ಹೊಸದಿಲ್ಲಿ : ಭಾರತದ ಅತೀ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆಯಾಗಿರುವ ಟಿಸಿಎಸ್ 16,000 ಕೋಟಿ ರೂ.ಗಳ ಶೇರು ಮರು ಖರೀದಿ ಯೋಜನೆಗೆ ಇಂದು ಸೋಮವಾರ ಅನುಮೋದನೆ ನೀಡಿದೆ.
ಈ ಪ್ರಸ್ತಾವಿತ ಶೇರು ಮರು ಖರೀದಿಯು ತಲಾ 2,850 ರೂ.ಗಳ ಈಕ್ವಿಟಿ ಶೇರುಗಳ ದರದಲ್ಲಿ ಕಂಪೆನಿಯ ಒಟ್ಟು ಪಾವತಿ ಶೇರು ಬಂಡವಾಳದ ಶೇ.2.85 ಪ್ರಮಾಣವನ್ನು ಪ್ರತಿನಿಧಿಸುತ್ತದೆ ಎಂದು ಟಾಟಾ ಗ್ರೂಪ ಕಂಪೆನಿಯು ತಿಳಿಸಿದೆ.
ಟಿಸಿಎಸ್ ಕಂಪೆನಿಯು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಗೆ ಸಲ್ಲಿಸಿರುವ ದಾಖಲೆ ಪತ್ರಗಳಲ್ಲಿ ಒಟ್ಟು 16,000 ಕೋಟಿ ರೂ. ಮೀರದ, 5.61 ಕೋಟಿ ಈಕ್ವಿಟಿ ಶೇರುಗಳ ಮರು ಖರೀದಿಗೆ ಕಂಪೆನಿಯ ನಿರ್ದೇಶಕರ ಮಂಡಳಿಯು ಅನುಮೋದನೆ ನೀಡಿರುವುದಾಗಿ ತಿಳಿಸಿದೆ.
ಸ್ಟಾಕ್ ಎಕ್ಸ್‌ಚೇಂಜ್ ಪ್ರಕ್ರಿಯೆಯ ಮೂಲಕ ಟೆಂಡರ್ ಕೊಡುಗೆ ರೂಪದಲ್ಲಿ ಕಂಪೆನಿಯು ತನ್ನ ಶೇರುದಾರರಿಂದ ಆಂಶಿಕ ನೆಲೆಯಲ್ಲಿ ಶೇರುಗಳನ್ನು ಖರೀದಿಸಲಿದೆ ಎಂದು ದಾಖಲೆ ಪತ್ರ ಹೇಳಿದೆ.
ಶೇರು ಮರು ಖರೀದಿಯು ಯೋಜನೆಯು ಶೇರುದಾರರಿಂದ ಅಂಚೆ ಮತಪತ್ರಗಳ ಮೂಲಕ ವಿಶೇಷ ಠರಾವಿಗೆ ಅನುಮೋದನೆ ಪಡೆಯುವುದಕ್ಕೆ ಒಳಪಟ್ಟಿರುತ್ತದೆ. ಶೇರು ಮರು ಖರೀದಿ ನೀತಿ – ನಿಯಮಗಳಿಗೆ ಅನುಗುಣವಾಗಿ ಕಾಲಕ್ರಮದಲ್ಲಿ ವೇಳಾ ಪಟ್ಟಿ, ಪ್ರಕ್ರಿಯೆಗಳ ವಿವರಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕಂಪೆನಿ ತಿಳಿಸಿದೆ.