಸ ಮಾಡಲಾಗಿದೆ. ಆದರೂ, ಎಂಜಿನಿಯರಿಂಗ್ ಕೊಠಡಿಯಲ್ಲಿ ಮಾತ್ರ ಬೆಂಕಿ ಕಾಣಿಸಿಕೊಂಡಿರುವುದು ಸಂಶಯ ಮೂಡಿಸಿದೆ.
ಇದರೊಂದಿಗೆ ಬೆಳ್ಳಂದೂರು ಸುತ್ತಮುತ್ತಲಿನ ಭಾಗಗಳಲ್ಲಿ ನೂರಾರು ಕಟ್ಟಡಗಳು ನಿರ್ಮಾನವಾಗುತ್ತಿವೆ. ಪರಿಣಾಮ ನಿಯಮಬಾಹಿರವಾಗಿ ಅನುಮತಿ ನೀಡಿರುವ ಬಗ್ಗೆ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಅದರ ದಾಖಲೆಗಳು ಸಹ ಎಂಜಿನಿಯರ್ ಕೊಠಡಿಯಲ್ಲಿಯೇ ಇದ್ದಿದ್ದರಿಂದ ಮತ್ತಷ್ಟು ಹಗರಣಗಳು ಬಯಲಿಗೆ ಬರಬಹುದು ಎಂಬ ಉದ್ದೇಶದಿಂದ ಕಿಡಿಗೇಡಿಗಳು ಬೆಂಕಿ ಹಾಕಿರಬಹುದು ಎಂಬ ಅನುಮಾನಗಳನ್ನು ಕೆಲ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಕೊಠಡಿಯಲ್ಲಿದ್ದ ದಾಖಲೆಗಳು ಯಾವುವು?: ಬೆಳ್ಳಂದೂರು ಉಪವಿಭಾಗದ ಎಂಜಿನಿಯರಿಂಗ್ ಕೊಠಡಿಯಲ್ಲಿ ಲೋಕಾಯುಕ್ತ, ನ್ಯಾಯಾಲಯ ಮತ್ತು ಕಟ್ಟಡ ನಿರ್ಮಾಣ ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ಇರಿಸಲಾಗಿತ್ತು ಎಂದು ಹೇಳಲಾಗಿದೆ. ಆ ಪೈಕಿ ಬಹುತೇಕ ಕಡತಗಳು ಸುಟ್ಟು ಹೋಗಿದ್ದು, ಮಹಜರು ಬಳಿಕ ಯಾವ ಕಡತಗಳು ಸುಟ್ಟಿವೆ ಎಂಬುದು ತಿಳಿಯಲಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿಜಿನಿಯರ್ ಪ್ರಕಾಶ್ ದೂರು ದಾಖಲಿಸಿದ್ದಾರೆ.
ಬೆಳ್ಳಂದೂರು ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ವರದಿ ನೀಡುವಂತೆ ಜಂಟಿ ಆಯುಕ್ತರಿಗೆ ಆದೇಶಿಸಿದ್ದು, ಜಂಟಿ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಧಿಕಾರಿಗಳು ನೀಡುವ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು. -ಎನ್.ಮಂಜುನಾಥ ಪ್ರಸಾದ್, ಪಾಲಿಕೆ ಆಯುಕ್ತರು ಎಂಜಿನಿಯರಿಂಗ್ ಕೊಠಡಿಯಲ್ಲಿದ್ದ ಲೋಕಯುಕ್ತ, ನ್ಯಾಯಾಲಯ ಮತ್ತು ಕಟ್ಟಡ ನಿರ್ಮಾಣದ ಮಂಜೂರಾತಿಗೆ ಸಂಬಂಧಿಸಿದ ಕಡತಗಳು ಸುಟ್ಟು ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮಹಜರು ಮಾಡಿದ ಬಳಿಕ ಯಾವ ಕಡತಗಳು ಸುಟ್ಟಿವೆ ಎಂಬ ಮಾಹಿತಿ ದೊರೆಯಲಿದೆ.
-ಶೋಭಾ, ಮಹದೇವಪುರ ವಲಯ ಜಂಟಿ ಆಯುಕ್ತರು