ಮುಂಬೈ: ಟಾಟಾ ಸನ್ಸ್‌ನ ಒಡೆತನದಲ್ಲಿರುವ ದೂರಸಂಪರ್ಕ ಕಂಪನಿ ಟಾಟಾ ಟೆಲಿ ಸರ್ವಿಸಸ್ ಶೀಘ್ರದಲ್ಲಿಯೇ ತನ್ನ ವಹಿವಾಟು ಮುಕ್ತಾಯಗೊಳಿಸಲಿದೆ.
ಅದಕ್ಕೆ ಪೂರ್ವಭಾವಿಯಾಗಿ ಕಂಪನಿಯಲ್ಲಿರುವ 5,101 ಉದ್ಯೋಗಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲು ಮುಂದಾಗಿದೆ. ಅವರಿಗೆ 3-6 ತಿಂಗಳ ಮೊದಲೇ ನೋಟಿಸ್ ನೀಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಸಾಲದಿಂದ ಕಂಗೆಟ್ಟಿರುವ ಟಾಟಾ ಟೆಲಿ ಸರ್ವಿಸಸ್ 2018ರ ಮಾ.31ರ ಒಳಗಾಗಿ ಪ್ರಮುಖ ವಲಯ ಮುಖ್ಯಸ್ಥರು ಹುದ್ದೆ ಬಿಟ್ಟು ತೆರಳಬೇಕೆಂದು ಆದೇಶಿಸಿದೆ. ಕಳೆದ ಶನಿವಾರವೇ ಕಂಪನಿ ತನ್ನ ನಿರ್ಧಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿಯ ಹಿರಿಯ ಅಧಿಕಾರಿಗಳು ಕೇಂದ್ರ ದೂರ ಸಂಪರ್ಕ ಖಾತೆ ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಪನಿ ಹೊಂದಿರುವ ಸ್ಪೆಕ್ಟ್ರಂಗಳನ್ನು ಹಿಂತಿರುಗಿಸುವ ಬಗ್ಗೆಯೂ ಚರ್ಚಿಸಿದ್ದಾರೆ ಎಂದು “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. 149 ವರ್ಷಗಳ ಇತಿಹಾಸ ಇರುವ ಟಾಟಾ ಸನ್ಸ್ ಕಂಪನಿಯಲ್ಲಿ ಮೊದಲ ಬಾರಿಗೆ ಕಂಪನಿ ಯೊಂದು ಮಧ್ಯದಲ್ಲಿಯೇ ಸೇವೆಯನ್ನು ಮುಕ್ತಾಯಗೊಳಿಸುತ್ತಿದೆ. 1996ರಲ್ಲಿ ಆರಂಭ ವಾದ ಟಾಟಾ ಟೆಲಿಸರ್ವಿಸಸ್ ಲ್ಯಾಂಡ್‌ಲೈನ್ ಸೇವೆ ಆರಂಭಿಸಿತ್ತು. 2002ರಲ್ಲಿ ಸಿಡಿಎಂಎ ಮತ್ತು 2008ರಲ್ಲಿ ಜಿಎಸ್‌ಎಂ ಸೇವೆಯನ್ನು ಜಪಾನ್‌ನ ಡೊಕೊಮೊ ಕಂಪನಿ ಜತೆ ಸೇರಿ ಆರಂಭಿಸಿತ್ತು.