ತರೀಕೆರೆ: ಪಟ್ಟಣದ ಪುರಸಭೆಯ ಚುನಾವಣೆ ಘೋಷಣೆಯಾಗಿದೆ. ಕ್ಷೇತ್ರಗಳ ಮೀಸಲಾತಿಯನ್ನು ಸರಕಾರ ಪ್ರಕಟ ಮಾಡಿದೆ. ಅವಧಿ ಮುಗಿದು 2 ವರ್ಷದ ನಂತರ ಚುನಾವಣೆ ನಡೆಯಲಿದೆ. ಇದರ ನಡುವೆ ಚುನಾವಣೆಯ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇದರ ನಡುವೆ ಚುನಾವಣೆ ನಡೆಯಲಿದೆ. ಪುರಸಭೆಯ ಚುನಾವಣೆ ನಡೆದಿದ್ದು ಮಾರ್ಚ್ 2013ರಲ್ಲಿ.
ಒಂದು ವರ್ಷ ಕಾಲ ಅಧ್ಯಕ್ಷ- ಉಪಾದ್ಯಕ್ಷರ ಚುನಾವಣೆ ನಡೆಯಲಿಲ್ಲ. ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪ್ರಶ್ನಿಸಿ ಆಯ್ಕೆಗೊಂಡ ಪ್ರತಿನಿಧಿಗಳು ನ್ಯಾಯಾಲಯದ ಮೊರೆ ಹೋಗಿದ್ದ ಕಾರಣ ಮಾ. 14, 2014ರಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನಡೆದಿತ್ತು. ಇದರ ಅವಧಿ ಮುಗಿದಿದ್ದು 2019ರಲ್ಲಿ. 2019ರಲ್ಲಿ ನಡೆಯಬೇಕಾಗಿದ್ದ ಚುನಾವಣೆ 2 ವರ್ಷಗಳ ನಂತರ ನಡೆಯುತ್ತಿದೆ. ಸರಕಾರ ಹೊರಡಿಸಿದ ಮೀಸಲಾತಿ ಸರಿಯಿಲ್ಲ. ಅವೈಜ್ಞಾನಿಕವಾಗಿದೆ ಎಂದು ಪುನಃ ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಮುಂದೂಡುತ್ತ ಬರಲಾಗಿತ್ತು.
ಪುರಸಭೆಯ 23 ವಾರ್ಡ್‌ಗಳ ಚುನಾವಣೆಯ ಅಖಾಡವೇನೋ ಸಿದ್ಧವಾಗಿದೆ. ಚುನಾವಣೆಗೆ ಸ್ಪರ್ಧಿಸುವ ಬಯಕೆ ಇಟ್ಟುಕೊಂಡ ಹುರಿಯಾಳುಗಳು ಪಕ್ಷದ ಮುಖಂಡರ ಮನೆ ಬಾಗಿಲಿಗೆಗೆ ಎಡ ತಾಕುತ್ತಿದ್ದಾರೆ. ರಾಜಕೀಯ ಪಕ್ಷಗಳು ಪೂರ್ವ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ಸಮರ್ಪಕವಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿದಲ್ಲಿ ಅಧಿ ಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗುತ್ತದೆ ಎನ್ನುತ್ತಾನೆ ಮತದಾರ.
ಪುರಸಭೆ ವಾರ್ಡ್‌ಮೀಸಲಾತಿ ವಿವರ : 1ನೇ ವಾರ್ಡ್: ಹಿಂದುಳಿದ ವರ್ಗ”ಎ’ ಮಹಿಳೆ, 2ನೇ ವಾರ್ಡ್: ಸಾಮಾನ್ಯ, 3ನೇ ವಾರ್ಡ್: ಪರಿಶಿಷ್ಟ ಜಾತಿ 4ನೇ ವಾರ್ಡ್: ಸಾಮಾನ್ಯ, 5ನೇ ವಾರ್ಡ್: ಹಿಂದುಳಿದ ವರ್ಗ ಎ, 6ನೇ ವಾರ್ಡ್: ಸಾಮಾನ್ಯ ಮಹಿಳೆ, 7ನೇ ವಾರ್ಡ್: ಹಿಂದುಳಿದ ವರ್ಗ “ಬಿ’ 8ನೇ ವಾರ್ಡ್: ಹಿಂದುಳಿದ ವರ್ಗ “ಎ’ ಮಹಿಳೆ, 9ನೇ ವಾರ್ಡ್: ಸಾಮಾನ್ಯ ಮಹಿಳೆ, 10 ನೇ ವಾರ್ಡ್: ಸಾಮಾನ್ಯ, 11ನೇ ವಾರ್ಡ್: ಹಿಂದುಳಿದ ವರ್ಗ-ಎ, 12ನೇ ವಾರ್ಡ್: ಪರಿಶಿಷ್ಟ ಜಾತಿ ಮಹಿಳೆ, 13ನೇ ವಾರ್ಡ್: ಪರಿಶಿಷ್ಟ ಜಾತಿ, 14ನೇ ವಾರ್ಡ್: ಸಾಮಾನ್ಯ ಮಹಿಳೆ, 15ನೇ ವಾರ್ಡ್: ಪರಿಶಿಷ್ಟ ಪಂಗಡ, 16ನೇ ವಾರ್ಡ್: ಹಿಂದುಳಿದ ವರ್ಗ ಮಹಿಳೆ. 17ನೇ ವಾರ್ಡ್: ಸಾಮಾನ್ಯ, 18ನೇ ವಾರ್ಡ್: ಸಾಮಾನ್ಯ. 19ನೇ ವಾರ್ಡ್: ಹಿಂದುಳಿದ ವರ್ಗ-ಎ, 20ನೇ ವಾರ್ಡ್: ಸಾಮಾನ್ಯ ಮಹಿಳೆ, 21ನೇ ವಾರ್ಡ್‌ಸಾಮಾನ್ಯ ಮಹಿಳೆ, 22ನೇ ವಾರ್ಡ್ ಸಾಮಾನ್ಯ ಮತ್ತು 23ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯುತ್ತದೆ ಎಂಬ ಲೆಕ್ಕಾಚಾರ ಆರಂಭವಾಗಿದೆ. ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದು ಶಾಸಕರು ಬಿಜೆಪಿಯವರೇ ಆಗಿದ್ದಾರೆ. ಪುರಸಭೆ ಇತಿಹಾಸದಲ್ಲಿ ಇಲ್ಲಿಯ ತನಕ ಬಿಜೆಪಿ ಅಧಿಕಾರ ಹಿಡಿಯುವಲ್ಲಿ
ಸಫಲವಾಗಿಲ್ಲ. ಈ ಬಾರಿಯಾದರೂ ಅಧಿಕಾರದ ಚುಕ್ಕಾಣಿ ಹಿಡಿದೀತೇ ಎಂಬುದನ್ನು ಕಾಯ್ದು ನೋಡಬೇಕಾಗಿದೆ.