Advertisement

ಸವಿ ಸವಿ ತಿಂಡಿಯ ವಾಸವಿ

09:19 AM Apr 23, 2019 | Hari Prasad |

ಚಿತ್ರಗುರ್ಗ, ದಾವಣಗೆರೆ, ಹುಬ್ಬಳ್ಳಿಯ ಕಡೆಗೆ ಪ್ರಯಾಣಿಸುವವರಲ್ಲಿ ಹಲವರು, ವಾಸವಿ ಹೋಟೆಲಿನಲ್ಲಿ ತಿಂಡಿ ತಿನ್ನೋಣ ಎಂದು ಮೊದಲೇ ನಿರ್ಧರಿಸಿಬಿಡುತ್ತಾರೆ. ಅಷ್ಟರ ಮಟ್ಟಿಗೆ ವಾಸವಿ ಹೋಟೆಲಿನ ತಿನಿಸುಗಳು ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.

Advertisement

ತುಮಕೂರಿನ ಶಿರಾ ರಸ್ತೆಯಲ್ಲಿ ಶ್ರೀದೇವಿ ಮೆಡಿಕಲ್‌ ಕಾಲೇಜ್‌ ಇದೆ. ಇಲ್ಲಿ ನಿಂತರೆ ಬಿಸಿ ಬಿಸಿ ಇಡ್ಲಿ, ಮಿರ್ಚಿ ಘಮ್ಮೆನ್ನುತ್ತದೆ. ಹುಡುಕುತ್ತಾ ಹೊರಟರೆ ಎದುರಿಗೆ ಸಿಗುವುದು ವಾಸವಿ ಟಿಫ‌ನ್‌ ಸೆಂಟರ್‌. ಸುತ್ತಮುತ್ತಲ ಬಡಾವಣೆಗಳ ನಾಗರಿಕರಿಗೆ ಇದು ಅಚ್ಚು ಮೆಚ್ಚಿನ ಕ್ಯಾಂಟಿನ್‌. ಇಲ್ಲಿನ ತಿಂಡಿಗಳು ರುಚಿಯಾಗಿರುವುದಷ್ಟೇ ಅಲ್ಲ; ಗ್ರಾಹಕರ ಜೇಬಿಗೂ ಹೊರೆಯಾಗುವುದಿಲ್ಲ.

ಈ ಹೋಟೆಲ್‌ನ ಮಾಲೀಕ ಗೋಪಾಲ್‌, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳ್ಳಾರಿಯಿಂದ ತುಮಕೂರಿಗೆ ಬಂದರು. ಮೊದಲು ಸಂಜೆ ಹೊತ್ತು ಚಿತ್ರಾನ್ನ, ದೋಸೆ, ಮಿರ್ಚಿ ಮಾಡುವ ಮೂಲಕ ಹೋಟೆಲ್‌ ತೆರೆದರು. ಆರ್ಥಿಕ ಸಮಸ್ಯೆ ನೀಗಿಕೊಳ್ಳಲು ಬೆಳಗ್ಗೆಯೂ ಹೋಟೆಲ್‌ ತೆರೆದರೆ ಹೇಗೆ ಅನ್ನೋ ಯೋಚನೆ ಬಂತು. ಆಗ ಒಂದು ಸಣ್ಣ ಅಂಗಡಿಯನ್ನು ಬಾಡಿಗೆಗೆ ಪಡೆದು ವಾಸವಿ ಟಿಫ‌ನ್‌ ಸೆಂಟರ್‌ ಅನ್ನು ಪ್ರಾರಂಭಿಸಿದರು. ಇದನ್ನು ಪ್ರಾರಂಭಿಸಿದ ಮೊದಮೊದಲು ಅಷ್ಟೇನೂ ವ್ಯಾಪಾರ­ವಿಲ್ಲದಿದ್ದರೂ, ಬರಬರುತ್ತಾ ಗ್ರಾಹಕರು ಜಾಸ್ತಿಯಾಗತೊಡಗಿದರಲ್ಲದೇ ವ್ಯಾಪಾರವೂ ಕುದುರಿತು.

ಬೆಲೆ ಎಷ್ಟು?
ಇಲ್ಲಿ 40 ರೂ.ಕೊಟ್ಟರೆ 3 ಮೃದುವಾದ ಇಡ್ಲಿ, ಅರ್ಧ ಪ್ಲೇಟ್‌ ರೈಸ್‌ ಬಾತ್‌ ಹಾಗೂ ಒಂದು ಮಿರ್ಚಿ ಸಿಗುತ್ತದೆ. ಬೇರೆ ಹೋಟೆಲ್‌ಗ‌ಳಲ್ಲಿರುವಂತೆ ಇಲ್ಲಿ ಹತ್ತಾರು ರೀತಿಯ ತಿಂಡಿಗಳು ಸಿಗುವುದಿಲ್ಲ. ಇಡ್ಲಿ, ಮಿರ್ಚಿ ಹಾಗೂ ದೋಸೆ ಪ್ರತಿದಿನ ಇದ್ದೇ ಇರುತ್ತದೆ. ಇದರ ಜೊತೆ ದಿನವೂ ಯಾವುದಾದರೂ ಎರಡು ರೈಸ್‌ ಐಟಂಗಳು ಜೊತೆಯಾಗುತ್ತವೆ. ವಾರದಲ್ಲಿ ಒಂದೆರಡು ದಿನ ಪೂರಿಸಾಗು ಹಾಗೂ ಉಪ್ಪಿಟ್ಟು ಮಾಡುತ್ತಾರೆ. ಮಾಡಿದ ಯಾವುದೇ ಐಟಂ ಉಳಿಯುವುದಿಲ್ಲ. ಬೆಳಗ್ಗೆ 7ರಿಂದ 11ರ ತನಕ ಈ ತಿಂಡಿಗಳು. ಸಂಜೆ ನಾಲ್ಕರಿಂದ ಏಳರ ತನಕ ಗರಿಗರಿ ಖಾರ ಮಂಡಕ್ಕಿ, ಮಿರ್ಚಿ ಹಾಗೂ ಮಂಡಕ್ಕಿ ಹುಸ್ಲಿ ಸಿಗುತ್ತದೆ.

ಯಾವ ತಿಂಡಿ ತಿಂದರೂ ಪ್ರತಿದಿನ ಒಂದೇ ರುಚಿ. ಇದೇ ವಾಸವಿ ಟಿಫ‌ನ್‌ ಸೆಂಟರ್‌ನ ವಿಶೇಷ. ಮೃದುವಾದ ಇಡ್ಲಿ, ತಿಂದ ನಂತರವೂ ಬಾಯಲ್ಲೇ ಉಳಿಯುವ ಚಟ್ನಿಯ ರುಚಿ ನಿಮ್ಮನ್ನು ಇಲ್ಲಿಗೆ ಮತ್ತೆ ಮತ್ತೆ ಬರಲು ಪ್ರೇರೇಪಿಸುತ್ತದೆ. ‘ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಮಿರ್ಚಿ ತಯಾರಿಸಲು ಬೇಕಾದ ಕಡ್ಲೆ ಹಿಟ್ಟನ್ನು ನಾವೇ ಮಿಲ್‌ಗೆ ಹೋಗಿ ಹಿಟ್ಟು ಮಾಡಿಸಿಕೊಂಡು ಬರುತ್ತೇವೆ. ಏಕೆಂದರೆ, ಅಂಗಡಿಯಲ್ಲಿ ಸಿಗುವ ಹಿಟ್ಟಿಗೆ ಬೇರೆ ಬೇರೆ ಹಿಟ್ಟುಗಳು ಮಿಕ್ಸ್‌ ಆದರೆ, ಮಿರ್ಚಿ ಗರಿ ಗರಿ ಇರುವುದಿಲ್ಲ’ ಎನ್ನುತ್ತಾರೆ ಗೋಪಾಲ್‌.

Advertisement

ಶಿರಾ ರಸ್ತೆಯ ಸುತ್ತಮುತ್ತಲಿರುವ ನೌಕರರಿಗೆ, ಕೆಲಸ ಮಾಡುವ, ಮೆಡಿಕಲ್‌ ಕಾಲೇಜ್‌ನ ವಿದ್ಯಾರ್ಥಿಗಳಿಗೆ ವಾಸವಿ ಅಚ್ಚುಮೆಚ್ಚಿನ ಹೋಟೆಲ್‌. ದಾವಣಗೆರೆ, ಚಿತ್ರದುರ್ಗ ಹುಬ್ಬಳ್ಳಿ ಕಡೆಗೆ ಪ್ರಯಾಣಿ­ಸುವವರು ಇಲ್ಲೇ ತಿಂಡಿ ತಿಂದು ಮುಂದೆ ಹೋಗುತ್ತಾರೆ.

— ಪ್ರಕಾಶ್‌ ಕೆ.ನಾಡಿಗ್‌, ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next