ನವದೆಹಲಿ: ಒಂದು ಕಂಪನಿಯ ಕೆಲಸದಲ್ಲಿದ್ದುಕೊಂಡೇ, ಬಿಡುವಿನ ವೇಳೆ ಮತ್ತೂಂದು ಕಂಪನಿಗೆ ಸೇವೆ ನೀಡುತ್ತಿರುವ(ಮೂನ್‌ಲೈಟ್) ಐಟಿ ವೃತ್ತಿಪರರಿಗೆ ಈಗ “ತೆರಿಗೆ’ ಸುಳಿಯಲ್ಲಿ ಸಿಲುಕುವ ಭೀತಿ ಶುರುವಾಗಿದೆ.
ಮೂನ್‌ಲೈಟಿಂಗ್ ಮೂಲಕ ಗಳಿಸುವ ಹೆಚ್ಚುವರಿ ಆದಾಯವನ್ನು ತೆರಿಗೆ ರಿಟರ್ನ್Õ ಸಲ್ಲಿಕೆ ವೇಳೆ ನಮೂದಿಸಬೇಕಾದ್ದು ಕಡ್ಡಾಯ ಎಂದು ಆದಾಯ ತೆರಿಗೆ ಅಧಿಕಾರಿಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ಟೆಕಿಗಳಿಗೆ ಎಚ್ಚರಿಸಿದ್ದಾರೆ.
ಒಬ್ಬ ವ್ಯಕ್ತಿ ಅಥವಾ ಕಂಪನಿಯು ಗುತ್ತಿಗೆ ಆಧಾರದ ಕೆಲಸ(ಐಟಿ ಕಾಯ್ದೆ, 1961ರ ಸೆಕ್ಷನ್ 194 ಸಿ ಪ್ರಕಾರ)ಕ್ಕೆಂದು ಯಾರಿಗಾದರೂ ಮಾಸಿಕ 30 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ಪಾವತಿಸುತ್ತಿದ್ದರೆ, ಮೂಲದಲ್ಲೇ ತೆರಿಗೆ ಕಡಿತ(ಟಿಡಿಎಸ್) ಮಾಡಬೇಕು. ಅಲ್ಲದೇ, ಒಂದು ವಿತ್ತೀಯ ವರ್ಷದಲ್ಲಿ ಇಂಥ ಪಾವತಿಯು 1 ಲಕ್ಷ ರೂ. ಮೀರಿದರೂ ಟಿಡಿಎಸ್ ಅನ್ವಯವಾಗುತ್ತದೆ. ಇನ್ನು, ಈ ಹಣವನ್ನು ಸ್ವೀಕರಿಸುವ ವ್ಯಕ್ತಿಯು ತೆರಿಗೆ ರಿಟರ್ನ್ಸ್ ಸಲ್ಲಿಕೆ ವೇಳೆ ಈ ವಿಚಾರವನ್ನು ನಮೂದಿಸಬೇಕು ಮತ್ತು ಸೂಕ್ತ ತೆರಿಗೆಯನ್ನು ಪಾವತಿಸಬೇಕು ಎನ್ನುತ್ತಾರೆ ತಮಿಳುನಾಡಿನ ಪ್ರಧಾನ ಐಟಿ ಆಯುಕ್ತ ಆರ್.ರವಿಚಂದ್ರನ್.
ವೃತ್ತಿಪರ ಶುಲ್ಕವನ್ನು ಪಾವತಿಸುವ ವ್ಯಕ್ತಿ ಅಥವಾ ಕಂಪನಿಯು ಟಿಡಿಎಸ್ ಕಡಿತ ಮಾಡದೇ ಇದ್ದರೆ ಅಥವಾ ಶುಲ್ಕ ಸ್ವೀಕರಿಸಿದಾತ ರಿಟರ್ನ್ಸ್ ಸಲ್ಲಿಕೆ ವೇಳೆ ಈ ಆದಾಯವನ್ನು ನಮೂದಿಸದೇ ಇದ್ದರೆ ಅದು ಐಟಿ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಮೂನ್‌ಲೈಟಿಂಗ್ ಮಾಡುತ್ತಿರುವ ಅನೇಕರು ಈಗ ತಮ್ಮ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಸಂಪರ್ಕಿಸುತ್ತಿದ್ದು, ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.