Advertisement

ಹಂತ ಹಂತವಾಗಿ ಗ್ರಾಮಗಳ ಅಭಿವೃದ್ಧಿಗೆ ಬದ್ಧ

04:02 PM Jan 11, 2020 | Naveen |

ತರೀಕೆರೆ: ನಾನು ಮೊದಲ ಬಾರಿ ಶಾಸಕನಾಗಿದ್ದ ಸಮಯದಲ್ಲಿ ಬಾವಿಕೆರೆಯಿಂದ ಕರಕುಚ್ಚಿ ಗ್ರಾಮದ ಸಿದ್ದೇಗೌಡರ ಸರ್ಕಲ್‌ ರಸ್ತೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ, ನಂತರ ಬಂದ ಜನಪ್ರತಿನಿ ಧಿಗಳು ರಸ್ತೆ ಕಡೆ ಗಮನ ಹರಿಸದ ಕಾರಣ ಪೂರ್ಣವಾಗಿ ಹಾಳಾಗಿದೆ. ಪುನಃ ಈ ರಸ್ತೆ ಕಾಮಗಾರಿಗೆ ನನ್ನ ಅವಧಿ ಯಲ್ಲಿಯೇ ಅಡಿಗಲ್ಲು ಹಾಕುತ್ತಿರುವುದು ಸಂತಸ ತಂದಿದೆ ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

Advertisement

ಬಾವಿಕೆರೆ ಗ್ರಾಮದಲ್ಲಿ 2.30ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಂಡಿರುವ 3.6 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಪ್ರತಿ ಒಂದು ಕಿ.ಮೀ. ರಸ್ತೆ ಅಭಿವೃದ್ಧಿಗೆ 60ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಇದರಿಂದ ಗುಣಮಟ್ಟದ ರಸ್ತೆ ಅಭಿವೃದ್ಧಿಯಾಗಲಿದೆ. ರಸ್ತೆ ಕಾಮಗಾರಿ ಹಲವು ವರ್ಷಗಳ ವರೆಗೆ ಬಾಳಿಕೆ ಬರುವಂತರಿಬೇಕು. ಬಾವಿಕೆರೆ ಗ್ರಾಮ ಅತ್ಯಂತ ದೊಡ್ಡ ಗ್ರಾಮ. ಇಲ್ಲಿನ ಮೂಲಭೂತ ಸೌಕರ್ಯಗಳನ್ನು ಪೂರೈಸಲು
10 ಕೋಟಿ ರೂ. ಅಗತ್ಯವಿದೆ. ಹಂತ ಹಂತವಾಗಿ ಗ್ರಾಮವನ್ನು ಅಭಿವೃದ್ಧಿಪಡಿಸಲಾಗುವುದು. ಪ್ರತಿವರ್ಷ ಬರುವ ಅನುದಾನದಲ್ಲಿ 1.5 ಕೋಟಿ ರೂ. ಅನ್ನು ಬಾವಿಕೆರೆ ಗ್ರಾಮದ ಸರ್ವತೋಮುಖ
ಅಭಿವೃದ್ಧಿಗೆ ನೀಡಲಾಗುವುದು ಎಂದು ಹೇಳಿದರು.

ಬಾವಿಕೆರೆ ಗ್ರಾಮ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತವಾದ ಗ್ರಾಮ. ಮನೆಗಳು ದೂರವಿರುವುದರಿಂದ ಪ್ರತಿಯೊಂದು ರಸ್ತೆಯೂ ದೂರ ಇವೆ. ಇದರಿಂದ ಒಂದೊಂದು ಬೀದಿಗೂ ಕೋಟಿಗಟ್ಟಲೇ ಹಣದ ಅಗತ್ಯವಿದೆ. ಅಲ್ಪಸಂಖ್ಯಾತ ಇಲಾಖೆಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣವಾಗಲಿದೆ. ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಸುತ್ತಮುತ್ತಲು ಕಾಂಕ್ರೀಟ್‌ ರಸ್ತೆ ಅಭಿವೃದ್ಧಿಪಡಿಸಲು 11ಲಕ್ಷ ರೂ. ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಗ್ರಾಮಕ್ಕೆ ಡಿಪ್ಲೋಮಾ ಕಾಲೇಜು ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅರಣ್ಯ ಇಲಾಖೆ ಗುರುತಿಸಿರುವ ಸ್ಥಳ ಅರಣ್ಯ ಇಲಾಖೆಗೆ ಸೇರಿದೆ ಎಂಬ ಕಾರಣಕ್ಕೆ ನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ. ಅರಣ್ಯ ಇಲಾಖೆ ಬದಲಿ ಜಮೀನು ನೀಡಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ.

Advertisement

ಅಲ್ಲದೇ, ಬಾವಿಕೆರೆ ಗ್ರಾಮದ ಅರ್ಧ ಭಾಗ ಕೂಡ ಅರಣ್ಯ ಇಲಾಖೆ ಸೇರಿರುವುದರಿಂದ ಇಲ್ಲಿಯ ಜನರಿಗೆ ಈಸ್ವತ್ತು ಸಿಗುತ್ತಿಲ್ಲ. ಇದರ ಬಗ್ಗೆ ಕೆಡಿಪಿ ಸಭೆ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಲಾಖೆ ಬದಲಿ ಜಮೀನು ನೀಡಿ ಎಲ್ಲರಿಗೂ ಈ ಸ್ವತ್ತು ನೀಡಲಾಗುವುದು ಎಂದರು.

ಗ್ರಾಮದ ಮುಖಂಡ ಮೂಡ್ಲಗಿರಿಯಪ್ಪ ಮಾತನಾಡಿ, ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಶಾಸಕರು ಪರಿಹರಿಸಬೇಕು. ಕೋರೆ ಗ್ರಾಮದ ಅಭಿವೃದ್ಧಿಗೆ 6 ಲಕ್ಷ ರೂ., ಯರೇಬೈಲು ಸಂಪರ್ಕ ಸೇತುವೆ ಕಾಮಗಾರಿಗೆ 20 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಿದ್ದಾರೆ ಎಂದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಮಂಜುಳಾ, ತಿಮ್ಮೇಶ್‌ ಬಾಬು, ಗಾಪಂ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಎಇಇ ಮನೋಹರ್‌ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next