ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಕೇವಲ ರೋಚಕವಾಗಿ ಹೇಳಿದರೆ ಸಾಲದು. ಜೊತೆಗೆ ಪ್ರೇಕ್ಷಕರಲ್ಲಿ ಕುತೂಹಲದ ಜೊತೆಗೆ ಆಗಾಗ ಸಣ್ಣ ಸಣ್ಣ ಗೊಂದಲಗಳು ಮೂಡುತ್ತಾ, ಮುಂದಿನ ಭಾಗದಲ್ಲಿ ಅದಕ್ಕೆ ಉತ್ತರ ಸಿಗಬೇಕು.. ಸದ್ಯ ನಡೆಯುತ್ತಿರೋದು ಈ ಟ್ರೆಂಡ್. ಇದನ್ನೇ ಗಮನದಲ್ಲಿಟ್ಟುಕೊಂಡು ಮೂಡಿಬಂದಿರುವ ಚಿತ್ರ “ತತ್ಸಮ ತದ್ಭವ’.
ಮೇಲ್ನೋಟಕ್ಕೆ ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿ ಕಂಡರೂ ಇದರ ವಿಸ್ತಾರ ಅಷ್ಟಕ್ಕೇ ಸೀಮಿತವಾಗಿಲ್ಲ. ಮರ್ಡರ್ ಮಿಸ್ಟರಿ ಜೊತೆಗೆ ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿಯೂ ಮೂಡಿಬಂದಿದೆ. ನಿರ್ದೇಶಕ ವಿಶಾಲ್ ಅತ್ರೇಯ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಕಟ್ಟಿಕೊಟ್ಟ ಸಿನಿಮಾವಿದು ಎಂಬುದು ಸಿನಿಮಾ ನೋಡುವಾಗ ಅಲ್ಲಲ್ಲಿ ಸಾಬೀತಾಗುತ್ತದೆ.
ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ನಾಯಕಿ ಆರಿಕಾ ಪೊಲೀಸ್ ಸ್ಟೇಷನ್‌ಗೆ ದೂರು ನೀಡುವ ಮೂಲಕ ತೆರೆದುಕೊಳ್ಳುವ ಕಥೆ ಮುಂದೆ ಸಾಗುತ್ತಾ ಹಲವು ಮಜಲುಗಳುನ್ನು ತೆರೆದುಕೊಳ್ಳುತ್ತದೆ. ಇಲ್ಲಿ ಅಪರಾಧಿ ಯಾರು, ಈಕೆ ನಿಜಕ್ಕೂ ಮುಗ್ಧೆನಾ ಅಥವಾ ಈಕೆಯೇ ಆಕೆಯ, ಆಕೆಯೇ ಈಕೆಯಾ… ಇಂತಹ ಹಲವು ಪ್ರಶ್ನೆಗಳನ್ನು ಮುಂದಿಡುತ್ತಾ ಸಾಗುವ ಸಿನಿಮಾ, ಕ್ಷಣ ಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸುವಲ್ಲಿ ಸಫಲವಾಗಿದೆ. ಈ ಸಿನಿಮಾದ ಕಥೆಯನ್ನು ಐದು ವಿಭಾಗಗಳಾಗಿ ವಿಂಗಡಿಸಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ, ನೀವು ಈ ಸಿನಿಮಾದ ಯಾವುದೇ ಒಂದು ಅಂಶವನ್ನು ಮಿಸ್ ಮಾಡಿದರೂ ನಿಮಗೆ ಮುಂದಿನ ಭಾಗದ ಸ್ಪಷ್ಟತೆ ಕಡಿಮೆಯಾಗಬಹುದು. ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಅಂಶಗಳು ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಆ ಮಟ್ಟಿಗೆ “ತತ್ಸಮ ತದ್ಭವ’ ಒಂದು ಹೊಸ ಪ್ರಯೋಗದ ಸಿನಿಮಾ.
ಇಡೀ ಸಿನಿಮಾದ ಹೈಲೈಟ್ ಮೇಘನಾ ರಾಜ್. ಒಂದು ದೊಡ್ಡ ಗ್ಯಾಪ್‌ನ ನಂತರ ತೆರೆಮೇಲೆ ಕಾಣಿಸಿಕೊಂಡಿರುವ ಮೇಘನಾ ರಾಜ್ ಅವರಿಗೆ ಹಲವು ಆಯಾಮಗಳಿರುವ, ತುಂಬಾ ಇಂಟೆನ್ಸ್ ಆದ ಪಾತ್ರ ಸಿಕ್ಕಿದೆ. ಆ ಪಾತ್ರವನ್ನು ಅಷ್ಟೇ ಚೆನ್ನಾಗಿ ನಿಭಾಯಿಸುವ ಮೂಲಕ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಪೊಲೀಸ್ ಆμàಸರ್ ಆಗಿ ಪ್ರಜ್ವಲ್ ದೇವರಾಜ್ ಇಷ್ಟವಾಗುತ್ತಾರೆ. ಉಳಿದಂತೆ ಬಾಲಾಜಿ ಮನೋಹರ್, ಶ್ರುತಿ, ಅರವಿಂದ್ ಅಯ್ಯರ್ ನಟಿಸಿದ್ದಾರೆ. ತಣ್ಣನೆ ಕಾಡುವ ಒಂದು ಥ್ರಿಲ್ಲರ್ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಬಯಸುವವರಿಗೆ “ತತ್ಸಮ-ತದ್ಭವ’ ಇಷ್ಟವಾಗುತ್ತದೆ.
ರವಿಪ್ರಕಾಶ್ ರೈ