ಹಪ್ಪಳ, ಸಂಡಿಗೆ ಊಟದ ರುಚಿಯನ್ನೇ ಹೆಚ್ಚಿಸುತ್ತದೆ. ಪಲ್ಯ, ಸಾಂಬಾರು ಜತೆಗಿಲ್ಲದಿದ್ದರೂ ಸ್ವಲ್ಪ ಸಿಹಿ, ಸ್ವಲ್ಪ ಖಾರವಾಗಿರುವ ಸಂಡಿಗೆ ಇದ್ದರೆ ಸುಲಭವಾಗಿ ಊಟ ಮಾಡಿ ಮುಗಿಸಬಹುದು. ಹೆಚ್ಚಿನವರು ಸಂಡಿಗೆಯನ್ನು ಹಣ ಕೊಟ್ಟು ತಂದು ಮನೆಯಲ್ಲಿ ಎಣ್ಣೆಯಲ್ಲಿ ಕಾಯಿಸಿ ಸವಿಯುತ್ತಾರೆ. ಆದರೆ ಮನೆಯಲ್ಲೇ ಮಾಡುವ ಸಂಡಿಗೆ ಹೆಚ್ಚು ರುಚಿಯಾಗಿರುತ್ತದೆ ಮತ್ತು ಆರೋಗ್ಯಕರವಾಗಿಯೂ ಇರುತ್ತದೆ. ಈರುಳ್ಳಿ, ಬೆಳ್ಳುಳ್ಳಿ, ಅಕ್ಕಿ ಹಿಟ್ಟಿ ನಿಂದ ಸಂಡಿಗೆ ಮಾಡುವುದು ಹೆಚ್ಚಿನವರಿಗೆ ಗೊತ್ತೇ ಇರುತ್ತದೆ. ಆದರೆ ಆರೋಗ್ಯಕರವಾದ ರಾಗಿ ಸಂಡಿಗೆ ಮಾಡುವ ಬಗ್ಗೆ ತಿಳಿದಿರಲಿಕ್ಕಿಲ್ಲ.
ಹೆಚ್ಚಿನ ತಾಳೆ ಮತ್ತು ಸಮಯವನ್ನು ಬೇಡುವ ಸಂಡಿಗೆಯಲ್ಲಿ ರಾಗಿ ಸೆಂಡಿಗೆ ಅತ್ಯಂತ ರುಚಿಯಾಗಿರುತ್ತದೆ ಮಾತ್ರವಲ್ಲ ಆರೋಗ್ಯಕ್ಕೆ ಕೂಡ ಇದು ಉತ್ತಮ. ರಾಗಿ ಸಂಡಿಗೆ ಮಾಡುವುದು ಬಲು ಸುಲಭ. ಇದಕ್ಕಾಗಿ ಬೇಕಾಗಿರುವ ಅಗತ್ಯದ ವಸ್ತುಗಳೆಂದರೆ ರಾಗಿ ಹಿಟ್ಟು, ಮಜ್ಜಿಗೆ, ನೀರು, ಉಪ್ಪು, ಹಸಿ ಮೆಣಸು, ಜೀರಿಗೆ, ಇಂಗು, ಬಿಳಿ ಎಳ್ಳು. ರಾಗಿ ಹಿಟ್ಟಿಗಾಗಿ ರಾಗಿಯನ್ನು ತಂದು ಚೆನ್ನಾಗಿ ಒಣಗಿಸಿ ಹಿಟ್ಟು ಮಾಡಿಟ್ಟುಕೊಳ್ಳಿ.
ಸುಮಾರು ಅರ್ಧಕಪ್ ರಾಗಿಗೆ ಅರ್ಧ ಕಪ್ ಮಜ್ಜಿಗೆ, ಸ್ವಲ್ಪ ನೀರು ಹಾಕಿ ಗಂಟಿಲ್ಲದಂತೆ ಕಲಸಿಟ್ಟು ಕೊಳ್ಳಿ. 2 ಹಸಿ ಮೆಣಸು, ಅರ್ಧ ಚಮಚ ಜೀರಿಗೆ, ಸ್ವಲ್ಪ ಇಂಗು ಸೇರಿಸಿ ತರಿತರಿಯಾಗಿ ರುಬ್ಬಿ ಕೊಳ್ಳಿ. ಬಾಣಲೆಗೆ ಎರಡು ಲೋಟ ನೀರು ಹಾಕಿ ಕುದಿಯಲು ಇಡಿ. ಕುದಿಯುತ್ತಿರುವ ನೀರಿಗೆ ಉಪ್ಪು, ಜೀರಿಗೆಯ ಮಿಶ್ರಣವನ್ನು ಹಾಕಿ.
ಅನಂತರ ಕಲಸಿಟ್ಟ ರಾಗಿ ಹಿಟ್ಟನ್ನು ಸೇರಿಸಿ. ಚೆನ್ನಾಗಿ ಮಗುಚುತ್ತಾ ಇರಬೇಕು. ರಾಗಿ ಕುದಿಯುತ್ತ ದಪ್ಪವಾಗುತ್ತದೆ. ಆಗ ಬಿಳಿ ಎಳ್ಳು ಸೇರಿಸಿ. ಹಿಟನ್ನು ಒಂದು ಚಮಚದ ಅಳತೆಯಲ್ಲಿ ಬಟ್ಟೆ ಅಥವಾ ಪ್ಲಾಸ್ಟಿಕ್ ಶೀಟ್ ಮೇಲೆ ಹರಡಿ. ಎರಡು ಮೂರು ದಿನ ಬಿಸಿಲಿಗೆ ಚೆನ್ನಾಗಿ ಒಣಗಿಸಿ. ಅನಂತರ ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿಟ್ಟರೆ ಬೇಕಾದಾಗ ಎಣ್ಣೆಯಲ್ಲಿ ಕರಿದು ರಾಗಿ ಸೆಂಡಿಗೆಯನ್ನು ಸವಿಯಬಹುದು.