Advertisement

Smart cityಗೆ ಬಂತು ಟಾರ್ಪಲಿನ್‌ ಬಸ್‌ ನಿಲ್ದಾಣ!

12:57 PM Aug 01, 2024 | Team Udayavani |

ಸ್ಟೇಟ್‌ಬ್ಯಾಂಕ್‌: ನಗರ, ಗ್ರಾಮಾಂತರವೆನ್ನದೆ ಜಿಲ್ಲೆ, ಹೊರಜಿಲ್ಲೆಗಳ ಮೂಲೆ ಮೂಲೆಗಳಿಗೆ ಸಂಚರಿಸಲು ನಿಂತಿರುವ ಸಾಲು ಸಾಲು ಬಸ್‌ ಗಳು, ಮಳೆಯಲ್ಲೇ ಕೊಡೆ ಹಿಡಿದು ನಿಂತಿರುವ ಪ್ರಯಾಣಿಕರು, ತಲೆಯ ಮೇಲೆ ಬಟ್ಟೆ ಹಾಕಿಕೊಂಡು ಅತ್ತಿಂದಿತ್ತ ಓಡಾಡಿ ಪ್ರಯಾಣಿಕರನ್ನು ಕರೆಯುವ ನಿರ್ವಾಹಕರು… ಟಾರ್ಪಲಿನ್‌ನಡಿ ನಿಂತು ಅರೆಬರೆ ಒದ್ದೆಯಾಗಿ ಮುದುಡಿಕೊಂಡು ನಿಂತಿರುವ ಬಸ್‌ ಏಜೆಂಟರು, ಪ್ರಯಾಣಿಕರು…!

Advertisement

ಇದು ಸ್ಮಾರ್ಟ್‌ಸಿಟಿ ಮಂಗಳೂರಿಗೆ ಮೊದಲು ಬಂದವರು ಸಾಮಾನ್ಯವಾಗಿ ಇಳಿಯುವ ಕೇಂದ್ರಸ್ಥಳವಾಗಿರುವ ಸ್ಟೇಟ್‌ಬ್ಯಾಂಕ್‌ನ ಖಾಸಗಿ ಬಸ್‌ ನಿಲ್ದಾಣದ ಚಿತ್ರಣ. ಈ ಬಸ್‌ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಅರೆಬರೆಯಾಗಿ ನಡೆದಿರುವುದರಿಂದ ಅವ್ಯವಸ್ಥೆ ಉಂಟಾಗಿದೆ.

ಬಸ್‌ಗಳು ನಿಲುಗಡೆಯಾಗಲು, ಪ್ರಯಾಣಿಕರು ತಂಗಲು ಲೇನ್‌ಗಳನ್ನು ನಿರ್ಮಿಸಿ ಪ್ರತ್ಯೇಕವಾಗಿ ಶೆಲ್ಟರ್‌ ನಿರ್ಮಿಸುವ ಯೋಜನೆ ಇಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಸಿಟಿ, ಸರ್ವಿಸ್‌ ಮಾತ್ರವಲ್ಲದೆ ಕೆಲವು ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೂ ಇಲ್ಲಿ ಅವಕಾಶವಿದೆ. ಆದರೆ ಶೆಲ್ಟರ್‌ಗಳ ನಿರ್ಮಾಣ ಅರ್ಧಕ್ಕೆ ನಿಂತು ವರ್ಷ ಎರಡು ಕಳೆದಿವೆ. ಸಿಟಿ ಬಸ್‌ಗಳು ನಿಲುಗಡೆಯಾಗುವ ಎರಡು ಲೇನ್‌ಗಳು ಮತ್ತು ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲುಗಡೆಯಾಗುವ ಒಂದು ಲೇನ್‌ನಲ್ಲಿ ಪ್ರಯಾಣಿಕರು ತಂಗಲು ಮೇಲ್ಛಾವಣೆಯೇ ಇಲ್ಲದೆ ಬಿಸಿಲು, ಮಳೆಗೆ ನಿಲ್ಲಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇದೀಗ ಮತ್ತೂಂದು ಮಳೆಗಾಲದಲ್ಲಿಯೂ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಟಾರ್ಪಲಿನ್‌ನಿಂದ ರಕ್ಷಣೆ!
ಉಡುಪಿ ಕಡೆಗೆ ಹೋಗುವ ಎಕ್ಸ್‌ಪ್ರೆಸ್‌ ಬಸ್‌ಗಳು ನಿಲುಗಡೆಯಾಗುವ ಸ್ಥಳದಲ್ಲಿ ಬಸ್‌ ನಿರ್ವಾಹಕರು, ಏಜೆಂಟರು ಸೇರಿ ಟಾರ್ಪಲಿನ್‌ ಹಾಕಿ ಸಣ್ಣದೊಂದು ಸೂರು ಮಾಡಿಕೊಂಡಿದ್ದಾರೆ. ಜೋರು ಮಳೆ ಬಂದಾಗ ಅದರಡಿಯಲ್ಲಿ ನಿಂತು ಪ್ರಯಾಣಿಕರನ್ನು ಕರೆಯುತ್ತಾರೆ. ಕೆಲವು ಪ್ರಯಾಣಿಕರು ಕೂಡ ಇದೇ ಟಾರ್ಪಲಿನ್‌ನಡಿಯಲ್ಲಿ ನಿಂತುಕೊಳ್ಳುತ್ತಾರೆ. ಕೆಲವು ತುಂಡು ಶೀಟ್‌ಗಳನ್ನು, ಟಾರ್ಪಲಿನ್‌ನ್ನು ಜೋಡಿಸಿ ಇದನ್ನು ಮಾಡಲಾಗಿದೆ. ಯಾವಾಗ ಗಾಳಿಗೆ ಹಾರಿ ಹೋಗುತ್ತದೋ ಹೇಳಲಾಗದ ಸ್ಥಿತಿಯಲ್ಲಿದೆ.

ಕುಳಿತುಕೊಳ್ಳಲು ಆಸನವೂ ಇಲ್ಲ
ಮೂರು ಲೇನ್‌ಗಳಲ್ಲಿ ಮೇಲ್ಛಾವಣಿ ಇಲ್ಲ, ಇನ್ನುಳಿದ ಲೇನ್‌ಗಳಲ್ಲಿ ಮೇಲ್ಛಾವಣಿ ಇದೆ. ಆದರೆ ಅಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಬೆಂಚ್‌ ವ್ಯವಸ್ಥೆಯೇ ಇಲ್ಲ. ಬಸ್‌ಗಾಗಿ ಕಾಯುವವರು ನಿಂತುಕೊಂಡೇ ಇರಬೇಕು. ಅಶಕ್ತರು, ಹಿರಿಯ ನಾಗರಿಕರು ನೆಲದ ಮೇಲೆಯೇ ಕುಳಿತುಕೊಳ್ಳಬೇಕಾದ ಸ್ಥಿತಿ ಇಲ್ಲಿದೆ. ಕೆಲವು ನಿರ್ವಾಹಕರು ತಮ್ಮ ಬಸ್‌ನ ಒಂದೆರಡು ಹಳೆಯ ಸೀಟ್‌ಗಳನ್ನೇ ಬಸ್‌ ಶೆಲ್ಟರ್‌ನಲ್ಲಿಟ್ಟು ಅದರಲ್ಲಿ ಕುಳಿತುಕೊಳ್ಳುತ್ತಿದ್ದಾರೆ!

Advertisement
Advertisement

Udayavani is now on Telegram. Click here to join our channel and stay updated with the latest news.

Next