Advertisement

17 ವರ್ಷದ ಬಳಿಕ ಟಾಟಾ ಮೋಟಾರ್ಸ್ ನಿಂದ ಏಸ್ ಇಲೆಕ್ಟ್ರಿಕ್ ಲಘು ವಾಹನ ಬಿಡುಗಡೆ, ವಿಶೇಷತೆ ಏನು?

02:55 PM May 05, 2022 | Team Udayavani |

ಭಾರತದ ಅತೀ ದೊಡ್ಡ ವಾಣಿಜ್ಯ ವಾಹನಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇದೀಗ ಸಣ್ಣ ಗಾತ್ರದ ಏಸ್ ಇಲೆಕ್ಟ್ರಿಕ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಜನಪ್ರಿಯ ಏಸ್ ಟ್ರಕ್ ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ.ಸಣ್ಣ ಗಾತ್ರದ ಏಸ್ ವಿದ್ಯುತ್ ಚಾಲಿತ ಟ್ರಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಟಾಟಾ ಮೋಟಾರ್ಸ್ ದೇಶದಲ್ಲಿ ಸರಕು ಸರಬರಾಜು ಮಾಡುವ ಸಣ್ಣ ಇಲೆಕ್ಟ್ರಿಕ್ ಟ್ರಕ್ ಗಳ ಉತ್ಪಾದನಾ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ. ಟಾಟಾ ಮೋಟಾರ್ಸ್ ಪ್ರಕಾರ, ನೂತನ ಶ್ರೇಣಿಯ ಏಸ್ ಇಲೆಕ್ಟ್ರಿಕ್ ವಾಹನ ಭಾರತದ ಅತ್ಯಾಧುನಿಕ, ಶೂನ್ಯ ಹೊಗೆ ಸೂಸುವಿಕೆಯ ನಾಲ್ಕು ಚಕ್ರದ ಸಣ್ಣ ವಾಣಿಜ್ಯ ವಾಹನ (ಎಸ್ ಸಿವಿ) ಇದಾಗಿದೆ ಎಂದು ತಿಳಿಸಿದೆ.

Advertisement

ಏನಿದರ ವೈಶಿಷ್ಟ್ಯತೆ:

ಏಸ್ ಇಲೆಕ್ಟ್ರಿಕ್ ವಾಹನ ಟಾಟಾ ಮೋಟಾರ್ಸ್ ನ EVOGEN ಪವರ್ ಟ್ರೈನ್ ಒಳಗೊಂಡಿರುವ ಮೊದಲ ಉತ್ಪನ್ನವಾಗಿದ್ದು, ಇದು 150 ಕಿಲೋ ಮೀಟರ್ ದೂರ ಸಂಚರಿಸಬಲ್ಲದು. ಏಸ್ ವಿದ್ಯುತ್ ಚಾಲಿತ ವಾಹನದಲ್ಲಿ ಅತ್ಯಾಧುನಿಕ ಬ್ಯಾಟರಿ ಕೂಲಿಂಗ್ ವ್ಯವಸ್ಥೆ ಹಾಗೂ ಚಾಲನೆಯ ದೂರ ಹೆಚ್ಚಿಸಲು ನೆರವಾಗುವ ಬ್ರೇಕಿಂಗ್ ಸಿಸ್ಟಂ ಒಳಗೊಂಡಿದೆ. ಏಸ್ ವಾಹನವು ನಿಯಮಿತ ಮತ್ತು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಇವಿ ಮಾದರಿಯ ವಾಹನದಲ್ಲಿ 18kWh ಮತ್ತು 20KWh ಸಾಮರ್ಥ್ಯದ ನಡುವಿನ ಬ್ಯಾಟರಿ ಅನ್ನು ಅಳವಡಿಸಿದೆ. ಆದರೆ ಏಸ್ ಇಲೆಕ್ಟ್ರಿಕ್ ವಾಣಿಜ್ಯ ಬಳಕೆ ವಾಹನದ ಬೆಲೆ ಎಷ್ಟು ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳ ಸರಬರಾಜು ಮೂಲಕ 2024ರ ವೇಳೆಗೆ ಅಂದಾಜು 6-7 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸಲು ಅಂದಾಜಿಸಲಾಗಿದೆ ಎಂದು ಟಾಟಾ ಕಂಪನಿ ತಿಳಿಸಿದೆ.

Advertisement

ಸರಕು ಸಾಗಣೆಗಾಗಿ ಟಾಟಾ ಕಂಪನಿ 2005ರಲ್ಲಿ ಏಸ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ 17 ವರ್ಷಗಳ ನಂತರ ಏಸ್ ಸರಕು ಸಾಗಣೆಯ ವಾಹನ ವಿದ್ಯುತ್ ಚಾಲಿತವಾಗುತ್ತಿದೆ. ಈಗಾಗಲೇ 23 ಲಕ್ಷ ಏಸ್ ವಾಹನ ಮಾರಾಟವಾಗಿದೆ.

ಈಗಲೂ ಕೂಡಾ ಭಾರತದಲ್ಲಿ ಸಣ್ಣ ಕಾರ್ಗೊ ವಾಹನದಲ್ಲಿ ಏಸ್ ಗೆ ಹೆಚ್ಚಿನ ಬೇಡಿಕೆ ಇದ್ದಿರುವುದಾಗಿ ವರದಿ ತಿಳಿಸಿದೆ. ಏಸ್ ಇಲೆಕ್ಟ್ರಿಕ್ ಸರಕು ಸಾಗಣೆ ವಾಹನ ಮಾರುಕಟ್ಟೆಗೆ ಬಿಡುಗಡೆಗೊಂಡ ಬಳಿಕ 40,000 ವಾಹನಗಳು ಬುಕ್ಕಿಂಗ್ ಆಗಿರುವುದಾಗಿ ಟಾಟಾ ಮೋಟಾರ್ಸ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next