ಬೆಂಗಳೂರು: “ಮುಂದಿನ ಮೂರು ವರ್ಷಗಳಲ್ಲಿ ನಗರಾದ್ಯಂತ ಒಂದು ಕೋಟಿ ಸಸಿ ನೆಡುವ ಗುರಿ ಇದೆ’ ಎಂದು ಬಿಬಿಎಂಪಿ ಮೇಯರ್ ಗೌತಮಕುಮಾರ್ ತಿಳಿಸಿದರು. ನಗರದ ಸ್ವಾತಂತ್ರ್ಯ ಉದ್ಯಾಶುಕ್ರವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ “ಕೋಟಿ ವೃಕ್ಷ ಆಂದೋಲನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾಲಿಕೆ ಅರಣ್ಯ ವಿಭಾಗ, ಕೋಟಿ ವೃಕ್ಷ ಸೈನ್ಯ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿ ಸಸಿ ನೆಟ್ಟು ಪೋಷಿಸುವ ಗುರಿ ಇದೆ ಎಂದು ಹೇಳಿಪರಿಸರ ಉಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಉತ್ತಮ ಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಸಸಿಗಳನ್ನು ನೆಟ್ಟು ನಿರ್ವಹಣೆ ಮಾಡಲಾಗುತ್ತಿದೆ.
ನಾಲ್ಕು ತಿಂಗಳ ಹಿಂದೆ ಹಲಸೂರು ಕೆರೆ ಬಳಿ ನೆಟ್ಟಿರುವ ಸಸಿಗಳು ಬೆಳೆದು ಸುಂದರ ವಾತಾವರಣ ನಿರ್ಮಾಣವಾಗಿದೆ ಎಂದರು. ಪಾಲಿಕೆ ಅರಣ್ಯ ವಿಭಾಗದ ವಿಶೇಷ ಆಯುಕ್ತ ಜಿ. ಮಂಜುನಾಥ್ ಮಾತನಾಡಿ, ಕೋಟಿ ವೃಕ್ಷ ಆಂದೋಲನದಡಿ 3 ವರ್ಷದಲ್ಲಿ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಿದ್ದು, ವಿವಿಧ ಸಂಘ-ಸಂಸ್ಥೆಗಳ ಜತೆ ಸರ್ಕಾರಿ ಜಾಗ, ರೈಲ್ವೆ ಹಳಿಗಳ ಪಕ್ಕ ಹಾಗೂ ಖಾಲಿ ಜಾಗದಲ್ಲಿ ಸಸಿಗಳನ್ನು ನೆಟ್ಟು ಸಂರಕ್ಷಣೆ ಮಾಡುವ ಯೋಜನೆ ರೂಪಿಸಲಾಗಿದೆ.
ಪಾಲಿಕೆಯ ನಾಲ್ಕು ರ್ಸರಿಗಳಿದ್ದು, ಸುಮಾರು ಹತ್ತು ಲಕ್ಷ ಸಸಿಗಳು ಇವೆ. ಅದನ್ನು ಪಾಲಿಕೆ, ಸಾರ್ವಜನಿಕರು, ಎನ್ ಜಿಓಗಳ ಸಹಯೋಗದಲ್ಲಿ ನೆಡಲಾಗುವುದು ಎಂದರು. ಶಾಸಕ ದಿನೇಶ್ ಗುಂಡೂರಾವ್, ಆಯುಕ್ತ ಬಿ.ಎಚ್. ಅನಿಲ್ ಕುಮಾರ್, ತೋಟಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾದೇವಿ ನಾಗರಾಜು, ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷಿನಾರಾಯಣ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಂಗನಾಥ ಸ್ವಾಮಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗಂಗಾಧರ ಸ್ವಾಮಿ ಇತರರಿದ್ದರು.