Advertisement

ಉಭಯ ಜಿಲ್ಲೆಗಳ 1,200 ಬಸ್‌ ಮಾಲಕರಿಗೆ ತೆರಿಗೆ ಬಿಸಿ

01:02 PM Apr 06, 2020 | Sriram |

ವಿಶೇಷ ವರದಿ-ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು 1,500 ಖಾಸಗಿ ಮತ್ತು ಸಿಟಿಬಸ್‌ಗಳು
ಸಂಚರಿಸುತ್ತಿದ್ದು, ಲಾಕ್‌ಡೌನ್‌ ಹಿನ್ನೆಲೆ ಯಲ್ಲಿ ಕಳೆದ ಮೂರು ವಾರಗಳಿಂದ ಯಾವುದೂ ರಸ್ತೆಗಿಳಿದಿಲ್ಲ. ಬಸ್‌ ಮಾಲಕರು ಪ್ರತಿ ಮೂರು ತಿಂಗಳಿಗೊಮ್ಮೆ ಕಟ್ಟಬೇಕಾದ ರಸ್ತೆ ತೆರಿಗೆಯಲ್ಲಿ ರಾಜ್ಯ ಸರಕಾರವು ವಿನಾಯಿತಿ ನೀಡದೆ ವಿಸ್ತರಣೆ ಮಾಡಲಾಗಿದ್ದು, ಜೂನ್‌ನಲ್ಲಿ ಒಟ್ಟು ಆರು ತಿಂಗಳ ರಸ್ತೆ ತೆರಿಗೆ ಕಟ್ಟಬೇಕಾದ ಅನಿವಾರ್ಯತೆಯಲ್ಲಿ ಮಾಲಕರಿದ್ದಾರೆ.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಸ್‌ ಮಾಲಕರು ಎ. 15ರಂದು ಕಟ್ಟಬೇಕಾದ ರಸ್ತೆ ತೆರಿಗೆಯನ್ನು ಜೂ. 1ಕ್ಕೆ ವಿಸ್ತರಿಸಲಾಗಿದೆ. ಒಂದಡೆ ಆದಾಯ ಇಲ್ಲದಿರುವಾಗ ಒಂದೇ ಬಾರಿ ಆರು ತಿಂಗಳ ತೆರಿಗೆ ಕಟ್ಟುವುದು ಮಾಲಕರಿಗೆ ಭಾರ ಎನಿಸುತ್ತಿದೆ. ಮಂಗಳೂರಿನಲ್ಲಿ ಸುಮಾರು 360 ಸಿಟಿ ಬಸ್‌ಗಳಿವೆ. ಸುಮಾರು 700 ಸರ್ವಿಸ್‌ ಬಸ್‌ಗಳು, 70ರಷ್ಟು ಒಪ್ಪಂದದ ಮೇರೆಗಿನ ಸಾರಿಗೆ ಮತ್ತು 150ಕ್ಕೂ ಮಿಕ್ಕಿ ಟೂರಿಸ್ಟ್‌ ಬಸ್‌ಗಳು ಸಂಚರಿಸುತ್ತವೆ.

ಸಿಟಿ ಬಸ್‌ಗಳಿಗೆ 23,000 ರೂ. ರಸ್ತೆ ತೆರಿಗೆ, ಗ್ರಾಮಾಂತರ ಸಂಚರಿಸುವ ಬಸ್‌ಗಳಿಗೆ 42,000 ರೂ., ಸರ್ವೀಸ್‌ ಬಸ್‌ಗಳಿಗೆ 49,000 ರೂ., ಒಪ್ಪಂದದ ಮೇರೆಗಿನಬಸ್‌ಗಳಿಗೆ 80,000 ರೂ., ಅದೇ ರೀತಿ ಬೆಂಗಳೂರು ಸೇರಿದಂತೆ ಇತರ ದೂರದ ಪ್ರದೇಶಗಳಿಗೆ ತೆರಳುವ ಬಸ್‌ಗಳಿಗೆ ಸುಮಾರು 1 ಲಕ್ಷ ರೂ.ಗೂ ಮಿಕ್ಕಿ ಮೂರು ತಿಂಗಳ ರಸ್ತೆ ತೆರಿಗೆಯನ್ನು ಒಮ್ಮೆಲೇ ಕಟ್ಟಬೇಕಾಗುತ್ತದೆ.

ನಿರ್ವಹಣೆ, ಪ್ರಯಾಣಿಕರ ಕೊರತೆ
ಮಂಗಳೂರಿನಲ್ಲಿ ಸುಮಾರು ಒಂದು ತಿಂಗಳಿನಿಂದ ಬಸ್‌ಗಳು ಸಮರ್ಪಕವಾಗಿ ಕಾರ್ಯಾಚರಣೆ ನಡೆಸಲಿಲ್ಲ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾಲಕರ ಮನೆಯಲ್ಲಿ ನಿಲ್ಲಿಸಿರುವ ಬಸ್‌ಗಳನ್ನು ಸ್ಟಾರ್ಟ್‌ ಕೂಡ ಮಾಡುವವರಿಲ್ಲ. ಲಾಕ್‌ಡೌನ್‌ ಅವಧಿ ಪೂರ್ಣಗೊಂಡ ಬಳಿಕ ಬಸ್‌ ರಸ್ತೆಗಿಳಿಯುವ ವೇಳೆ ಹೆಚ್ಚಿನ ಬಸ್‌ಗಳಲ್ಲಿ ನಿರ್ವಹಣೆಯ ತೊಂದರೆ ಉಂಟಾಗಬಹುದು. ಅದಕ್ಕೂ ಸಾವಿರಾರು ರೂ. ವ್ಯಯಿಸಬೇಕು. ಲಾಕ್‌ಡೌನ್‌ ಅಂತ್ಯಗೊಂಡರೂ ಕೆಲವು ದಿನಗಳವರೆಗೆ ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇರಬಹುದು. ಹೀಗಿರುವಾಗ ರಸ್ತೆ ತೆರಿಗೆಯಲ್ಲೂ ವಿನಾಯಿತಿ ನೀಡದೇ ಇದ್ದರೆ ನಾವು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವುದು ನಿಶ್ಚಿತ ಎಂದು ಮಾಲಕರು ಭೀತಿ ವ್ಯಕ್ತಪಡಿಸುತ್ತಿದ್ದಾರೆ.

ಚಾಲಕ-ನಿರ್ವಾಹಕರ ನೆರವಿಗೆ ಮನವಿ
“ಉಭಯ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುವ ಕೆಲವೊಂದು ಬಸ್‌ಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ದಿನದ ಸಂಬಳಕ್ಕೆ ದುಡಿಯುತ್ತಿದ್ದಾರೆ. ಕಳೆದ ಮೂರು ವಾರಗಳಿಂದ ಖಾಸಗಿ ಬಸ್‌ ಸಂಚಾರ ಸ್ಥಗಿತಗೊಂಡಿರುವುದರಿಂದ ಅದನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳ ಬದುಕು ದುಸ್ತರವಾಗಿದೆ. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರ ವಾಗುವಂತೆ ಬಸ್‌ ಮಾಲಕರ ಸಂಘದಿಂದ ಬಸ್‌ಗಳ ಮಾಲಕರಿಗೆ ಈಗಾಗಲೇ ಮನವಿ ಮಾಡಲಾಗಿದೆ’ ಎನ್ನುತ್ತಾರೆ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ.

Advertisement

ಬಸ್‌ ನಿಂತರೂ ಓಡಿಸಿದರೂ; ಕಲೆಕ್ಷನ್‌ ಆದರೂ ಆಗದಿದ್ದರೂ ನಾವು ತೆರಿಗೆ ಕಟ್ಟಲೇಬೇಕು. ಕೇರಳದ ಸಾರಿಗೆ ಇಲಾಖೆ ಶೇ. 20 ವಿನಾಯಿತಿ ನೀಡಿದೆ. ಅದರಂತೆ ನಮ್ಮಲ್ಲೂ ಖಾಸಗಿ ಬಸ್‌, ಟ್ಯಾಕ್ಸಿಗಳಿಗೂ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು.
– ಕುಯಿಲಾಡಿ ಸುರೇಶ ನಾಯಕ್‌
ಅಧ್ಯಕ್ಷ ಸಿಟಿ ಬಸ್‌ ಮಾಲಕರ ಸಂಘ, ಉಡುಪಿ

ಆರು ತಿಂಗಳ ತೆರಿಗೆ ಕಟ್ಟಬೇಕು
ಬಸ್‌ಗಳು ರಸ್ತೆಗಿಳಿಯದ ಕಾರಣ ಮಾಲಕರಿಗೆ ಆದಾಯ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಪ್ರತೀ ಮೂರು ತಿಂಗಳಿಗೊಮ್ಮೆ ಬಸ್‌ ಮಾಲಕರು ಕಟ್ಟುವಂತಹ ರಸ್ತೆ ತೆರಿಗೆಯನ್ನು ಜೂನ್‌ ತಿಂಗಳವರೆಗೆ ವಿಸ್ತರಣೆ ಮಾಡಲಾಗಿದೆ. ಮೂರು ತಿಂಗಳ ಬಳಿಕ ಆರು ತಿಂಗಳ ತೆರಿಗೆ ಒಟ್ಟಿಗೆ ಕಟ್ಟಬೇಕು.
– ರಾಮಕೃಷ್ಣ ರೈ,
ಮಂಗಳೂರು ಆರ್‌ಟಿಒ

ಮನವಿ ಮಾಡಲಾಗಿದೆ
ಬಸ್‌ ಮಾಲಕರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಒಂದೆಡೆ ಡಿಸೇಲ್‌ ಬೆಲೆ ಏರಿಕೆಯಾಗಿದ್ದು, ಅನೇಕ ವರ್ಷಗಳಿಂದ ಬಸ್‌ ಪ್ರಯಾಣ ದರ ಕೂಡ ಪರಿಷ್ಕರಣೆಯಾಗಿಲ್ಲ. ಲಾಕ್‌ಡೌನ್‌ನಿಂದಾಗಿ ಯಾವುದೇ ಖಾಸಗಿ ಬಸ್‌ಗಳು ರಸ್ತೆಗಿಳಿಯುತ್ತಿಲ್ಲ. ಇದೀಗ ಬಸ್‌ಗಳ ರಸ್ತೆ ತೆರಿಗೆಯಲ್ಲಿಯೂ ಯಾವುದೇ ರೀತಿಯ ವಿನಾಯಿತಿ ನೀಡಿಲ್ಲ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ.
– ರಾಜವರ್ಮ ಬಲ್ಲಾಳ್‌, ರಾಜ್ಯ ಬಸ್‌ ಮಾಲಕರ ಒಕ್ಕೂಟದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next