Advertisement

ಕರ ಜ್ವರ: ಟಿಡಿಎಸ್‌ ಹೊಸ ನಿಯಮಗಳು

02:42 PM Apr 27, 2020 | mahesh |

ಬೇಕಾದಂತೆ ಬದಲಾಯಿಸಬಹುದು ಎಂಬ ಕಾನೂನು ಇದ್ದರೂ, ಅದರಲ್ಲಿ ಕೆಲ ಆಡಳಿತಾತ್ಮಕ ತೊಡಕುಗಳು ಉಂಟಾಗಬಹುದು…
ಆದಾಯ ತೆರಿಗೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬಂದಿವೆ. ಅವುಗಳ ಸುತ್ತ ಒಂದು ಇಣುಕು ನೋಟ…

Advertisement

ಏಪ್ರಿಲ್‌ 1ರಿಂದ ಆರಂಭಗೊಂಡ ಹೊಸ ವಿತ್ತ ವರ್ಷಕ್ಕೆ, ಹೊಸ ಆದಾಯ ತೆರಿಗೆ ಕಾನೂನು ಅನ್ವಯವಾಗುತ್ತದೆ. ಈ ಹೊಸ ಕಾನೂನು, ಬಜೆಟ್‌-2020 ರಲ್ಲಿ ಘೋಷಿಸಿದಂತೆ
ಇರುತ್ತದೆ. ಫೆಬ್ರವರಿಯಲ್ಲಿ ಘೋಷಿತವಾದ ಈ ಬಜೆಟ್ಟಿನಂತೆ, ಈ ವರ್ಷ ಎರಡು ರೀತಿಯ ಕರಪಟ್ಟಿಗಳು ಇರುತ್ತವೆ ಮತ್ತು ಅವುಗಳಲ್ಲೊಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ತೆರಿಗೆದಾರರಿಗೆ ಕೊಡಲಾಗುವುದು. ಹಳೆ ಕರಪಟ್ಟಿ ಮೊದಲಿನಂತೆಯೇ ತನ್ನೆಲ್ಲಾ ರಿಯಾಯಿತಿಗಳೊಂದಿಗೆ ಅನ್ವಯವಾಗುವುದಾದರೆ, ಹೊಸ ಕರಪಟ್ಟಿಯಲ್ಲಿ ಯಾವುದೇ ವಿನಾಯಿತಿ ಸೌಲಭ್ಯ ಇರುವುದಿಲ್ಲ. ಈ ಪಟ್ಟಿಗಳ ನಡುವಿನ ವ್ಯತ್ಯಾಸ ಮತ್ತು ಅವುಗಳ ನಡುವಿನ ಗೊಂದಲದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬಹುತೇಕರು ತಮಗೆ ಯಾವ ಪದ್ಧತಿ ಸೂಕ್ತ ಎಂಬುದರ ಬಗ್ಗೆ ಒಂದು ನಿಲುವನ್ನು ಕೂಡಾ ತೆಗೆದುಕೊಂಡು ಆಗಿರುತ್ತದೆ. ಆದರೆ, ಉದ್ಯೋಗದಾತರು ಸಂಬಳದ ಆದಾಯಕ್ಕೆ ಮೂಲದಲ್ಲಿಯೇ ಕಡಿತ ಮಾಡುವ ಕರ ಅಥವಾ ಟಿಡಿಎಸ್‌ ಯಾವ ರೀತಿಯಲ್ಲಿ ನಡೆಯಬೇಕು ಎನ್ನುವುದರ ಬಗ್ಗೆ ಇನ್ನೂ ಗೊಂದಲವಿತ್ತು. ಒಬ್ಬ ಉದ್ಯೋಗದಾತ ಅಥವಾ ಒಂದು ಕಂಪೆನಿ, ತನ್ನ ಉದ್ಯೋಗಿಗಳ ಟಿಡಿಎಸ್‌ ಅನ್ನು ಯಾವ ಪದ್ಧತಿಯ ಪ್ರಕಾರ ಕಡಿತಗೊಳಿಸಬೇಕು? ಹಳೆಯ ಕರಪಟ್ಟಿ ಪ್ರಕಾರವೋ ಅಥವಾ ಹೊಸ ಕರಪಟ್ಟಿ ಪ್ರಕಾರವೋ? ಈ ಬಗ್ಗೆ, ಕರ ಇಲಾಖೆ ವತಿಯಿಂದ, ಏಪ್ರಿಲ್‌ 13 ರಂದು ಸ್ಪಷ್ಟೀಕರಣ ಬಂದಿದೆ:

ನೂತನ ಸ್ಪಷ್ಟೀಕರಣ
ಆ ಪ್ರಕಾರ- ಬಿಸಿನೆಸ್‌ ಆದಾಯವಿಲ್ಲದ ಪ್ರತಿಯೊಬ್ಬ ಉದ್ಯೋಗಿಯೂ, ಏಪ್ರಿಲ್‌ ನಲ್ಲಿ ತನ್ನ ಸಂಸ್ಥೆಗೆ, ತನ್ನ ಆಯ್ಕೆಯನ್ನು ತಿಳಿಸತಕ್ಕದ್ದು. ಅವರ ಆಯ್ಕೆಯ ಕರಪಟ್ಟಿಯ ಪ್ರಕಾರವೇ, ಸಂಸ್ಥೆಗಳು ಟಿಡಿಎಸ್‌ ಕಡಿತ ಮಾಡತಕ್ಕದ್ದು. ಈ ಆಯ್ಕೆಯನ್ನು ಒಂದೇ ಬಾರಿ ಮಾಡಬಹುದಾಗಿದೆ. ಅಂದರೆ, ಒಂದು ಬಾರಿ ಮಾಡಿದ ಪಟ್ಟಿಯ ಆಯ್ಕೆಯನ್ನು, ವರ್ಷದ ಮಧ್ಯದಲ್ಲಿ ಬದಲಾಯಿಸುವಂತಿಲ್ಲ. ಹಾಗಾಗಿ, ಸರಿಯಾಗಿ ಲೆಕ್ಕ ಹಾಕಿ, ಅಲೋಚಿಸಿ, ಖಚಿತ ತೀರ್ಮಾನ ತೆಗೆದುಕೊಂಡು, ಆ ಬಳಿಕವೇ ಸಂಸ್ಥೆಗೆ ತನ್ನ ಆಯ್ಕೆಯನ್ನು ತಿಳಿಸಬೇಕು. ಆದಾಗ್ಯೂ, ರಿಟರ್ನ್ ಫೈಲಿಂಗ್‌ ಸಮಯದಲ್ಲಿ,
ಇನ್ನೊಮ್ಮೆ ತಮಗೆ ಬೇಕಾದ ರೀತಿಯಲ್ಲಿ ಪಟ್ಟಿಯನ್ನು ಆಯ್ದು, ರಿಟರ್ನ್ ಸಲ್ಲಿಕೆಯನ್ನು ನೇರವಾಗಿ ಕರ ಇಲಾಖೆಗೆ ಮಾಡಬಹುದು.

ಸಂಸ್ಥೆಗೆ ನೀಡಿದ ಆಯ್ಕೆ ಏನೇ ಇದ್ದರೂ, ರಿಟರ್ನ್ ಫೈಲಿಂಗ್‌ ಸಮಯದಲ್ಲಿ ಬದಲಾಯಿಸುವ ಹಕ್ಕು, ವೈಯಕ್ತಿಕ ಬಿಸಿನೆಸ್‌ ಆದಾಯ ಇಲ್ಲದ ತೆರಿಗೆದಾರರಿಗೆ ಇರುತ್ತದೆ.ಅದುವರೆಗೆ
ಪಾವತಿಸಿದ ಟಿಡಿಎಸ್‌ ಅನ್ನು, ಬದಲಾದ ಪದ್ಧತಿಯಡಿಯಲ್ಲಿಯೇ ಕರ ಇಲಾಖೆ ಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ, ಒಬ್ಟಾತ ತನ್ನ ಆಯ್ಕೆಯನ್ನು ತನ್ನ ಕಂಪೆನಿಗೆ ತಿಳಿಸದೇ ಇದ್ದಲ್ಲಿ ಏನಾಗುತ್ತದೆ? ಈ ಬಗ್ಗೆಯೂ ಇಲಾಖೆ ಮಾಹಿತಿ ನೀಡಿದೆ. ಯಾರಾದರೊಬ್ಬರು ತನ್ನ ಆಯ್ಕೆಯನ್ನು ತಿಳಿಸದೇ ಇದ್ದಲ್ಲಿ, ಹಳೆಯ ಪದ್ಧತಿಯಡಿಯಲ್ಲಿಯೇ ಟಿಡಿಎಸ್‌ ಲೆಕ್ಕಾಚಾರ ಹಾಕಿ, ದುಡ್ಡು ಕಡಿತ ಮಾಡಿ ಸರಕಾರಕ್ಕೆ ಕಟ್ಟತಕ್ಕದ್ದು ಎಂಬ ನಿರ್ದೇಶನವನ್ನು, ಕಂಪೆನಿಗಳಿಗೆ ನೀಡಲಾಗಿದೆ. ಅಂತಹವರೂ ಕೂಡಾ, ರಿಟರ್ನ್ ಫೈಲಿಂಗ್‌ ಸಮಯದಲ್ಲಿ, ತಮಗೆ ಬೇಕಾದ ಪದ್ಧತಿಯನ್ನು ಆಯ್ದುಕೊಂಡು ಮುಂದುವರಿಯಬಹುದು.

ಹಳೆಯ ವರ್ಸಸ್‌ ಹೊಸ ಕರಪಟ್ಟಿ
ಹಳೆಯ ಕರಪಟ್ಟಿಯಲ್ಲಿ, ಆದಾಯ ಕರವನ್ನು ಒಂದು ರೀತಿಯಲ್ಲಿ ಲೆಕ್ಕ ಹಾಕುತ್ತಿದ್ದರು. ಇದೀಗ ಬಿಡುಗಡೆಯಾದ ಹೊಸ ಪಟ್ಟಿಯಲ್ಲಿ ಆದಾಯ ತೆರಿಗೆಯನ್ನು ಇನ್ನೊಂದು ರೀತಿಯಲ್ಲಿ ಲೆಕ್ಕ ಹಾಕಲಾಗುತ್ತದೆ. ಮೂಲಭೂತವಾಗಿ, ಹಳೆಯ ಪಟ್ಟಿಯಲ್ಲಿ ಕರದರಗಳು ಜಾಸ್ತಿ; ಆದರೆ, ಸುಮಾರು ನೂರು ರೀತಿಯ ಕರ ವಿನಾಯಿತಿಗಳು, ಆ ಪಟ್ಟಿಗೆ ಅನ್ವಯವಾಗುತ್ತವೆ. ಈ ಬಜೆಟ್ಟಿನಲ್ಲಿ ಬಿಡುಗಡೆಯಾದ ಹೊಸ ಕರ ಪಟ್ಟಿಯಲ್ಲಿ ಕರದರಗಳು ಕಡಿಮೆಯಾದರೂ, ಯಾವುದೇ ರೀತಿಯ ಕರ ವಿನಾಯಿತಿಗಳು ಅದಕ್ಕೆ ಅನ್ವಯವಾಗುವುದಿಲ್ಲ. ಉದಾ: ಸಂಬಳದವರಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌, ಎಚ್‌.ಆರ್‌.ಎ, ಎಲ್ ಟಿ.ಎ ರಿಯಾಯಿತಿಗಳು, ಅಲ್ಲದೆ 80ಸಿ ಅಡಿಯಲ್ಲಿ ಬರುವ ಪಿಪಿಎಫ್, ಜೀವ ವಿಮೆ, ಅಲ್ಲದೆ ಗೃಹ ಸಾಲದ ಬಡ್ಡಿ, ವಿದ್ಯಾ ಸಾಲದ ಬಡ್ಡಿ, ಮೆಡಿಕಲ್‌ ಇನ್ಶೂರೆನ್ಸ್
ಬ್ಯಾಂಕ್‌ ಬಡ್ಡಿದರದ ರಿಯಾಯಿತಿ ಇತ್ಯಾದಿ ಇತ್ಯಾದಿ. ಇದೀಗ ಈ ಬಜೆಟ್ಟಿನಲ್ಲಿ ಪ್ರತಿಯೊಬ್ಬನೂ ತನಗೆ ಬೇಕಾದ ಪಟ್ಟಿಯನ್ನು ಆಯ್ದು ಕರ ಲೆಕ್ಕ ಹಾಕಬಹುದು. ಇವೆರಡರಲ್ಲಿ
ಯಾವುದು ಹೆಚ್ಚು ಲಾಭದಾಯಕ ಎಂದು ನೋಡಿ ಆ ಪಟ್ಟಿಯನ್ನು ಅನುಸರಿಸಬಹುದು. ಬೇಕಾದಂತೆ ಬದಲಾಯಿಸಬಹುದು ಎಂಬ ಕಾನೂನು ಇದ್ದರೂ, ಅದರಲ್ಲಿ ಕೆಲ ಆಡಳಿತಾತ್ಮಕ ತೊಡಕುಗಳು ಉಂಟಾಗಬಹುದು. ಹಳೆ ಪಟ್ಟಿಯಿಂದ ಹೊಸಪಟ್ಟಿಗೆ ಬದಲಾಯಿಸಿಕೊಳ್ಳಲು ಯಾವುದೇ ತೊಡಕು ಉಂಟಾಗದು. ಯಾಕೆಂದರೆ, ಪಡೆದುಕೊಂಡ ಕರವಿನಾಯಿತಿ  ಯನ್ನು ಬಿಟ್ಟು ಬಿಡುವುದು ಸಾಧ್ಯ. ರಿಟರ್ನ್ ಫೈಲಿಂಗ್‌ ಸಮಯದಲ್ಲಿ, ಅದರ ಲೆಕ್ಕ ಕೊಟ್ಟರಾಯಿತು. ಆದರೆ, ಹೊಸ ಪಟ್ಟಿಯಿಂದ ಹಳೆಪಟ್ಟಿಗೆ ಹೋಗುವವರಿಗೆ ತುಸು ತೊಡಕು ಉಂಟಾದೀತು. ಕೆಲ ರಿಯಾಯಿತಿಗಳನ್ನು ಆಮೇಲೆ ಪಡಕೊಳ್ಳುವುದು ಸುಲಭವಲ್ಲ. ಯಾಕೆಂದರೆ, ಫ‌ುಡ್‌ ಕೂಪನ್‌, ಎಚ್‌.ಆರ್‌.ಎ ಇತ್ಯಾದಿ ರಿಯಾಯಿತಿಗಳನ್ನು ಸಂಸ್ಥಗಳೇ ಲೆಕ್ಕ ಹಾಕಿ, ಫಾರ್ಮ್ 16 ನೀಡುವುದು ಪದ್ಧತಿ. ಆದರಲ್ಲಿ ಆಮೇಲೆ ಬದಲಾವಣೆ ಬೇಕು ಎಂದರೆ, ಅದನ್ನು ಯಾರು ಯಾವ ರೀತಿ ಮಾಡುವುದು ಎನ್ನುವ ಗೊಂದಲ ಉಂಟಾಗುತ್ತದೆ. ಹಾಗಾಗಿ ಹೆಚ್ಚಿನ ತೊಂದರಗಳಿಗೆ ಸಿಲುಕಿ ಹಾಕಿಕೊಳ್ಳದೆ, ಒಂದೇ ಬಾರಿಗೆ ಸರಿಯಾದ ಲೆಕ್ಕಾಚಾರ ಮಾಡಿ, ನಿಮ್ಮ ಸಂಸ್ಥೆಗೆ ಒಂದೇ ಬಾರಿಗೆ ತಿಳಿಸಿಬಿಡಿ. ಆಮೇಲೆ ಬದಲಾಯಿಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇದ್ದರೂ ಅಡಚಣೆ ಉಂಟಾಗಬಹುದು. ಎಚ್ಚರವಿರಲಿ!

Advertisement

ಜಯದೇವ ಪ್ರಸಾದ ಮೊಳೆಯಾರ

Advertisement

Udayavani is now on Telegram. Click here to join our channel and stay updated with the latest news.

Next