Advertisement

ಎಸ್‌ಎಂಕೆ ಅಳಿಯನ ಮೇಲೆ ಐಟಿ ಅಟ್ಯಾಕ್‌

07:20 AM Sep 22, 2017 | Team Udayavani |

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರ ಅಳಿಯ, ಉದ್ಯಮಿ ವಿ.ಜಿ. ಸಿದ್ಧಾರ್ಥಗೆ ಸೇರಿದ ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮುಂಬೈ ಹಾಗೂ ಚೆನ್ನೈನಲ್ಲಿರುವ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿದ್ದಾರೆ.

Advertisement

ಬೆಳಗ್ಗೆ 6 ಗಂಟೆ ಸುಮಾರಿಗೆ ದಾಳಿ ಆರಂಭಿಸಿದ ಅಧಿಕಾರಿಗಳು, ತಡರಾತ್ರಿವರೆಗೂ ತಪಾಸಣೆ ನಡೆಸಿದರು. ಸಿದ್ಧಾರ್ಥ್ಗೆ ಸೇರಿದ ಬೆಂಗಳೂರಿನ ಸದಾಶಿವನಗರ ನಿವಾಸ, ಮಲ್ಯ ರಸ್ತೆಯಲ್ಲಿರುವ ಕೆಫೆ ಕಾಫಿಡೇ ಮುಖ್ಯ ಕಚೇರಿ, ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಸೆರಾಯ್‌ ರೆಸಾರ್ಟ್‌, ಎಬಿಸಿ ಕಚೇರಿ, ಗ್ಲೋಬಲ್‌ ವಿಲೇಜ್‌, ಹಾಸನ ಸಕಲೇಶಪುರದಲ್ಲಿರುವ ಕಾಫಿ ಕ್ಯೂರಿಂಗ್‌ ಘಟಕ ಹಾಗೂ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಮತ್ತು ಕಚೇರಿ ಸೇರಿದಂತೆ ಒಟ್ಟು 25 ಕಡೆಗಳಲ್ಲಿ ದಾಳಿ ನಡೆಸಿರುವ ಸುಮಾರು 100ಕ್ಕೂ ಅಧಿಕ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.

ದಾಳಿಯ ಬಗ್ಗೆ ಖಚಿತ ಪಡಿಸಿರುವ ಐಟಿ ಅಧಿಕಾರಿಗಳು ಯಾವ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂಬುದನ್ನು ತಿಳಿಸಿಲ್ಲ.
ಎರಡು ಇನೋವಾ ಕಾರುಗಳಲ್ಲಿ ಬಂದ 10 ಮಂದಿಯ ತಂಡ ಸದಾಶಿವನಗರದ ಮನೆ ಮೇಲೆ ದಾಳಿ ನಡೆಸಿದೆ. ಹಾಗೆಯೇ 6 ಇನೋವಾ ಕಾರುಗಳಲ್ಲಿ ಬಂದ ಅಧಿಕಾರಿಗಳ ಮತ್ತೂಂದು ತಂಡ ಎಬಿಸಿ ಕಚೇರಿ, ಕೆಫೆ ಕಾಫಿಡೇ ಮೇಲೆ ದಾಳಿ ನಡೆಸಿದ್ದು, ಕೆಲ ಮೊಬೈಲ್‌, ಲ್ಯಾಪ್‌ಟಾಪ್‌, ಹಾರ್ಡ್‌ ಡಿಸ್ಕ್ಗಳು ಹಾಗೂ ಎರಡು ಬ್ಯಾಗ್‌ ಗಳಲ್ಲಿ ದಾಖಲೆಗಳನ್ನು ಕೊಂಡೊಯ್ದಿದ್ದಾರೆ.

ಡಿಕೆಶಿ ಆಪ್ತ ರಜನೀಶ್‌: ಈ ಮೊದಲು ರಾಜ್ಯದ  ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮನೆ ಮತ್ತು ಕಚೇರಿ ಸೇರಿದಂತೆ ಅವರ ಸಂಬಂಧಿಕರು ಹಾಗೂ ಬೆಂಬಲಿಗರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಶಿವಕುಮಾರ್‌ ಆಪ್ತ ರಜನೀಶ್‌ ಮನೆ ಮೇಲೂ ದಾಳಿ ನಡೆಸಲಾಗಿತ್ತು. ಆಗ ಸಿದ್ಧಾರ್ಥ್ ಅವರಿಗೆ ಸೇರಿದ ಕೆಲ ದಾಖಲೆಗಳು ಪತ್ತೆಯಾಗಿತ್ತು ಎಂದು ತಿಳಿದು ಬಂದಿದ್ದು, ಈ  ಹಿನ್ನೆಲೆಯಲ್ಲಿ ಇದೀಗ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಐಟಿ ಅಧಿಕಾರಿಗಳು ಖಚಿತ 
ಪಡಿಸಿಲ್ಲ. ಇದಕ್ಕೂ ಮೊದಲು ರಜನೀಶ್‌ 20 ವರ್ಷಗಳ ಕಾಲ ಎಬಿಸಿ ಮತ್ತು ಕೆಫೆ ಕಾಫಿಡೇಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಐಟಿ ಮೂಲಗಳು ತಿಳಿಸಿವೆ.  ಇದರೊಂದಿಗೆ ಸಿದ್ಧಾರ್ಥ್ ಕಚೇರಿಯಲ್ಲಿ ಚಾರ್ಟೆಡ್‌ ಅಕೌಂಟೆಂಟ್‌ ಜಯರಾಜ್‌ ಅವರ ಆರ್‌.ಆರ್‌. ನಗರ ನಿವಾಸದ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಐಟಿ ಇಲಾಖೆ ಯನ್ನು ಕೇಂದ್ರ ಸರ್ಕಾರ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಅನುಮಾನ ಈಗಲೂ ಇದೆ. ಮೋದಿ ನೇತೃತ್ವದ ಸರ್ಕಾರ ಕಾಂಗ್ರೆಸ್‌ನವರ ಮನೆಗಳನ್ನು ಮಾತ್ರ ಟಾರ್ಗೆಟ್‌ ಮಾಡಿ ದಾಳಿ ನಡೆಸುತ್ತಿತ್ತು. ಈಗ ಎಸ್‌.ಎಂ. ಕೃಷ್ಣ ಅಳಿಯನ ಮನೆ ಮೇಲೆ ದಾಳಿ ನಡೆಸಿರುವುದು ಕೇವಲ ಕಣ್ಣೊರೆಸುವ ತಂತ್ರ ಆಗಿರಬಹುದು.
 ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ 

Advertisement

ಬಿಜೆಪಿ ಬ್ಲಾಕ್‌ ಮೇಲ್‌ ಮಾಡಿ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ. ಹೀಗೇ ಎಸ್‌.ಎಂ. ಕೃಷ್ಣ ರನ್ನೂ ಬಿಜೆಪಿಗೆ ಸೇರಿಸಿಕೊಂಡಿದೆ. ಅವರಿಂದ ಪ್ರಯೋಜನ ಇಲ್ಲ ಎಂದು ತಿಳಿದ ಮೇಲೆ ಈಗ ಅವರ ಅಳಿಯನ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
 ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next