Advertisement

ಮೊಬೈಲ್‌ ಆ್ಯಪ್‌ ಮೂಲಕವೇ ತೆರಿಗೆ ಪಾವತಿ!

10:18 AM Dec 28, 2018 | Team Udayavani |

ಮಹಾನಗರ : ಸ್ಮಾರ್ಟ್‌ ಸಿಟಿಯ ತವಕದಲ್ಲಿರುವ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತೆರಿಗೆ ಪಾವತಿದಾರರಿಗೊಂದು ಸಿಹಿಸುದ್ದಿ. ಕೆಲವೇ ದಿನದಲ್ಲಿ ಪಾಲಿಕೆಯ ಎಲ್ಲ ವಿಭಾಗಗಳು ಕಂಪ್ಯೂಟರೀಕೃತಗೊಂಡು, ನೀರು, ಉದ್ದಿಮೆ ಪರವಾನಿಗೆ, ಜಾಹೀರಾತು ತೆರಿಗೆ, ಮಾರುಕಟ್ಟೆ, ಪುರಭವನ ಬಾಡಿಗೆ.. ಹೀಗೆ ಎಲ್ಲವನ್ನು ಆನ್‌ ಲೈನ್‌ ಮೂಲಕವೇ ಪಾವತಿ ಸಬಹುದು. ‘ಮೊಬೈಲ್‌ ಆ್ಯಪ್‌’ ಮೂಲಕ ಮನೆಯಲ್ಲಿಯೇ ಕುಳಿತು ತೆರಿಗೆ ಕಟ್ಟ ಬಹುದು!

Advertisement

ಪಾಲಿಕೆ ಆಡಳಿತದಲ್ಲಿ ಪಾರದರ್ಶಕತೆ, ಆರ್ಥಿಕ ಸೋರಿಕೆ ತಡೆಗಟ್ಟುವುದು ಹಾಗೂ ಮಾನವ ಸಂಪನ್ಮೂಲದ ತೀವ್ರಕೊರತೆ ಇರುವ ಹಿನ್ನೆಲೆಯಲ್ಲಿ ಯಾಂತ್ರೀಕೃತ ವ್ಯವಸ್ಥೆಯಿಂದ (ಆಟೋಮೇಟೆಡ್‌ ಸಿಸ್ಟಂ)ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸೇವೆಗಳನ್ನು ಒದಗಿಸುವುಕ್ಕೆ ಪಾಲಿಕೆ ಮುಂದಾಗಿದೆ. ರಾಜ್ಯ ಸರಕಾರದ ಅಂಗಸಂಸ್ಥೆ ‘ಕಿಯೋನಿಕ್ಸ್‌’ ಸಂಸ್ಥೆಯ ಮುಖಾಂತರ ಸಾಫ್ಟ್ವೇರ್‌ನ್ನು ಅಭಿವೃದ್ಧಿ ಪಡಿಸಲು ಯೋಚಿಸಲಾಗಿದೆ. ಪಾಲಿಕೆಯ ಪ್ರಸ್ತಾವ ಸದ್ಯ ಸರಕಾರಕ್ಕೆ ಸಲ್ಲಿಕೆಯಾಗಿದೆ. ಸದ್ಯ ತುಮಕೂರು, ಹುಬ್ಬಳ್ಳಿ ಕೆಲವು ಪಾಲಿಕೆ ಯಲ್ಲಿ ಜಾರಿಯಲ್ಲಿದೆ.

ಮೂರೂವರೆ ಕೋ.ರೂ. ವೆಚ್ಚ
ಪ್ರತ್ಯೇಕವಾಗಿ ನಾಲ್ಕು ಯೋಜನೆಯ ಪ್ರಸ್ತಾವನೆ ಸಿದ್ಧಗೊಳಿಸಿ ಪಾಲಿಕೆಯ ಎಲ್ಲ ವಿಭಾಗವನ್ನು ಕಂಪ್ಯೂಟರೀಕರಣಗೊಳಿಸುವುದು ಪಾಲಿಕೆಯ ನಿರ್ಧಾರ. ಸುಮಾರು ಮೂರೂವರೆ ಕೋ.ರೂ. ವೆಚ್ಚವಾಗುವ ನಿರೀಕ್ಷೆಯಿದೆ.

ಮಾಹಿತಿ ಪ್ರಕಾರ, 98.53 ಲಕ್ಷ ರೂ. ವೆಚ್ಚದಲ್ಲಿ ಯುಜಿಡಿ, ಜಾಹೀರಾತು ತೆರಿಗೆ, ಮಾರುಕಟ್ಟೆ, ವಾಣಿಜ್ಯ ಮಳಿಗೆ ಅಂಗಡಿ ಬಾಡಿಗೆ, ಏಕಗವಾಕ್ಷಿ ನಗದು ಕೌಂಟರ್‌, ಸ್ವಸಹಾಯ ಮಾಹಿತಿ ಪಡೆಯುವ ಟಚ್‌ಸ್ಕ್ರೀನ್‌ ಕಿಯೋಸ್ಕ್, ರಶೀದಿ ಜಾರಿಗಾಗಿ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. 99.12 ಲಕ್ಷ ರೂ.ವೆಚ್ಚದಲ್ಲಿ ಆಸ್ತಿ ತೆರಿಗೆ, ನೀರಿನ ಶುಲ್ಕ, ಅಂತರ್ಜಾಲ ಮತ್ತು ಮೊಬೈಲ್‌ ಡ್ಯಾಶ್‌ ಬೋರ್ಡ್‌ ಅಭಿವೃದ್ಧಿಯ ಗುರಿ ಇರಿಸಲಾಗಿದೆ. 

98.82 ಲಕ್ಷ ರೂ. ವೆಚ್ಚದಲ್ಲಿ ಜಿ.ಐ.ಎಸ್‌. ಮತ್ತು ಜಿ.ಪಿ.ಎಸ್‌. ಆಧಾರಿತ ಸರ್ವೆ ಮಾಡ್ಯುಲ್‌, ಸಾರ್ವಜನಿಕ ಉಪಯುಕ್ತತೆಯ ಮೊಬೈಲ್‌ ಆ್ಯಪ್‌, ಹಾಲಿ ಅಂತರ್ಜಾಲ ತಾಣದೊಂದಿಗೆ ಸಂಯೋಜಿಸಲ್ಪಟ್ಟ ಸಾರ್ವಜನಿಕ ಅಂತರ್ಜಾಲ ಪೋರ್ಟಲ್‌, ಸಾರ್ವಜನಿಕ ದೂರುಗಳ ಮಾಹಿತಿ ಪಡೆಯಲು ಸಿಬಂದಿ ಮೊಬೈಲ್‌ ಅಪ್ಲಿಕೇಶನ್‌ನ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. 76.70 ಲಕ್ಷ ರೂ.ವೆಚ್ಚದಲ್ಲಿ ಜಿ.ಐ.ಎಸ್‌. ಆಧಾರಿತ ಅಸೆಟ್‌ ಮ್ಯಾನೇಜ್‌ಮೆಂಟ್‌, ಪಾಲಿಕೆ ದಾಖಲೆ ಸೂಚ್ಯಂಕ ಡಿಜಿಟೈಸೇಶನ್‌, ದಾಸ್ತಾನು ಮತ್ತು ಇನ್‌ ವೆಂಟರಿ ಮ್ಯಾನೇಜ್‌ಮೆಂಟ್‌, ಆಧಾರ್‌ ಆಧಾರಿತ ಹಾಜರಾತಿ ನಿರ್ವಹಣೆ, ಸಭಾ ನಡವಳಿಗಳನ್ನು ಕಿಯೋನಿಕ್ಸ್‌ ಸಂಸ್ಥೆಯ ಮುಖಾಂತರ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.

Advertisement

ಹಿಂದೊಮ್ಮೆ ಸರಕಾರ ‘ನೋ’ ಎಂದಿತ್ತು!
ಈ ಹಿಂದೆ ಮಹಾಬಲ ಮಾರ್ಲ ಅವರು ಮೇಯರ್‌ ಆಗಿದ್ದ ಸಮಯದಲ್ಲಿ ಪಾಲಿಕೆಯ ಎಲ್ಲ ವಿಭಾಗವನ್ನು ಕಂಪ್ಯುಟರೀಕರಣಗೊಳಿಸುವ ಪ್ರಸ್ತಾವನೆ ಸರಕಾರಕ್ಕೆ ಕಳುಹಿಸಲಾಗಿತ್ತು. ಆದರೆ, ಸರಕಾರವು ರಾಜ್ಯವ್ಯಾಪಿ ಪಾಲಿಕೆಗಳಿಗೆ ಒಂದೇ ರೀತಿಯ ಆನ್‌ಲೈನ್‌ ಪದ್ಧತಿ ಜಾರಿಗೊಳಿಸುವುದಾಗಿ ತಿಳಿಸಿ, ಆ ಪ್ರಸ್ತಾವನೆಗೆ ಅನುಮತಿ ನೀಡಿರಲಿಲ್ಲ. ಬಳಿಕ ಪಾಲಿಕೆಯಿಂದ ಸರಕಾರಕ್ಕೆ ಪತ್ರ ಬರೆದರೂ, ಯಾವುದೇ ಫಲ ದೊರೆಯದ ಕಾರಣದಿಂದ ‘ಸಾರ್ವಜನಿಕರ ಹಿತದೃಷ್ಟಿ’ ಎಂದು ಉಲ್ಲೇಖೀಸಿ ಯೋಜನೆ ಅನುಷ್ಠಾನಕ್ಕೆ ಇದೀಗ ಮುಂದಾಗಿದೆ.

ಈಗ ಅದೊಂದು-ಇದೊಂದು ಮಾತ್ರ!
ಈಗಾಗಲೇ ಪಾಲಿಕೆಯು ‘ಪೇಪರ್‌ಲೆಸ್‌’ ಎಂಬ ಹಣೆಪಟ್ಟಿಯೊಂದಿಗೆ ಗುರುತಿಸಿಕೊಂಡಿದೆ. ಆದರೆ ಎಲ್ಲ ಇಲಾಖೆಗಳು ಇದರಡಿ ಸೇರಿಕೊಂಡಿಲ್ಲ. ಎಲ್ಲ ವಿಭಾಗವು ಹಂತ ಹಂತವಾಗಿ ಆನ್‌ಲೈನ್‌ ಎಂದು ಹೇಳಿದ್ದರೂ ಅದೊಂದು-ಇದೊಂದು ಇಲಾಖೆ ಮಾತ್ರ ಸಣ್ಣಮಟ್ಟಿಗೆ ಆನ್‌ಲೈನ್‌ ಸೌಕರ್ಯ ನೀಡುತ್ತಿದೆ. ಹೀಗಾಗಿ ಪಾಲಿಕೆಯನ್ನು ಸಮಗ್ರವಾಗಿ ಕಂಪ್ಯೂಟರೀಕೃತ ವ್ಯವಸ್ಥೆಯಾಗಿ ಮಾರ್ಪಾಡು ಮಾಡುವುದು ಈಗಿನ ಉದ್ದೇಶ. 

ಇ.ಆರ್‌.ಪಿ. ಆಧಾರಿತ ತಂತ್ರಾಂಶ
ಆದಾಯಕ್ಕೆ ಸಂಬಂಧಿಸಿ ಪಾಲಿಕೆಯ ವಿವಿಧ ಸೇವೆಗಳನ್ನು ತ್ವರಿತಗತಿಯಲ್ಲಿ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಇ.ಆರ್‌.ಪಿ. ಆಧಾರಿತ ತಂತ್ರಾಂಶ ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ಪೌರ ಸೇವೆಗಳನ್ನು ಆನ್‌ ಲೈನ್‌ ಮೂಲಕ ಸಾರ್ವಜನಿಕರಿಗೆ ನೀಡಲು ನಿರ್ಧರಿಸಲಾಗಿದೆ. ಆದಾಯ ಹೆಚ್ಚಳಕ್ಕೆ ಉಪಯೋಗವಾಗಲಿದೆ. 
– ಭಾಸ್ಕರ್‌ ಕೆ., ಮೇಯರ್‌

ಪಾಲಿಕೆ ಹಣವೇಕೆ?
ಪಾಲಿಕೆಯ ಎಲ್ಲ ವಿಭಾಗವು ಆನ್‌ ಲೈನ್‌ ಆಗಬೇಕಿದೆ. ಆದರೆ, ಆನ್‌ ಲೈನ್‌ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಕಾರವೇ ಮಾಡುತ್ತದೆಂದು ಹೇಳಿದರೂ ಪಾಲಿಕೆ ಅದಕ್ಕಾಗಿ ಹಣ ಮೀಸಲಿಡುವುದಕ್ಕೆ ಆಕ್ಷೇಪವಿದೆ. ಜತೆಗೆ ಈ ಯೋಜನೆಗೆ ಪ್ರತ್ಯೇಕವಾಗಿ ನಾಲ್ಕು ಪ್ರಸ್ತಾವೆ ಸಲ್ಲಿಸುವ ಬದಲಿ ಒಂದೇ ಪ್ರಸ್ತಾವ ಸಿದ್ಧಗೊಳಿಸಿ, ಸರಕಾರದ ಒಪ್ಪಿಗೆ ದೊರೆತರೆ ಮಾತ್ರ ಜಾರಿಗೆ ಮುಂದಾಗಬೇಕು.
– ಪ್ರೇಮಾನಂದ ಶೆಟ್ಟಿ,
ವಿಪಕ್ಷ ನಾಯಕರು, ಮನಪಾ

‡ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next