Advertisement

ಉಳಿದದ್ದು ಕಂಡಂತೆ!

06:00 AM Sep 12, 2018 | |

ಸಂಸ್ಕೃತ ಸುಭಾಷಿತದ ಸಾಲೊಂದು ಹೀಗೆ ಹೇಳುತ್ತದೆ -ಕುಭೋಜನಂ ಉಷ್ಣತಯಾ ವಿರಾಜತೇ’. ಅಂದರೆ, ತಣಿದ/ ಸಪ್ಪೆ /ನೀರಸ  ಅಡುಗೆಯನ್ನು ಬಿಸಿಮಾಡಿದರೆ ಮರುಭೋಜನಕ್ಕೆ ಯೋಗ್ಯವಾಗುತ್ತದೆ. ಇದು, ತೀರಾ ಸಾಮಾನ್ಯ. ಇಂದಿನ ದುಬಾರಿ ಕಾಲದಲ್ಲಿ, ಒಂದು ಹೊತ್ತಿನದು ಮಿಕ್ಕರೆ ಅದನ್ನೇ ಮತ್ತೂಂದು ಹೊತ್ತಿಗೆ ಬಳಸುವುದು ಜಾಣತನವೇ. ನಿನ್ನೆ ಉಳಿದ ಪದಾರ್ಥಗಳನ್ನು ನಾಳೆಗೆ ಹೊಸ ತಿನಿಸನ್ನಾಗಿಸಿ ಉಣ್ಣಬಹುದು. ಯಾವ್ಯಾವ ಆಹಾರ ಪದಾರ್ಥಗಳನ್ನು ಹೇಗೆಲ್ಲಾ ಬಳಸಬಹುದು ಎಂದು ಇಲ್ಲಿದೆ ನೋಡಿ…

Advertisement

1. ಅನ್ನ

ಇದನ್ನು ತಕ್ಷಣ ಬಳಸುವ ಉದ್ದೇಶವಿದ್ದರೆ, ಈರುಳ್ಳಿ ಅಥವಾ ಲಿಂಬೆಹಣ್ಣಿನ ಚಿತ್ರಾನ್ನ ತಯಾರಿಸಿ.ಇಲ್ಲವಾದರೆ, ಕುಕ್ಕರ್‌ನಲ್ಲಿ ಅನ್ನ ಹಾಕಿ ಸ್ವಲ್ಪ ನೀರು ಹಾಕಿ ಕಿವಿಚಿಕೊಳ್ಳಿ, ಅನಂತರ ಅನ್ನದ ಪ್ರಮಾಣಕ್ಕೆ ತಕ್ಕಷ್ಟು ಹೆಸರುಬೇಳೆ ತೊಳೆದು ಹಾಕಿ, ಹೆಸರುಬೇಳೆ ಪ್ರಮಾಣದ 5- 6ರಷ್ಟು ನೀರು, ಹೆಚ್ಚಿದ ಮೆಣಸಿನ ಕಾಯಿ, ಹಿಡಿ ಕಾಯಿತುರಿ, ಚಿಟಿಕೆ ಅರಿಶಿಣ,ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕರಿಬೇವು, ಜೀರಿಗೆ, ಮೆಣಸು, ಇಂಗು ಹಾಕಿ ಒಗ್ಗರಣೆ ಹಾಕಿ ಕುಕ್ಕರ್‌ ಮುಚ್ಚಿ, ಮೂರು ವಿಷಲ್‌ ಕೂಗಿಸಿದರೆ ಹುಗ್ಗಿ ತಯಾರು. 

ನೀವು ಸಿಹಿ ಪ್ರಿಯರಾಗಿದ್ದರೆ, ಉಳಿಕೆ ಅನ್ನವನ್ನು ಅಷ್ಟೇ ಪ್ರಮಾಣದ ಬೆಲ್ಲ, ಕಾಯಿತುರಿ, ಏಲಕ್ಕಿಪುಡಿ, ತುಸು ತುಪ್ಪ ಹಾಕಿ ಮಿಶ್ರಣ ಮಾಡಿ ದಪ್ಪ ತಳದ ಪಾತ್ರೆಯಲ್ಲಿಟ್ಟು ಸಣ್ಣ ಉರಿಯಲ್ಲಿ ಚೆನ್ನಾಗಿ ತಿರುವಿ. ಒಂದಕ್ಕೊಂದು ಚೆನ್ನಾಗಿ ಹೊಂದಿಕೊಂಡ ನಂತರ, ಸಿಹಿಕಾಯನ್ನ ಸವಿಯಲು ಸಿದ್ಧವಾಗುತ್ತದೆ. 

2. ಕಡಲೆ ಬೇಳೆ, ಹೆಸರು ಬೇಳೆ ಕೋಸಂಬರಿ 
ಕೋಸಂಬರಿ ಬಹಳ ಬೇಗ ಹಳಸಿಹೋಗುವ ಪದಾರ್ಥ. ಹಬ್ಬ ಹರಿದಿನಗಳಲ್ಲಿ ತಯಾರಿಸಿದ ಕೋಸಂಬರಿ ಮಿಕ್ಕಿದರೆ ಇನ್ಮುಂದೆ ಚಿಂತೆ ಬೇಡ. ಕೋಸಂಬರಿಯನ್ನು ತರಿತರಿಯಾಗಿ ರುಬ್ಬಿ, ದೋಸೆ ಹೆಂಚಿನ ಮೇಲೆ ಹುಯ್ದು ಖಾರದ ದೋಸೆ ಮಾಡಿ. ಗಟ್ಟಿಯಾಗಿ ರುಬ್ಬಿ ಖಾರದ ವಡೆಯಂತೆ, ಇಡ್ಲಿ ತಟ್ಟೆಯಲ್ಲಿ ಬೇಯಿಸಿ ಅಥವಾ ಎಣ್ಣೆಯಲ್ಲಿ ಕರಿದು ತಿನ್ನಬಹುದು. 

3.ಗಟ್ಟಿ ತರಕಾರಿಯ ಪಲ್ಯ
ಬೀಟ್‌ರೂಟ್‌, ಆಲೂಗಡ್ಡೆ, ಬಟಾಣಿ, ನವಿಲುಕೋಸು ಇತ್ಯಾದಿ ಗಟ್ಟಿ ತರಕಾರಿಗಳ ಪಲ್ಯ ಉಳಿದಾಗ, ಅವುಗಳನ್ನು ಬೋಂಡಾ ಹಿಟ್ಟಿನಲ್ಲಿ ಅದ್ದಿ, ಕರಿದರೆ ವೆಜ್‌ ಬೋಂಡಾ ತಯಾರು. 

Advertisement

4.ಹಪ್ಪಳ ಸಂಡಿಗೆ
ಹಪ್ಪಳ ಸಂಡಿಗೆಗಳು ಕ್ರಮೇಣ ಗರಿಮುರಿ ಕಳೆದು ಮೆತ್ತಗಾದಾಗ, ಅವುಗಳನ್ನು ತುಸು ಪುಡಿ ಮಾಡಿ ತಿಳಿಸಾರಿಗೆ ಬೆರೆಸಿದರೆ ಒಳ್ಳೆಯ ರುಚಿ ಕೊಡುತ್ತದೆ. ಅನ್ನಕ್ಕೆ ಸಾದಾ ಒಗ್ಗರಣೆ ಹಾಕಿ, ಪುಡಿಯಾದ ಹಪ್ಪಳ,ಸಂಡಿಗೆಗಳನ್ನು ಕಲಸಿದರೆ ಅದು ಇನ್ನೊಂದು ರೀತಿಯ ರುಚಿಕರ  ತಿನಿಸಾಗುತ್ತದೆ. 

ಕೆ.ವಿ. ರಾಜಲಕ್ಷ್ಮಿ 

Advertisement

Udayavani is now on Telegram. Click here to join our channel and stay updated with the latest news.

Next