Advertisement

ತೆರಿಗೆ; ನಾವು ಮಾಡುವ 6 ತಪ್ಪುಗಳು 

05:50 PM Aug 28, 2017 | Harsha Rao |

ರಿಟರ್ನಿನಲ್ಲಿ ಕೈಬಿಡುವುದು
ಇದು ಬಹುತೇಕರು ಮಾಡುವ ತಪ್ಪು. ಪಿಪಿಎಫ್ ಸೇರಿದಂತೆ ಇನ್ನಿತರೆ ಟ್ಯಾಕ್ಸ್‌ ಫ್ರೀ ಬಾಂಡ್‌ ಗಳ ಹೂಡಿಕೆಯಿಂದ ಬಂದ ವರಮಾನವನ್ನು ಅನೇಕರು ವರ್ಷಾಂತ್ಯದಲ್ಲಿ ತಮ್ಮ ತೆರಿಗೆ ರಿಟರ್ನಿನಲ್ಲಿ ತೋರಿಸುವುದಿಲ್ಲ. ಹೇಗಿದ್ದರೂ ಅದಕ್ಕೆ ತೆರಿಗೆ ಇಲ್ಲವಲ್ಲ ಎಂದು ಕೈಬಿಡುತ್ತಾರೆ. ಆದರೆ ಇದು ಸರಿಯಲ್ಲ. ತೆರಿಗೆ ವಿನಾಯಿತಿ ಇರುವ ಬಾಬತ್ತಾದರೂ ಸರಿ, ಅದನ್ನು ಒಟ್ಟು ವರಮಾನದಲ್ಲಿ ತೋರಿಸಿ, ನಂತರ ವ್ಯವಕಲನ ಗಳ ಪಟ್ಟಿಯಲ್ಲಿ ಕಳೆದು ಬಿಡುವುದು ಸಮರ್ಪಕವಾದ ಕ್ರಮ. ಇದು ಮಾಡಲೇಬೇಕಾದ ಕೆಲಸ ಕೂಡ. 

Advertisement

ಮನೆಯವರ ಹೆಸರಲ್ಲಿ ಹೂಡಿದ್ದರೆ
 ತಮ್ಮ ವರಮಾನದಲ್ಲಿ ಒಂದಷ್ಟು ಭಾಗವನ್ನು ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಎಫ್.ಡಿ. ಅಥವಾ ಬೇರಾವುದೇ ಹೂಡಿಕೆಗಳನ್ನು ಮಾಡುವುದು ಎಲ್ಲರಿಗೂ ಒಂಥರಾ ಅಭ್ಯಾಸ.  ಅವುಗಳಿಂದ ಬರುವ ಬಡ್ಡಿ ಅಥವಾ ಇತರೆ ವರಮಾನ ಎಷ್ಟೇ ಇರಲಿ ಅದು ಯಜಮಾನನ ತೆರಿಗೆ ರಿಟರ್ನಿನಲ್ಲಿ ಪ್ರತಿಫ‌ಲಿತವಾಗಬೇಕು. ಈ ಸಂಗತಿಯನ್ನು ಯಾರಿಗೂ ತಿಳಿಸಿಯೇ ಇರೋಲ್ಲ. 

 ಎಷ್ಟೋ ಮಂದಿ, ಅದು ನನ್ನ ಹೆಂಡತಿ ಹೆಸರಿನಲ್ಲಿದೆ, ಅವಳು ರಿಟರ್ನ್ ಸಲ್ಲಿಸಲು ಬೇಕಾದಷ್ಟು ವರಮಾನ ಹೊಂದಿಲ್ಲ, ಆದ ಕಾರಣ ಅದನ್ನು ತೋರಿಸಬೇಕಿಲ್ಲ ಅನ್ನೋರು ಇದ್ದಾರೆ. ಆದರೆ ಇದು ಸರಿಯಾದ ಕ್ರಮವಲ್ಲ.   ಯಜಮಾನ ತೆರಿಗೆದಾರನಾಗಿದ್ದು, ಆತನ ಪತ್ನಿ ಮತ್ತು ಮಕ್ಕಳ ಹೆಸರಲ್ಲಿ ಆತ ಮಾಡಿರಬಹುದಾದ ಹೂಡಿಕೆಯಿಂದ ಬರುವ ಆದಾಯವನ್ನು ಯಜಮಾನ ತನ್ನ ತೆರಿಗೆ ರಿಟರ್ನಿನಲ್ಲಿ ಘೋಷಿಸಿಸತಕ್ಕದ್ದು ಮತ್ತು ಅದಕ್ಕೆ ತಕ್ಕುದಾದ ತೆರಿಗೆ ಪಾವತಿಸತಕ್ಕದ್ದು.  ಇನ್ನೊಂದು ವಿಚಾರ. ಗರಿಷ್ಠ ಎರಡು ಮಕ್ಕಳಿಗೆ ವಾರ್ಷಿಕ ತಲಾ ರೂ:1500 ವಿನಾಯಿತಿ ಕ್ಲೈಮು ಮಾಡುವುದಕ್ಕೂ ತೆರಿಗೆದಾರನಿಗೆ ಅವಕಾಶವಿದೆ. 

ಫೈಲು ಮಾಡದೇ ಇರುವುದು
ವಾರ್ಷಿಕ ಎರಡೂವರೆ ಲಕ್ಷ ರೂಪಾಯಿ ಆದಾಯವನ್ನು ಮೀರುವ, ಅರವತ್ತು ವರುಷದ ಒಳಗಿನ ವ್ಯಕ್ತಿ ತೆರಿಗೆ ರಿಟರ್ನ್ ಸಲ್ಲಿಸಲೇಬೇಕು. ಹಿರಿಯನಾಗರಿಕರಾದರೆ ಅದರ ಮಿತಿ ಮೂರುಲಕ್ಷ ರೂಪಾಯಿ. ನನ್ನ ವರಮಾನ ಮೂರು ಲಕ್ಷವಿದೆ, ಅದಕ್ಕೆ ಅನ್ವಯವಾಗುವ ತೆರಿಗೆಯನ್ನು ಉದ್ಯೋಗದಾತರು ಕಟಾಯಿಸಿದ್ದಾರೆ. ನಾನು ರಿಟರ್ನ್ ಸಲ್ಲಿಸಬೇಕಿಲ್ಲ ಎಂದು ಭಾವಿಸಿ ಸುಮ್ಮನಿರುವವರ ಸಂಖ್ಯೆ ದೊಡ್ಡದಿದೆ. ಇದು ತಪ್ಪು. ಉದಾಹರಣೆಗೆ ನಿಮ್ಮ ವಾರ್ಷಿಕ ವರಮಾನ ಮೂರೂವರೆ ಲಕ್ಷ ರೂಪಾಯಿಗಳಾಗಿದ್ದಲ್ಲಿ, ವಿನಾಯಿತಿಗೆ ಒಳಪಡುವ ವರಮಾನ ಎರಡೂವರೆ ಲಕ್ಷ. ಇದನ್ನು ಮೀರುವ ಒಂದು ಲಕ್ಷವನ್ನು ನೀವು 80ಸಿ ಅಡಿಯಲ್ಲಿ ಬರುವ ಹೂಡಿಕೆಗಳಲ್ಲಿ ತೊಡಗಿಸಿದರೆ ನಿಮಗೆ ತೆರಿಗೆ ಹೊರೆ ಬೀಳುವುದಿಲ್ಲ. ನಿಗಿದತ ವಿನಾಯಿತಿ ಮಿತಿಯ ಮೇಲಿರುವ ಎಲ್ಲರೂ ತಮ್ಮ ತೆರಿಗೆ ರಿಟರ್ನ್ ಸಲ್ಲಿಸಿ ಘೋಷಣೆ ಮಾಡುವುದು, ಬಾಕಿ ಇದ್ದರೆ ತೆರಿಗೆ ಪಾವತಿಸುವುದು, ರೀಫ‌ಂಡುಗಳನ್ನು ಪಡೆಯುವುದು ಜಾಣ ನಿರ್ಧಾರ.

ಹಳೇ ಉದ್ಯೋಗ ಮರೆಯೋದು 
 ಈ ಕೆಲಸ ಬಿಟ್ಟು ಬೇರೆ ಕಡೆ ಸೇರಿಕೊಂಡವರಿಗೆ ಇದು ಅನ್ವಯವಾಗುತ್ತದೆ. ಆಗಸ್ಟ್‌ ತಿಂಗಳಲ್ಲಿ ಹೊಸ ಕಂಪೆನಿಯೊಂದಕ್ಕೆ ಸೇರಿಕೊಂಡಿದ್ದಾರೆ ಎಂದಿಟ್ಟುಕೊಳ್ಳಿ. ಆ ಆರ್ಥಿಕ ವರ್ಷದ ಏಪ್ರಿಲ್‌ ನಿಂದ ಜುಲೈ ತನಕದ ಅವಧಿಯಲ್ಲಿ ಹಳೆಯ ಕಂಪೆನಿ ಪಾವತಿಸಿದ್ದ ಸಂಬಳದ ಮೊತ್ತವನ್ನು ವರ್ಷಾಂತ್ಯದಲ್ಲಿ ತೋರಿಸದೇ, ಕೇವಲ ಹೊಸ ಕಂಪೆನಿಯವರು ಕೊಡುವ ನಮೂನೆ-16 ಬಳಸಿಕೊಂಡು ತೆರಿಗೆ ರಿಟರ್ನ್ ಸಲ್ಲಿಸುವವರು ಇದ್ದಾರೆ. ಇದು ಸರಿಯಾದ ಕ್ರಮವಲ್ಲ. ಹಳೆಯ ಕಂಪೆನಿ ಕೊಟ್ಟ ಸಂಬಳ ಅಥವಾ ಫ್ರೀಲ್ಯಾನ್ಸರ್‌ ಆಗಿ ಮಾಡಿದ ದುಡಿಮೆ ಎಲ್ಲವನ್ನೂ ಲೆಕ್ಕಕ್ಕೆ ಒಳಪಡಿಸುವುದು ಒಳಿತು. ಒಂದುವೇಳೆ ತೆರಿಗೆಪಾವತಿಯಲ್ಲಿ ಚ್ಯುತಿ ಮಾಡಿದ್ದು ಇಲಾಖೆ ಗಮನಕ್ಕೆ ಬಂದರೆ ಅದಕ್ಕೆ ಮುಂದೆ ದಂಡಪಾವತಿ ಮಾಡಬೇಕಾಗಬಹುದು. 

Advertisement

ಬಡ್ಡಿ ವರಮಾನ ಘೋಷಿಸಲ್ಲ
ವರಮಾನತೆರಿಗೆ ಕಾಯಿದೆಯ ವಿಧಿ 80 ಟಿ.ಟಿ.ಎ. ಅಡಿಯಲ್ಲಿ ಹೇಳಿರುವಂತೆ ಬ್ಯಾಂಕಿನಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಉಳಿತಾಯ ಖಾತೆಯಲ್ಲಿ ಜಮೆಯಾಗಬಹುದಾದ ಬಡ್ಡಿ ಹತ್ತುಸಾವಿರದ ಒಳಗಿದ್ದರೆ ಅದಕ್ಕೆ ಮಾತ್ರ ವಿನಾಯಿತಿ ಇದೆ. ಇದಕ್ಕೆ ಹೊರತಾಗಿ ಮಿಕ್ಕುಳಿದ ಬಡ್ಡಿ ಆದಾಯವನ್ನು ವರಮಾನ ಎಂದು ಘೋಷಿಸಬೇಕು ಮತ್ತು ಅದು ತೆರಿಗೆಯೋಗ್ಯವಾದದ್ದು.  ಬಹುತೇಕರು ಬ್ಯಾಂಕಿನಲ್ಲಿರುವ ಎಫ್.ಡಿ. ಆರ್‌.ಡಿ ಅಥವಾ ಇನ್ನಾವುದೇ ಬಡ್ಡಿ ದುಡಿಯುವ ಠೇವಣಿಗಳಿದ್ದರೆ ವಾರ್ಷಿಕವಾಗಿ ಅದರಿಂದ ಬರುವ ವರಮಾನವಿದ್ದರೆ ಮತ್ತು ಅದು ಹತ್ತುಸಾವಿರದ ಒಳಗಡೆ ಇದ್ದರೆ ಅದನ್ನು ತೆರಿಗೆ ರಿಟರ್ನ್ನಲ್ಲಿ ಘೋಷಿಸಬೇಕಿಲ್ಲ, ವಿನಾಯಿತಿ ಇದೆ ಎಂದು ಅನೇಕರು ಭಾವಿಸಿದ್ದಾರೆ. ಆದರೆ ಇದು ತಪ್ಪು. ಉಳಿತಾಯ ಖಾತೆಯಲ್ಲಿ ಜಮೆಯಾದ ಬಡ್ಡಿಯನ್ನೂ ವರಮಾನಕ್ಕೆ ಸೇರಿಸಿಕೊಂಡು ನಂತರದಲ್ಲಿ ಅದನ್ನು ಡಿಡಕ್ಷನ್‌ ಅಡಿಯಲ್ಲಿ ಕಳೆಯುವುದು ಉತ್ತಮ. 

ಟಿಡಿಎಸ್‌ ಬಗ್ಗೆ ತಿಳಿಯದೇ ಇರುವುದು
ಸಾಮಾನ್ಯವಾಗಿ ಬ್ಯಾಂಕುಗಳು ನಿಮ್ಮ ಡಿಪಾಜಿಟ್‌ ಗಳ ಮೇಲಿನ ಬಡ್ಡಿಗೆ ಮೂಲದಲ್ಲಿ ಶೇ:10 ಕಡಿತಗೊಳಿಸಿರುತ್ತಾರೆ. ಆದರೆ ಅದುವೇ ಪರಿಪೂರ್ಣ ತೆರಿಗೆ ಎಂದು ಪರಿಗಣಿಸಲಾಗದು. ಏಕೆಂದರೆ ವ್ಯಕ್ತಿಗತವಾಗಿ ಒಬ್ಬ ವ್ಯಕ್ತಿಗೆ ಇರುವ ಆದಾಯದ ಗಾತ್ರಕ್ಕೆ ಅನುಗುಣವಾಗಿ  ಅನ್ವಯವಾಗುವ ತೆರಿಗೆಯ ಶೇಕಡಾವಾರು ನಿಷ್ಪತ್ತಿಯೂ ವ್ಯತ್ಯಯವಾಗುತ್ತದೆ. ಅದು ಶೇ:10ರಿಂದ 30ರ ತನಕವೂ ಇರುತ್ತದೆ. ಹೀಗಿರುವಾಗ ಬ್ಯಾಂಕಿನವರು ಮೂಲದಲ್ಲಿ ಕಡಿತ ಮಾಡಿದ್ದಷ್ಟೇ ತೆರಿಗೆ, ಅದನ್ನು ರಿಟರ್ನ್ನಲ್ಲಿ ಘೋಫಿಸಬೇಕಿಲ್ಲ ಎಂಬುದು ತಪ್ಪು ಕಲ್ಪನೆ. ಅಲ್ಲದೇ ರಿಟರ್ನ್ನಲ್ಲಿ ಘೋಷಿಸಿ, ಬ್ಯಾಂಕಿನವರು ಮೂಲದಲ್ಲಿ ಕಡಿತಗೊಳಿಸಿದ ತೆರಿಗೆಯನ್ನು ರೀಫ‌ಂಡ್‌ ಪಡೆಯುವುದಕ್ಕೂ ಅವಕಾಶವಿರುವಾಗ, ಅವೆಲ್ಲವನ್ನೂ ತೆರಿಗೆ ರಿಟರ್ನಿನಲ್ಲಿ ಸೇರಿಸುವುದು ಸೂಕ್ತ ಮತ್ತು ಜಾಣ ನಿರ್ಧಾರ. ಒಂದೊಮ್ಮೆ ಬಿಟ್ಟಲ್ಲಿ ಮುಂದೆ ಇಲಾಖೆಯಿಂದ ನೋಟೀಸು,. ಹೆಚ್ಚುವರಿ ದಂಡಪಾವತಿಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

– ನಿರಂಜನ 

Advertisement

Udayavani is now on Telegram. Click here to join our channel and stay updated with the latest news.

Next