Advertisement

ಉದ್ಯಮ ಆಕರ್ಷಣೆಗೆ ಟಾಸ್ಕ್ ಪೋರ್ಸ್

08:31 AM May 13, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ಪರಿಣಾಮವಾಗಿ ವಿಶ್ವದ ಹಲವು ರಾಷ್ಟ್ರಗಳು ಚೀನಾದಿಂದ ತಮ್ಮ ಉದ್ದಿಮೆ ಹಾಗೂ ಬಂಡವಾಳ ಹಿಂತೆಗೆಯಲು ಸಿದ್ಧವಾಗಿವೆ. ಇಂತಹ ಹೊರ ರಾಷ್ಟ್ರದ ಉದ್ದಿಮೆಗಳನ್ನು ಕರ್ನಾಟಕ ರಾಜ್ಯಕ್ಕೆ ತರಲು ಸಚಿವ ಸಂಪುಟದಲ್ಲಿ ಚರ್ಚಿಸಿ, ಟಾಸ್ಕ್ ಪೋರ್ಸ್‌ ರಚನೆ ಮಾಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

Advertisement

ಇಲ್ಲಿನ ನೂತನ ನ್ಯಾಯಾಲಯ ಆವರಣದಲ್ಲಿ ವಕೀಲರ ಸಂಘದಡಿ ಗೌರವಧನದೊಂದಿಗೆ ಕೆಲಸ ನಿರ್ವಹಿಸುತ್ತಿರುವ ಕಾರಕೂನರು, ಬೆರಳಚ್ಚುಗಾರರಿಗೆ, ಝೆರಾಕ್ಸ್‌ ಅಂಗಡಿಯವರಿಗೆ ಎಸ್‌.ಎಸ್‌. ಫೌಂಡೇಶನ್‌ ವತಿಯಿಂದ ಆಹಾರ ಧಾನ್ಯವಿತರಿಸಿ ಅವರು ಮಾತನಾಡಿದರು. ಜಪಾನ್‌, ದಕ್ಷಿಣ ಕೋರಿಯಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಚೀನಾದಲ್ಲಿ ಬಂಡವಾಳ ಹೂಡುವುದನ್ನು ಹಿಂತೆಗೆದಿದ್ದಾರೆ. ಈ ಬಂಡವಾಳವನ್ನು ಭಾರತ ಹಾಗೂ ಕರ್ನಾಟಕಕ್ಕೆ ತರಲು ಉನ್ನತ ಅಧಿಕಾರಿಗಳ ತಂಡ ರಚಿಸಲಾಗಿದೆ. ಬಂಡವಾಳವನ್ನು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಲಾಕ್‌ಡೌನ್‌ ಕರೆಗೆ ದೇಶದ ಜನತೆ ಸ್ಪಂದಿಸಿದ್ದಾರೆ. 41 ದಿನಗಳ ಲಾಕ್‌ಡೌನ್‌ ಯಶಸ್ವಿಯಾಗಿದೆ. ಅಮೆರಿಕಾ, ಇಟಲಿ, ಇಂಗ್ಲೆಂಡ್‌ ಸೇರಿದಂತೆ ಇತರೆ ಯೂರೋಪ್‌ ರಾಷ್ಟ್ರಗಳಿಗಿಂತ ಭಾರತದಲ್ಲಿ ಕೊರೊನಾ ಹಾವಳಿ ನಿಯಂತ್ರಣದಲ್ಲಿದೆ ಎಂದರು.

ಕೋವಿಡ್ ಪ್ರಕರಣ ಶೂನ್ಯಕ್ಕೆ ತರುವುದು ಸಾಧ್ಯವಿಲ್ಲ. ದೇಶದಲ್ಲಿ ಕೋವಿಡ್‌-19ಕ್ಕೆ ಒಳಗಾದ ಶೇ. 50ಜನರು ರೋಗ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 107 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಇದರಲ್ಲಿ 37ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನು 37 ಜನರು ಗುಣಮುಖ ಆಗಲಿದ್ದಾರೆ. ಓರ್ವ ವೃದ್ಧೆ  ಕೋವಿಡ್‌-19 ರೋಗಕ್ಕೆ ಬಲಿಯಾಗಿದ್ದಾರೆ ಎಂದು ವಿವರಿಸಿದರು.

ಮಾಸ್ಕ್ ಧರಿಸುವುದು. ಸ್ಯಾನಿಟೈಸರ್‌ ಬಳಕೆ, ಸಾಮಾಜಿಕ ಅಂತರ ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಲಿವೆ. ಲಾಕ್‌ ಡೌನ್‌ ನಂತರ ರಾಜ್ಯದಲ್ಲಿ ಶೇ. 25ರಷ್ಟು ಕೈಗಾರಿಕೆಗಳು ಮತ್ತೆ ಕಾರ್ಯಾರಂಭ ಆಗಿವೆ ಎಂದರಲ್ಲದೇ, ಆರ್ಥಿಕ ಚಟುವಟಿಕೆಗಳ ಪ್ರಾರಂಭಕ್ಕೆ ಉತ್ತೇಜನ ನೀಡಲಾಗುವುದು. ಕೋವಿಡ್ ನಂತರ ದೇಶದ ಅಭಿವೃದ್ಧಿ ಇನ್ನು ಹೆಚ್ಚು ಆಗಲಿದೆ ಎನ್ನುವ ಆಶಯ ವ್ಯಕ್ತಪಡಿಸಿದರು.

Advertisement

ನಮ್ಮ ತಂದೆ ಎಸ್‌.ಎಸ್‌. ಶೆಟ್ಟರ್‌ ಹುಬ್ಬಳ್ಳಿ ವಕೀಲರ ಸಂಘದ ಸದಸ್ಯರಾಗಿ 50 ವರ್ಷಗಳ ಸೇವೆ ಸಲ್ಲಿಸಿದ್ದರು. ನಾನು ಆರಂಭದ ದಿನಗಳಲ್ಲಿ ವಕೀಲರ ಸಂಘದ ಸದಸ್ಯನಾಗಿದ್ದೆ. ಕೊರೊನಾ ಸಂದರ್ಭದಲ್ಲಿ ಸಂಘದ ನೆರವಿಗೆ ನಿಲ್ಲುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು.

ಶಾಸಕ ಪ್ರದೀಪ ಶೆಟ್ಟರ್‌, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಗುರು ಎಫ್‌. ಹಿರೇಮಠ, ಪಾಲಿಕೆ ಮಾಜಿ ಸದಸ್ಯ ಮಹೇಶ ಬುರ್ಲಿ, ಸಂಕಲ್ಪ ಶೆಟ್ಟರ್‌ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next