Advertisement

“ಸುಸ್ತಿ’ಜಿಜ್ಞಾಸೆ; ರೈತರಲ್ಲಿ ಮೂಡಿಸಿದೆ ಆತಂಕ

06:00 AM Jul 08, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ರೈತರ ಸಾಲ ಮನ್ನಾ ವಿಚಾರದಲ್ಲಿ ದೊಡ್ಡ ಜಿಜ್ಞಾಸೆ ಶುರುವಾಗಿದೆ. ಬಜೆಟ್‌ನಲ್ಲಿ ಸುಸ್ತಿ ಸಾಲ ಎಂದು ಪ್ರಸ್ತಾಪಿಸಿರುವುದರಿಂದ ಎಲ್ಲ ರೈತರಿಗೂ ಸಾಲ ಮನ್ನಾ “ಭಾಗ್ಯ’ ಸಿಗುವುದು ಅನುಮಾನ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಡಿಸೆಂಬರ್‌ 31, 2017ರಲ್ಲಿದ್ದಂತೆ ಸುಸ್ತಿ ಸಾಲ ಮನ್ನಾ ಎಂದು ಹೇಳಿರುವುದರಿಂದ ಸಾಲ ಮನ್ನಾ ಎಲ್ಲ ರೈತರಿಗೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾ ಸಹಕಾರ ಬ್ಯಾಂಕುಗಳು ಹೇಳುತ್ತಿವೆ. ಅವರ ಪ್ರಕಾರ ಈಗಾಗಲೇ ಸಹಕಾರ ಸಂಘಗಳಲ್ಲಿ ಶೇ.94ರಷ್ಟು ರೈತರು ಸಾಲ ನವೀಕರಣ ಮಾಡಿ ಕೊಂಡಿದ್ದಾರೆ.

ಹೀಗಿರುವಾಗ ಸುಸ್ತಿ ಸಾಲ ಮನ್ನಾ ಎಂದರೆ ಕಡಿಮೆ ರೈತರಿಗೆ ಮಾತ್ರ ಅನುಕೂಲವಾಗಲಿದೆ.ಹೀಗಾಗಿ, ಸಂಪೂರ್ಣ ಸಾಲಮನ್ನಾ ಅಥವಾ ಕನಿಷ್ಠ ಎರಡು ಲಕ್ಷ ರೂ.ಸಾಲ ಮನ್ನಾ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ. ಸುಸ್ತಿದಾರರ ಸಾಲ ಮನ್ನಾ ಮಾತ್ರ ಎಂದರೆ ರಾಜ್ಯದ 21 ಜಿಲ್ಲಾ ಸಹಕಾರ ಬ್ಯಾಂಕ್‌ ಗಳ ವ್ಯಾಪ್ತಿಯಲ್ಲಿ 1 ಲಕ್ಷ ರೈತರು ಮೀರು ವುದಿಲ್ಲ. ಅವರ ಸುಸ್ತಿ ಸಾಲದ ಮೊತ್ತವೂ 1000 ಕೋಟಿ ರೂ. ದಾಟುವುದಿಲ್ಲ ಎಂದು ಹೇಳಲಾಗುತ್ತಿದೆ.

ಬಜೆಟ್‌ನಲ್ಲಿ ಘೋಷಿಸಿರುವ ಸಾಲಮನ್ನಾ ಸಹಕಾರ ಸಂಘಗಳಲ್ಲಿ ಸಾಲ ಪಡೆದಿರುವಬಹುತೇಕ ರೈತರಿಗೆ ಅನ್ವಯವಾಗುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಜಿಲ್ಲಾ ಸಹಕಾರ ಬ್ಯಾಂಕ್‌ನ ಅಧ್ಯಕ್ಷರೊಬ್ಬರು ತಿಳಿಸುತ್ತಾರೆ. ಹೀಗಾಗಿ, ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶವಾಗಿ ನಿಯಮಾವಳಿ ರೂಪಿಸಿದ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ ಎನ್ನುವುದು ಅವರ ಅಭಿಮತ.

ರಾಜ್ಯದ 21 ಡಿಸಿಸಿ ಬ್ಯಾಂಕುಗಳಲ್ಲಿ 24.26 ಲಕ್ಷ ಕುಟುಂಬಗಳು ಖಾತೆದಾರರಾಗಿದ್ದು, ಸಿದ್ದರಾಮಯ್ಯ ಅವರು 50 ಸಾವಿರ ರೂ.ವರೆಗೆ ಸಾಲ ಮನ್ನಾ ಮಾಡಿದ್ದರಿಂದ 22.27 ಲಕ್ಷ ರೈತರಿಗೆ ಅನುಕೂಲವಾಗಿದೆ. 8,165 ಕೋಟಿ ರೂ.ವರೆಗೆ ಮನ್ನಾ ಆಗಿದೆ. 

Advertisement

2018ರ ಜೂ.20 ರೊಳಗೆ ಬಾಕಿ ಪಾವತಿಸಿದರೆ ಮಾತ್ರ 50 ಸಾವಿರ ರೂ. ಸಾಲಮನ್ನಾ ಅನ್ವಯ ಆಗಲಿದೆ ಎಂದು ಸಹಕಾರ ಸಂಘಗಳು ಸುತ್ತೋಲೆ ಹೊರಡಿಸಿದ್ದರಿಂದ ಬಹುತೇಕ 22.27 ಲಕ್ಷ ರೈತರು ಬಾಕಿ ಪಾವತಿಸಿ ಹೊಸ ಸಾಲ ಪಡೆದು ನವೀಕರಣ ಮಾಡಿಸಿಕೊಂಡಿದ್ದಾರೆ.

ಈ ಪೈಕಿ ಡಿಸೆಂಬರ್‌ 31, 2017ರ ಅಂತ್ಯಕ್ಕೆ ಸುಸ್ತಿದಾರರಾದವರ ಸಂಖ್ಯೆಯೂ ಕಡಿಮೆ.ಈ ಮಧ್ಯೆ, 50 ಸಾವಿರ ರೂ. ಸಾಲ ಮನ್ನಾ ಪ್ರಯೋಜನ ಪಡೆದು ಬಾಕಿ ತೀರಿಸಿರುವವರಿಗೆ 25 ಸಾವಿರ ರೂ. ಮರುಪಾವತಿ ಲಾಭವೂ ಸಿಗುವುದಿಲ್ಲ. ಸುಸ್ತಿ ಸಾಲಮನ್ನಾ ಘೋಷಣೆ ನಂತರ ಸಹಕಾರ ಇಲಾಖೆ ಈ ಬಗ್ಗೆ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಮೌಖೀಕ ಸೂಚನೆ ಸಹ ನೀಡಿದೆ. ಹೀಗಾಗಿ, 50 ಸಾವಿರ ರೂ. ಮನ್ನಾ ಲಾಭ ಪಡೆದಿರುವ 22.75 ಲಕ್ಷ ರೈತರು, 50 ಸಾವಿರದಷ್ಟು ಸುಸ್ತಿದಾರರಿಗೂ 25 ಸಾವಿರ ರೂ.ಲಾಭ ಸಿಗುವುದಿಲ್ಲವೆಂದು ಹೇಳಲಾಗುತ್ತಿದೆ.

ಕರಾವಳಿ, ಮಲೆನಾಡು ಭಾಗದ ಅತಿ ಹೆಚ್ಚು ರೈತರು ಸಾಲವನ್ನು ಕ್ರಮಬದಟಛಿ ವಾಗಿ ಪಾವತಿ ಮಾಡಿರುವುದರಿಂದ ಆ ಮೂರ್‍ನಾಲ್ಕು ಜಿಲ್ಲೆಗಳ ರೈತರಿಗೆ 25 ಸಾವಿರ ರೂ.ಲಾಭವಾಗುತ್ತದೆ. ಹಳೇ ಮೈಸೂರುಭಾಗದಲ್ಲಿ ಶೇ.15ರಷ್ಟು ರೈತರು ಮಾತ್ರ  ಕ್ರಮಬದಟಛಿವಾಗಿ ಸಾಲ ಮರುಪಾವತಿ ಮಾಡಿದ್ದಾರೆ. ಅವರಿಗೂ 25 ಸಾವಿರ ರೂ. ಮರುಪಾವತಿ ಲಾಭ ದೊರೆಯಲಿದೆ ಎಂದು ಹೇಳಲಾಗಿದೆ.

ಸುಸ್ತಿ, ಗಡುವು ಸರಿಯಾದ ಕ್ರಮವಲ್ಲ
ಬಜೆಟ್‌ನಲ್ಲಿ ಸುಸ್ತಿ ಸಾಲ ಹಾಗೂ ಡಿಸೆಂಬರ್‌ 31, 2017ರ ಗಡುವು ಎಂಬ ಪದ ತೆಗೆದು, 2018ರ ಮೇ 31 ಅಂತ್ಯದವರೆಗೂ ರೈತರು ಪಡೆದಿರುವ ಎರಡು ಲಕ್ಷ ರೂ.ಸಾಲ ಮನ್ನಾ ಎಂದು ಹೇಳಿದ್ದರೆ ಎಲ್ಲ ರೈತರಿಗೂ ಶೇ.100ಕ್ಕೆ 100ರಷ್ಟು ಸಾಲಮನ್ನಾದ ಲಾಭ ಸಿಗುತ್ತಿತ್ತು.

ಏಕೆಂದರೆ ರಾಜ್ಯದಲ್ಲಿ ಸಹಕಾರ ಸಂಘಗಳಲ್ಲಿ ಪಡೆದಿದ್ದ ಒಟ್ಟಾರೆ ಸಾಲದ ಪ್ರಮಾಣವೇ 12,100 ಕೋಟಿ ರೂ. ಆ ಪೈಕಿ ಸಿದ್ದರಾಮಯ್ಯ ಸರ್ಕಾರ 8,165 ಕೋಟಿ ರೂ.ಸಾಲ ಮನ್ನಾ ಮಾಡಿದೆ. ಉಳಿದ ಮೊತ್ತ ಇರುವುದೇ 4 ಸಾವಿರ ಕೋಟಿ ರೂ. ಎಂಬುದು ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಅಧ್ಯಕ್ಷರ ವಾದ. ಆದರೆ, 50 ಸಾವಿರ ರೂ.ಸಾಲ ಮನ್ನಾ ನಂತರ ಹೊಸ ಸಾಲ ನವೀಕರಣ ಆದ ಮೇಲೆ ಒಟ್ಟು ಸಾಲ 11 ಸಾವಿರ ಕೋಟಿ ರೂ.ನಷ್ಟಾಗಿದೆ. ಎಲ್ಲ ರೈತರು, ಮೇ 31ರವರೆಗೆ ಪಡೆದಿರುವ ಸಾಲದಲ್ಲಿ ಎರಡು ಲಕ್ಷ ರೂ. ಮನ್ನಾ ಎಂದರೆ ಅಷ್ಟೂ ತುಂಬಿಕೊಡಬೇಕಾಗುತ್ತದೆ ಎಂದು ಸಹಕಾರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಾರ್ಗಸೂಚಿ ಬದಲಾವಣೆ ಬಗ್ಗೆ ಚಿಂತನೆ
ಈ ಮಧ್ಯೆ, ಸುಸ್ತಿ ಸಾಲ ಮನ್ನಾ ಎಂದು ಉಲ್ಲೇಖ ಮಾಡಿರುವುದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗದು ಎಂಬ ಜಿಲ್ಲಾ ಸಹಕಾರ ಬ್ಯಾಂಕುಗಳ ಅಭಿಪ್ರಾಯ ಹಿನ್ನೆಲೆಯಲ್ಲಿ
ಮಾರ್ಗಸೂಚಿ ಬದಲಾವಣೆ ಮಾಡುವ ಬಗ್ಗೆಯೂ ಗಂಭೀರ ಚಿಂತನೆ ನಡೆದಿದೆ.

ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ಅವರಿಗೆ ಸಹಕಾರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕುಗಳ ಅಧ್ಯಕ್ಷರ ಜತೆ ಸಭೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಲು ಮಾಡಬೇಕಿರುವ ಬದಲಾವಣೆಗಳ ಬಗ್ಗೆ ಟಿಪ್ಪಣಿ ತಯಾರಿಸುವಂತೆ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಸರ್ಕಾರದ ಉತ್ತರ ಸಂದರ್ಭದಲ್ಲಿ ಒಂದಷ್ಟು ಮಾರ್ಪಾಡು ಘೋಷಣೆ ಯಾಗಬಹುದೆಂದು ಹೇಳಲಾಗಿದೆ. ಆರ್ಥಿಕ ಇಲಾಖೆ ಅಧಿಕಾರಿಗಳಲ್ಲೂ ಸಾಲ ಮನ್ನಾ, ಜಿಲ್ಲಾವಾರು ರೈತರ ಅಂಕಿ-ಸಂಖ್ಯೆಯ ನಿಖರ ಮಾಹಿತಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next