ವಿಶಾಖಪಟ್ಟಣ : ತಡವಾಗಿ ಬಂದ ಕಾರಣಕ್ಕೆ ಬೋರ್ಡಿಂಗ್ ಪಾಸ್ ನಿರಾಕರಿಸಲ್ಪಟ್ಟು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಸಿಬಂದಿಗಳಿಗೆ ಜಗಳವಾಡಿ ಆರು ವಿಮಾನಯಾನ ಸಂಸ್ಥೆಗಳಿಂದ ಹಾರಾಟ ನಿಷೇಧಕ್ಕೆ ಗುರಿಯಾಗಿರುವ ತೆಲುಗು ದೇಶಂ ಪಕ್ಷದ ಸಂಸದ ಜೆ ಸಿ ದಿವಾಕರ ರೆಡ್ಡಿ, ತನ್ನ ವರ್ತನೆಗೆ ತಾನು ಕ್ಷಮೆ ಯಾಚಿಸುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ದಿವಾಕರ ರೆಡ್ಡಿ ತೋರಿದ ದುರ್ವರ್ತನೆಯನ್ನು ಅನುಸರಿಸಿ ಸ್ಪೈಸ್ ಜೆಟ್, ಗೋ ಏರ್, ಜೆಟ್ ಏರ್ ವೇಸ್, ವಿಸ್ತಾರಾ ಏರ್ ಲೈನ್ಸ್, ಇಂಡಿಗೋ ಮತ್ತು ಏರಿಂಡಿಯಾ ವಿಮಾನ ಯಾನ ಸಂಸ್ಥೆಗಳು ರೆಡ್ಡಿಯನ್ನು ಹಾರಾಟ ನಿಷೇಧ ಪಟ್ಟಿಗೆ ಸೇರಿಸಿವೆ.
ದಿವಾಕರ ರೆಡ್ಡಿ ವಿರುದ್ಧ ಶಿಸ್ತು ಕ್ರಮವನ್ನು ಆಗ್ರಹಿಸಿ ಇಂಡಿಗೋ ಏರ್ ಲೈನ್ಸ್ ಭಾರತೀಯ ವಾಯು ಯಾನ ಸಂಸ್ಥೆಗಳ ಒಕ್ಕೂಟವನ್ನು ಸಂಪರ್ಕಿಸಿತ್ತು. ಮಾತ್ರವಲ್ಲದೆ ಜೆಟ್ ಏರ್ ವೇಸ್, ಗೋ ಏರ್ ಲೈನ್ಸ್, ಸ್ಪೈಸ್ ಜೆಟ್ ಮತ್ತು ಒಕ್ಕೂಟದ ಇತರ ಸದಸ್ಯ ವಾಯು ಯಾನ ಸಂಸ್ಥೆಗಳು ಕೂಡ ರೆಡ್ಡಿ ವಿರುದ್ಧ ಹಾರಾಟ ನಿಷೇಧ ಕ್ರಮಕ್ಕೆ ಮುಂದಾಗಬೇಕೆಂದು ಕೋರಿತ್ತು.
‘ನಾನು ವಿಶಾಖಪಟ್ಟಣ ವಿಮಾನ ನಿಲ್ದಾಣದಲ್ಲಿ ಯಾವುದೇ ರೀತಿಯ ಗಲಾಟೆ ಮಾಡಿಲ್ಲ; ಇಂಡಿಗೋ ಏರ್ ವೇಸ್ ಸಿಬಂದಿ ವಿರುದ್ಧ ಜಗಳವಾಡಿಲ್ಲ; ಯಾರ ವಿರುದ್ಧವೂ ಯಾವುದೇ ರೀತಿಯ ದುರ್ವರ್ತನೆ ತೋರಿಲ್ಲ; ಹಾಗಾಗಿ ನಾನು ಯಾರಲ್ಲೂ ಕ್ಷಮೆ ಯಾಚಿಸುವುದಿಲ್ಲ’ ಎಂದು ಸಂಸದ ದಿವಾಕರ ರೆಡ್ಡಿ ಹೇಳಿದ್ದಾರೆ.
ನಾನು ವಿಶಾಖಪಟ್ಟಣ ವಿಮಾನ ನಿಲ್ದಾಣ ತಲುಪಿದಾಗ ಅಲ್ಲಿ ಕೌಂಟರ್ ಹೊರಗೆ ಅನೇಕ ಜನರು ನಿಂತಿದ್ದರು; ಅವರ್ಯಾರಿಗೂ ಬೋರ್ಡಿಂಗ್ ಪಾಸ್ ಕೊಟ್ಟಿರಲಿಲ್ಲ ಎಂದು ರೆಡ್ಡಿ ಹೇಳಿದ್ದಾರೆ.