ಹದವಾದ ಉರಿಯಲ್ಲಿ, ಸಾಕಷ್ಟು ನಂದಿನಿ ಬೆಣ್ಣೆ ತಯಾರಾಗುವ ಗರಿಗರಿಯಾದ ದೋಸೆಯನ್ನು ಏಲಕ್ಕಿ, ಲವಂಗ ಬೆರೆಸಿದ ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಅರಿಶಿನ ಹಾಗೂ ಒಗ್ಗರಣೆ ಇಲ್ಲದ ಆಲೂ ಪಲ್ಯದ ಸಾಂಗತ್ಯದಲ್ಲಿ ಹೊರಳಾಡಿಸುತ್ತಾ ತಿನ್ನುತ್ತಿದ್ರೆ, ಅರ್ಧ ಗಂಟೆ ಕಾದಿದ್ದೆಲ್ಲಾ ಮರೆತು ಹೋಗ್ಬಿಡುತ್ತೆ…
ದಾವಣಗೆರೆ ಅಂದ ತಕ್ಷಣ ನೆನಪಿಗೆ ಬರೋದು ಅಲ್ಲಿನ ನರ್ಗೀಸ್ ಮಂಡಕ್ಕಿ, ಮೆಣಸಿನಕಾಯಿ ಮತ್ತು ಬೆಣ್ಣೆ ದೋಸೆ. ಬೆಂಗಳೂರಿನಲ್ಲಿ ಅಲ್ಲಲ್ಲಿ ಈಗ ಸಾಕಷ್ಟು ಬೆಣ್ಣೆದೋಸೆ ಹೋಟೆಲ್‌ಗಳಿದ್ದರೂ, ಎಲ್ಲಾ ಕಡೆ ತಿನ್ನಲು ಸಾಧ್ಯವಿಲ್ಲ. ಅದರ ಅರ್ಧ ರುಚಿ ಅದಕ್ಕೆ ಬಳಸುವ ಬೆಣ್ಣೆಯಿಂದಲೇ ಬರುವುದರಿಂದ. ದಾವಣಗೆರೆಯವಳೇ ಆದ ನನಗೆ ಅದರ ಘಮಲಿನಿಂದಲೇ ಬಳಸಿರುವ ಬೆಣ್ಣೆ ಎಂಥದ್ದು ಎಂದು ಗೊತ್ತಾಗಿ ಹೋಗುತ್ತದೆ.
ಹಾಗಾಗಿ, ಕೆಲವೇ ಹೋಟೆಲ್‌ಗಳಲ್ಲಿ ಮಾತ್ರವೇ ನಾನು ಬೆಣ್ಣೆದೋಸೆ ತಿನ್ನೋದು. ಅಂಥ ಒಳ್ಳೆಯ (ನಂದಿನಿ) ಬೆಣ್ಣೆ ಬಳಸುವ ಹೋಟೆಲ್‌ಗಳ ಲಿಸ್ಟ್‌ನಲ್ಲಿ ರಾಜರಾಜೇಶ್ವರಿ ನಗರದ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್ ಸೇರಿಸಬಹುದು. ಕಳೆದ ಹತ್ತು ವರ್ಷದಿಂದ ಹೋಟೆಲ್ ನಡೆಸುತ್ತಿರುವ ವಿ. ನಾಗರಾಜ್ ಮೂಲತಃ ದಾವಣಗೆರೆಯವರೇ.
ಅಲ್ಲಿ ಅವರ ಅಪ್ಪ, ಚಿಕ್ಕಪ್ಪ ಎಲ್ಲರೂ ಇದೇ ಉದ್ಯಮದಲ್ಲಿರುವುದರಿಂದ ಬೆಣ್ಣೆ ದೋಸೆಗೆ ಪಕ್ಕಾ ದಾವಣಗೆರೆಯ ರುಚಿ ಬಂದಿರುವುದರಲ್ಲಿ ಆಶ್ಚರ್ಯವಿಲ್ಲ. ಹದವಾದ ಉರಿಯಲ್ಲಿ, ಸಾಕಷ್ಟು ನಂದಿನಿ ಬೆಣ್ಣೆ ಹಾಕಿಸಿಕೊಂಡು, ತಯಾರಾಗುವ ಗರಿಗರಿಯಾದ ದೋಸೆಯನ್ನು ಏಲಕ್ಕಿ, ಲವಂಗ ಬೆರೆಸಿದ ಖಾರವಾದ ತೆಂಗಿನಕಾಯಿ ಚಟ್ನಿ ಜೊತೆ ಅರಿಶಿನ ಹಾಗೂ ಒಗ್ಗರಣೆ ಇಲ್ಲದ ಆಲೂ ಪಲ್ಯದ ಸಾಂಗತ್ಯದಲ್ಲಿ ಹೊರಳಾಡಿಸುತ್ತಾ ತಿನ್ನುತ್ತಿದ್ರೆ,
ಅರ್ಧ ಗಂಟೆ ಕಾಕಾದಿದ್ದೆಲ್ಲಾ ಮರೆತು ಹೋಗ್ಬಿಡುತ್ತೆ. ಬೆಳಗಿನ ಉಪಾಹಾರಕ್ಕೆ ಬೆಣ್ಣೆ ದೋಸೆ ಜೊತೆ ಬೆಣ್ಣೆ ಖಾಲಿ, ತಟ್ಟೆ ಇಡ್ಲಿ, ವಡಾ ಸಾಥ್ ಕೊಟ್ಟರೆ, ಸಂಜೆ ಪಡ್ಡು, ಈರುಳ್ಳಿ ದೋಸೆ, ಮಿರ್ಚಿ, ಒಗ್ಗರಣೆ ಮಂಡಕ್ಕಿ, ಗಿರ್ಮಿಟ್ಟು, ಗುಲಾಬ್ ಜಾಮೂನು ಸಿದ್ಧವಾಗಿರುತ್ತವೆ. ನೂರು ರೂಪಾಯಿ ಒಳಗೆ, ಒಂದು ಬೆಣ್ಣೆ ದೋಸೆ, ಒಂದು ತಟ್ಟೆ ಇಡ್ಲಿ- ವಡಾ ತಿಂದು ಕಾಫಿ ಕುಡಿಯಬಹುದು.
ಎಲ್ಲಿದೆ?: ದಾವಣಗೆರೆ ಬೆಣ್ಣೆ ದೋಸೆ, ನಂ.19, 3ನೇ ಮೇನ್, ಬಿಇಎಂಎಲ್ 5ನೇ ಹಂತ, ರಾಜರಾಜೇಶ್ವರಿ ನಗರ
ಸಮಯ: ಬೆಳಗ್ಗೆ 7ರಿಂದ ಮಧ್ಯಾಹ್ನ 12, ಸಂಜೆ 4.30- ರಾತ್ರಿ 9
ಬಿಡುವು: ಸೋಮವಾರ
* ಗಾಯತ್ರಿ ರಾಜ್