Advertisement

ಉದ್ಯೋಗ ಕಡಿತ ಇಲ್ಲ; ಸಂಕಷ್ಟದಲ್ಲಿರುವವರಿಗೆ ನೆರವು

07:48 PM Feb 19, 2023 | Team Udayavani |

ಮುಂಬೈ:ಜಗತ್ತಿನ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಕಡಿತ ಮಾಡುತ್ತಿರುವಂತೆಯೇ, ದೇಶದ ಪ್ರಮುಖ ಐ.ಟಿ.ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ಅಂಥ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಕಟಿಸಿದೆ.

Advertisement

ಜತೆಗೆ ಈಗಾಗಲೇ ಉದ್ಯೋಗ ಕಳೆದುಕೊಂಡವರಿಗೆ ನೆರವು ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿರುವುದಾಗಿ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್‌ ಲಕ್ಕಡ್‌ ಹೇಳಿದ್ದಾರೆ.

“ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ನಮ್ಮ ಸಂಸ್ಥೆ ಉದ್ಯೋಗ ಕಡಿತ ಮಾಡುವ ವಿಚಾರದಲ್ಲಿ ನಂಬಿಕೆ ಹೊಂದಿಲ್ಲ. ದೀರ್ಘ‌ ಕಾಲಿಕವಾಗಿ ನಮ್ಮ ಉದ್ಯೋಗಿಗಳ ಕೌಶಲ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ. ಉದ್ಯೋಗ ಕಡಿತ ಮಾಡುತ್ತಿರುವ ಕಂಪನಿಗಳು ಅವುಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿವೆ. ಆದರೆ, ಟಿಸಿಎಸ್‌ಗೆ ಒಬ್ಬ ಕೆಲಸಕ್ಕೆ ಸೇರಿದ ಬಳಿಕ ನಿಗದಿತ ವ್ಯಕ್ತಿಯನ್ನು ಪರಿಪೂರ್ಣವಾಗಿ, ವೃತ್ತಿಪರವಾಗಿ ರೂಪಿಸುವುದು ಕಂಪನಿಯ ಹೊಣೆಗಾರಿಕೆಯಾಗಿದೆ ಎಂದರು.

ಕೌಶಲ್ಯ ತರಬೇತಿ:
ಉದ್ಯೋಗಿಗಳಲ್ಲಿ ಅಗತ್ಯ ಇರುವ ಕೌಶಲ್ಯ ಕಡಿಮೆ ಇದೆ ಎಂದಾದರೆ, ಅವರಿಗೆ ಸೂಕ್ತ ಸಮಯದ ಅವಕಾಶ ನೀಡಿ ತರಬೇತಿ ನೀಡಲಾಗುತ್ತದೆ ಎಂದರು. ಸದ್ಯ ಕಂಪನಿಯಲ್ಲಿ ಸರಿ ಸುಮಾರು ಆರು ಲಕ್ಷ ಮಂದಿ ಕೆಲಸದಲ್ಲಿ ಇದ್ದಾರೆ. ಹಿಂದಿನ ವರ್ಷಗಳಂತೆಯೇ ಶೀಘ್ರದಲ್ಲಿಯೇ ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡಲಾಗುತ್ತದೆ ಎಂದರು.

ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಸ್ಟಾರ್ಟ್‌ ಅಪ್‌ಗ್ಳಲ್ಲಿ ಕೆಲಸ ಮಾಡಿಕೊಂಡಿದ್ದವರಿಗೆ ಉದ್ಯೋಗ ನಷ್ಟವಾಗಿದೆ. ಅಂಥವರಿಗೆ ಸೂಕ್ತ ರೀತಿಯಲ್ಲಿ ನೆರವು ನೀಡುವುದರ ಬಗ್ಗೆ ಕಂಪನಿ ಚಿಂತನೆ ನಡೆಸುತ್ತಿದೆ ಎಂದು ಮಿಲಿಂದ್‌ ಬಹಿರಂಗಪಡಿಸಿದ್ದಾರೆ.

Advertisement

ಕಠಿಣ ಕ್ರಮ ನಿಶ್ಚಿತ:
ಟಿಸಿಎಸ್‌ನಲ್ಲಿ ಕೆಲಸ ಮಾಡಿಕೊಂಡು, ಇತರ ಕಂಪನಿಗಳ ಪ್ರಾಜೆಕ್ಟ್ಗಳಿಗೆ ಕೆಲಸ ಮಾಡುವವರ (ಮೂನ್‌ಲೈಟ್‌) ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸದ್ಯ ಕಂಪನಿಯಲ್ಲಿ ಇರುವವರ ಪೈಕಿ ಶೇ.40 ಮಂದಿ ಕಚೇರಿಯಿಂದಲೇ ಕೆಲಸ ಮಾಡುತ್ತಾರೆ. ಶೇ.60 ಮಂದಿ ವಾರಕ್ಕೆ ಎರಡು ಬಾರಿ ಕಚೇರಿಗಳಿಗೆ ಬಂದು ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಅದರಂತೆ ಅವರು, ನಡೆದುಕೊಳ್ಳುತ್ತಿದ್ದಾರೆ ಎಂದು ಲಕ್ಕಡ್‌ ಹೇಳಿದರು.

ಉದ್ಯೋಗ ಕಳೆದುಕೊಂಡವರಿಗೆ ನೆರವು
ಇದೇ ವೇಳೆ, ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡ ಭಾರತೀಯರಿಗೆ ನೆರವಾಗುವ ನಿಟ್ಟಿನಲ್ಲಿ ಟಿಸಿಎಸ್‌ ಚಿಂತನೆ ನಡೆಸಿದೆ. ಅವರಿಗೆ ಉದ್ಯೋಗ ನೀಡುವ ಸಾಧ್ಯತೆಯನ್ನೂ ಮಿಲಿಂದ್‌ ತಳ್ಳಿಹಾಕಲಿಲ್ಲ. ಸದ್ಯ ಅಮೆರಿಕದ ಹಲವು ನಗರಗಳಲ್ಲಿ ಇರುವ ಕಚೇರಿಗಳಲ್ಲಿ ಶೇ.70 ಆ ದೇಶದವರೇ ಆಗಿದ್ದಾರೆ. ಆ ಪ್ರಮಾಣವನ್ನು ಶೇ.50ಕ್ಕೆ ಇಳಿಸಿ, ಭಾರತದಲ್ಲಿ ಇರುವ ಸಿಬ್ಬಂದಿಗೆ ಜಗತ್ತಿನ ಉದ್ಯೋಗದ ಅನುಭವದ ಅವಕಾಶಗಳನ್ನು ನೀಡಲೂ ಮುಂದಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next