Advertisement

ಕರ್ನಾಟಕವೇ ಗುರಿ: ಕಾರ್ಯಕಾರಿಣಿ ಮೊದಲ ದಿನವೇ ರಾಜ್ಯದ ಬಗ್ಗೆ ಆದ್ಯತೆಯ ಚರ್ಚೆ

01:40 AM Jan 17, 2023 | Team Udayavani |

ಬೆಂಗಳೂರು/ಹೊಸದಿಲ್ಲಿ: ಕರ್ನಾಟಕ ಸಹಿತ ಎಲ್ಲ 9 ರಾಜ್ಯಗಳಲ್ಲೂ 2023ರಲ್ಲಿ ಎದುರಾಗಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕೆಲಸ ಮಾಡಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷದ ಮುಖಂಡರಿಗೆ ಸ್ಪಷ್ಟ ಮಾತುಗಳಲ್ಲಿ ಸೂಚಿಸಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಸೋಮವಾರ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆರಂಭವಾಗಿದ್ದು, ಇದರಲ್ಲಿ ಎಲ್ಲ 9 ರಾಜ್ಯಗಳ ಸ್ಥಿತಿಗತಿಗಳ ಬಗ್ಗೆ ಸುದೀರ್ಘ‌ ಚರ್ಚೆ ನಡೆದಿದೆ. ಪ್ರಮುಖವಾಗಿ ರಾಜ್ಯ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಸರಕಾರ ಹಾಗೂ ಪಕ್ಷ ನಡೆಸಿ ರುವ ಸಿದ್ಧತೆ ಬಗ್ಗೆ ವರಿಷ್ಠರು ರಾಜ್ಯ ನಾಯಕರಿಂದ ಮಾಹಿತಿ ಪಡೆದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಅನಂತರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಿಎಂ ಬೊಮ್ಮಾಯಿ ಸುದೀರ್ಘ‌ವಾಗಿ ವಿವರಿಸಿದ್ದಾರೆ.

ಈಶಾನ್ಯ ಭಾರತದ ರಾಜ್ಯಗಳ ಸಹಿತ 9 ರಾಜ್ಯಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿ
ಸಿದ್ದರು. ಆದರೆ ಕರ್ನಾಟಕದ ವಿದ್ಯಮಾನಗಳ ಬಗ್ಗೆಯೇ ವರಿಷ್ಠರು ಹೆಚ್ಚು ಗಮನ ಹರಿಸಿದ್ದರು ಎನ್ನಲಾಗಿದೆ. ಚುನಾವಣ ಸಿದ್ಧತೆಗೆ ಸಂಬಂಧ ಪಟ್ಟಂತೆ ರಾಜ್ಯ ಘಟಕ ಹಾಗೂ ಸರಕಾರದಿಂದ ಮಾಹಿತಿ ಪಡೆದಿರುವ ವರಿಷ್ಠರು ಮಂಗಳವಾರ ಕಾರ್ಯತಂತ್ರದ ಬಗ್ಗೆ ಸ್ಪಷ್ಟ ಗುರಿ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಅರ್ಧ ಗಂಟೆ ವಿವರಣೆ
ರಾಜ್ಯದಲ್ಲಿ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ತೆಗೆದುಕೊಂಡ ಮಹತ್ವಾಕಾಂಕ್ಷಿ ಯೋಜನೆಗಳು, ಅಂಕಿಸಂಖ್ಯೆಗಳು, ಫ‌ಲಾನುಭವಿಗಳ ವಿವರ ಹಾಗೂ ಅದರಿಂದ ಚುನಾವಣೆಯ ಮೇಲಾಗುವ ಪರಿಣಾಮದ ಬಗ್ಗೆ ಬೊಮ್ಮಾಯಿ ಅರ್ಧಗಂಟೆ ಕಾಲ ವಿವರಣೆ ನೀಡಿದ್ದಾರೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಸಂಘಟನಾತ್ಮಕ ವಿಷಯಗಳ ಬಗ್ಗೆ ಅರ್ಧಗಂಟೆ ವರಿಷ್ಠರಿಗೆ ಮಾಹಿತಿ ನೀಡಿದ್ದಾರೆ. ಎಲ್ಲ 9 ರಾಜ್ಯಗಳಿಂದ ಮಾಹಿತಿ ಪಡೆದ ನಂತರ ಪ್ರತ್ಯೇಕವಾಗಿ ತಂತ್ರಗಾರಿಕೆ ಬಗ್ಗೆ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಡಿ.ವಿ.ಸದಾನಂದ ಗೌಡ, ಮಾಜಿ ಡಿಸಿಎಂಗಳಾದ ಕೆ.ಎಸ್‌.ಈಶ್ವರಪ್ಪ, ಗೋವಿಂದ ಕಾರಜೋಳ, ಆರ್‌.ಅಶೋಕ, ಸಂಸದ ಉಮೇಶ್‌ ಜಾಧವ್‌, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ್‌ ಪೂಜಾರಿ ರಾಜ್ಯದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.

Advertisement

ಮಹದಾಯಿ-ಭದ್ರಾ ಕುರಿತು ಸಭೆ
ಕಾರ್ಯಕಾರಿಣಿ ಮಧ್ಯೆ ಬಿಡುವು ಮಾಡಿಕೊಳ್ಳುವ ಸಿಎಂ ಬಸವರಾಜ್‌ ಬೊಮ್ಮಾಯಿ ರಾಜ್ಯದ ಮಹತ್ವದ ಜಲವಿದ್ಯುತ್‌ ಯೋಜನೆಗಳ ಬಗ್ಗೆ ಕೇಂದ್ರ ಸರಕಾರದ ನಾನಾ ಇಲಾಖೆಗಳ ಜತೆಗೆ ಸಭೆ ನಡೆಸುವರು. ಕೇಂದ್ರ ಜಲಶಕ್ತಿ ಸಚಿವರ ಜತೆ ಈ ಸಂಬಂಧ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಮಹದಾಯಿ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳ ಬಗ್ಗೆ ಅವರು ಈ ಸಂದರ್ಭದಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನಿ ರೋಡ್‌ ಶೋ
ಬಿಜೆಪಿ ಕಾರ್ಯಕಾರಿಣಿ ಆರಂಭಕ್ಕೂಮುನ್ನ ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯ ಪಟೇಲ್‌ ಚೌಕ್‌ನಿಂದ ಎನ್‌ಡಿಎಂಸಿ ಕನ್ವೆನ್‌ಶನ್‌ ಸೆಂಟರ್‌ ವರೆಗೆ ರೋಡ್‌ ಶೋ ನಡೆಸಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತಿದ್ದ ಸಾರ್ವಜನಿಕರು ಪ್ರಧಾನಿಯವರ ಮೇಲೆ ಪುಷ್ಪವೃಷ್ಟಿ ನಡೆಸಿದ್ದು ಮಾತ್ರ ವಲ್ಲದೆ, ಜಯ ಘೋಷಣೆಯನ್ನೂ ಮಾಡಿದ್ದಾರೆ. ಎರಡೂ ಸ್ಥಳಗಳಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರ ಬೃಹತ್‌ ಕಟೌಟ್‌ಗಳನ್ನು ಹಾಕಲಾಗಿತ್ತು.

4 ದಿಕ್ಕಿನಿಂದ ಬಿಜೆಪಿ ರಥಯಾತ್ರೆ
ರಾಜ್ಯ ವಿಧಾನಮಂಡಲ ಅಧಿವೇಶನದ ಬಳಿಕ ರಾಜ್ಯದ 4 ಕಡೆಯಿಂದ ರಥಯಾತ್ರೆ ನಡೆಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು. ಬಿಜೆಪಿ ಕಾರ್ಯಕಾರಿಣಿಯ ಬಳಿಕ ಹೊಸದಿಲ್ಲಿ ಯಲ್ಲಿ ಅವರು ಮಾತನಾಡಿದರು.

“ಕಾರ್ಯಕಾರಿಣಿಯಲ್ಲಿ ಹಲವು ರಾಜಕೀಯ ನಿರ್ಣಯ ತೆಗೆದುಕೊಳ್ಳಲಾಗಿದೆ. ರಥಯಾತ್ರೆ ಬಗ್ಗೆ ನಿರ್ಧಾರವಾಗಿದೆ. ಸದ್ಯದಲ್ಲೇ ಅದರ ಸ್ವರೂಪ ನಿರ್ಧರಿಸುತ್ತೇವೆ’ ಎಂದು ಸಿಎಂ ಹೇಳಿದರು.

ಬೂತ್‌ ಮಟ್ಟದ ಕಾರ್ಯಕ್ರಮಗಳಿಂದ ಹಿಡಿದು ಸಂಘಟನೆ ಬಗ್ಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next