Advertisement

ಕೇಂದ್ರದ ವಿರುದ್ಧ ಟಿಡಿಪಿ ಅವಿಶ್ವಾಸ

06:00 AM Mar 17, 2018 | Team Udayavani |

ಅಮರಾವತಿ/ಹೊಸದಿಲ್ಲಿ: ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸಂಪುಟದಿಂದ ಹೊರ ಬಂದಿದ್ದ ಟಿಡಿಪಿ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದಲೂ ಹೊರಬಂದಿದೆ. ಜತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಪ್ಯಾಕೇಜ್‌ ನೀಡದೆ ಇರುವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಎನ್‌ಡಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅದಕ್ಕೆ ಕಾಂಗ್ರೆಸ್‌, ಎಡ ಪಕ್ಷಗಳೂ ಬೆಂಬಲ ವ್ಯಕ್ತಪಡಿಸಿವೆ. ಇದೇ ವೇಳೆ ಜಗನ್ಮೋಹನ ರೆಡ್ಡಿ ನೇತೃತ್ವದ ವೈ.ಎಸ್‌.ಆರ್‌. ಕಾಂಗ್ರೆಸ್‌ ಮಂಡಿಸಿದ ಅವಿಶ್ವಾಸಗೊತ್ತುವಳಿಯನ್ನು ತಡೆಹಿಡಿಯಲಾಗಿದೆ.

Advertisement

ಉತ್ತರ ಪ್ರದೇಶ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬಳಿಕ ಕೇಂದ್ರದ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳು ತೃತೀಯ ರಂಗ ರಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿರುವಂತೆಯೇ ಅವಿಶ್ವಾಸ ಗೊತ್ತುವಳಿ ಮಂಡಿಸಿರುವುದು ಮಹತ್ವ ಪಡೆದಿದೆ. ಅಮರಾವತಿಯಲ್ಲಿ ಮಾತನಾಡಿದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಅಗತ್ಯವಾಗಿರುವ 50 ಮತಗಳನ್ನು ಸೋಮವಾರದ ಒಳಗಾಗಿ ಪಡೆದುಕೊಳ್ಳುತ್ತೇವೆ. ಬೇರೆ ಬೇರೆ ಪಕ್ಷಗಳ ನಾಯಕರನ್ನು ಅದಕ್ಕಾಗಿ ಸಂಪರ್ಕಿಸುವುದಾಗಿ ನಾಯ್ಡು ಹೇಳಿದ್ದಾರೆ. ಆಂಧ್ರಪ್ರದೇಶಕ್ಕೆ ಅನ್ಯಾಯ ಉಂಟಾಗಲು ಪ್ರಧಾನಿ ನರೇಂದ್ರ ಮೋದಿಯವರೇ ಕಾರಣ ಎಂದು ಅವರು ದೂರಿದ್ದಾರೆ.

ಕಾಂಗ್ರೆಸ್‌, ಎಡಪಕ್ಷಗಳ ಬೆಂಬಲ: ಟಿಡಿಪಿಯ ಅವಿಶ್ವಾಸ ಗೊತ್ತುವಳಿಗೆ ಕಾಂಗ್ರೆಸ್‌, ಸಿಪಿಐ ಸಹಿತ ವಿಪಕ್ಷಗಳು ಬೆಂಬಲ ಘೋಷಿಸಿವೆ. ಒಟ್ಟು 124 ಸದಸ್ಯರ ಬೆಂಬಲವಿದೆ ಎಂದು ಟಿಡಿಪಿ ಹೇಳಿಕೊಂಡಿದೆ .

ಶಿವಸೇನೆ, ಟಿಆರ್‌ಎಸ್‌ ಬೆಂಬಲವಿಲ್ಲ: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ಟಿಡಿಪಿ ಮಂಡಿಸಿರುವ ಅವಿಶ್ವಾಸ ಗೊತ್ತುವಳಿಗೆ ಬೆಂಬಲ ನೀಡುವುದಿಲ್ಲ ಎಂದು ಶಿವಸೇನೆ ಹೇಳಿದೆ. ಹೈದರಾಬಾದ್‌ನಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಕೇಂದ್ರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಗೆ ಟಿಆರ್‌ಎಸ್‌ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಹೇಗಿದೆ ಸಂಖ್ಯಾಬಲ?: ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದರೂ ಅದಕ್ಕೆ ಸೋಲಾಗುವುದು ಖಚಿತ. ಏಕೆಂದರೆ ಬಿಜೆಪಿಯೇ 274 ಸದಸ್ಯ ಬಲವನ್ನು ಹೊಂದಿದೆ. ಜತೆಗೆ ಶಿವಸೇನೆ (18), ಎಲ್‌ಜೆಪಿ (6), ಅಕಾಲಿ ದಳ (4), ಆರ್‌ಎಲ್‌ಎಸ್‌ಪಿ (3), ಅಪ್ನಾದಳ (2) ಇದರ ಜತೆಗೆ ಎಐಎನ್‌ಆರ್‌ಸಿ, ಜೆಕೆಪಿಡಿಪಿ, ಎನ್‌ಪಿಪಿ, ಪಿಎಂಕೆ, ಎಸ್‌ಡಿಎಫ್, ಸ್ವಾಭಿಮಾನಿ ಪಕ್ಷ ತಲಾ 1 ಸ್ಥಾನ ಹೊಂದಿವೆ.

Advertisement

ಹತ್ತನೇ ದಿನವೂ ನಡೆಯದ ಕಲಾಪ 
ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸತತ ಹತ್ತನೇ ದಿನವಾದ ಶುಕ್ರವಾರವೂ ಕಲಾಪ ನಡೆಯಲು ವಿಪಕ್ಷಗಳು ಅಡ್ಡಿ ಮಾಡಿವೆ. ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಗದ್ದಲ ಎಬ್ಬಿಸಿದವು. ಲೋಕಸಭೆಯಲ್ಲಿ ಕಲಾಪ ಆರಂಭದಲ್ಲಿ ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು. ಅನಂತರ ಅದನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಸೋಮವಾರಕ್ಕೆ ಮುಂದೂಡಿದರು.  ಇನ್ನು ರಾಜ್ಯಸಭೆಯಲ್ಲಿ ಕಲಾಪಕ್ಕೆ ಪದೇ ಪದೆ ಅಡ್ಡಿಯಾಗುವುದಕ್ಕೆ ಸಭಾಪತಿ ಎಂ. ವೆಂಕಯ್ಯ ನಾಯ್ಡು ಆತಂಕ ವ್ಯಕ್ತಪಡಿಸಿದರು. ಅಪರಾಹ್ನ 2.30ರ ವರೆಗೆ ಕಲಾಪ ಮುಂದೂಡಿದರೂ ಅನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರದೆ ಇದ್ದುದರಿಂದ ಸೋಮವಾರಕ್ಕೆ ಮುಂದೂಡಿದರು.

ಸರಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ಗೊತ್ತುವಳಿಗೆ ಕಾಂಗ್ರೆಸ್‌ ಬೆಂಬಲ ಇದೆ. ಆಂಧ್ರದ ಎರಡು ಪ್ರಮುಖ ಪಕ್ಷಗಳು ರಾಜಕೀಯ ಕಾರಣ ಗಳನ್ನು ಮೀರಿ ಒಂದಾಗಿ ಧ್ವನಿಯೆತ್ತಿವೆ. ಇದನ್ನು ಕಾಂಗ್ರೆಸ್‌ ಬೆಂಬಲಿಸುತ್ತದೆ.
ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ಪ್ರಧಾನಿ ಮೋದಿ ಅವರ ಮೇಲೆ ಇಡೀ ದೇಶವೇ ವಿಶ್ವಾಸವಿಟ್ಟು ಬೆಂಬಲಿಸುತ್ತಿದೆ. ಮಿತ್ರ ಪಕ್ಷವೊಂದು ಹೊರ ನಡೆ ದಿದ್ದರಿಂದ ಸರಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿ ಎಲ್ಲವನ್ನೂ ಎದುರಿಸಲು ಸರ್ವಸನ್ನದ್ಧವಾಗಿದೆ.
ಅನಂತ್‌ ಕುಮಾರ್‌,  ಸಂಸದೀಯ ವ್ಯವಹಾರಗಳ ಖಾತೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next