ಮುಂಬೈ: ದೇಶದ ಪ್ರಮುಖ ಉದ್ಯಮ ಸಂಸ್ಥೆ ಟಾಟಾ ಗ್ರೂಪ್‌ನಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದ, ಟಾಟಾ ಸನ್ಸ್‌ನ ನಿವೃತ್ತ ನಿರ್ದೇಶಕ ಆರ್.ಕೆ.ಕೃಷ್ಣಕುಮಾರ್ (84) ನಿಧನರಾಗಿದ್ದಾರೆ.
ಅವರು ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯೂ ಆಗಿದ್ದರು.
ಭಾನುವಾರ ಅವರು ಮುಂಬೈನ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಅಂತ್ಯಕ್ರಿಯೆ ಜ.3ರಂದು ಮುಂಬೈನ ಚಂದನವಾಡಿ ಚಿತಾಗಾರದಲ್ಲಿ ನೆರವೇರಲಿದೆ ಎಂದು ಟಾಟಾ ಗ್ರೂಪ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಟಾಟಾ ಟ್ರಸ್ಟ್ ಅಧ್ಯಕ್ಷ ರತನ್ ಟಾಟಾ ಅವರ ಆಪ್ತರೂ ಆಗಿದ್ದ ಕೃಷ್ಣಕುಮಾರ್, ಟಾಟಾ ಗ್ರೂಪ್‌ನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ 2013ರಲ್ಲಿ ನಿವೃತ್ತರಾಗಿದ್ದರು. ನಂತರ ಅವರು ಆರ್‌ಎನ್‌ಟಿ ಎಸೋಸಿಯೇಟ್ಸ್ ಮತ್ತು ಟಾಟಾ ಟ್ರಸ್ಟ್‌ನ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ಹೆಚ್ಚಿನ ಆಧ್ಯಾತ್ಮಿಕ ಒಲವು ಹೊಂದಿದ್ದ ಅವರು ಟಾಟಾ ಟ್ರಸ್ಟ್ ಮೂಲಕ ಹಲವು ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದರು.
1963ರಲ್ಲಿ ಅವರು ಟಾಟಾ ಗ್ಲೋಬಲ್ ಬೆವರೇಜಸ್‌ಗೆ ಸೇರ್ಪಡೆಯಾಗಿದ್ದರು. 1997ರಲ್ಲಿ ಇಂಡಿಯನ್ ಹೋಟೆಲ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ನೇಮಕಗೊಂಡರು. 2013ರಲ್ಲಿ ನಿವೃತ್ತರಾಗುವ ವೇಳೆಗೆ ಕೃಷ್ಣಕುಮಾರ್ ಕಂಪನಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.
ಟಾಟಾ ಟ್ರಸ್ಟ್‌ನ ಅಧ್ಯಕ್ಷ ರತನ್ ಟಾಟಾ ಪ್ರತಿಕ್ರಿಯೆ ನೀಡಿ “ಕೃಷ್ಣಕುಮಾರ್ ಜತೆಗಿನ ಒಡನಾಟವನ್ನು ಯಾವತ್ತೂ ನೆನಪಿಸಿಕೊಳ್ಳುತ್ತೇನೆ. ನಮ್ಮ ಕಂಪನಿಗೆ ಅವರು ಗುರುತರ ಕೊಡುಗೆ ನೀಡಿದ್ದಾರೆ. ಟಾಟಾ ಗ್ರೂಪ್ ಮತ್ತು ಟಾಟಾ ಟ್ರಸ್ಟ್‌ನಲ್ಲಿ ಹಿರಿಯ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೋಕವ್ಯಕ್ತಪಡಿಸಿದ್ದಾರೆ. “ತಲಚ್ಚೇರಿಯಲ್ಲಿ ಜನಿಸಿದ ಕೃಷ್ಣಕುಮಾರ್ ಟಾಟಾ ಗ್ರೂಪ್‌ನಲ್ಲಿ ಅತ್ಯುನ್ನತ ಹುದ್ದೆಗಳನ್ನು ನಿಭಾಯಿಸಿದ್ದರು. ಕೇರಳ ಸರ್ಕಾರದ ಜತೆಗೆ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು’ ಎಂದು ಟ್ವೀಟ್ ಮಾಡಿದ್ದಾರೆ.