Advertisement

ಕರ್ನಾಟಕದಲ್ಲಿ ಟಾರ್ಗೆಟ್‌ 20+

06:45 AM May 21, 2018 | |

ಬೆಂಗಳೂರು: ಕರ್ನಾಟಕದಲ್ಲಿ ಟಾರ್ಗೆಟ್‌ 20+! ಹೌದು, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯವೊಂದರಲ್ಲೇ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಉದ್ದೇಶದಿಂದಲೇ ಕಾಂಗ್ರೆಸ್‌, ಜೆಡಿಎಸ್‌ ಮಡಿಲಿಗೆ ಮುಖ್ಯಮಂತ್ರಿ ಸ್ಥಾನ ಹಾಕಿ ತ್ಯಾಗಮಯಿ ಪಟ್ಟ ಹೊತ್ತಿದೆ. 

Advertisement

ಜತೆಗೆ ಜಾತ್ಯತೀತ ಶಕ್ತಿಗಳ ಒಗ್ಗೂಡುವಿಕೆಗೆ ಕಾಂಗ್ರೆಸ್‌ ಹಿರಿತನ ಬಿಟ್ಟುಕೊಡುತ್ತದೆ ಹಾಗೂ ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ರವಾನಿಸುವ ಸಲುವಾಗಿಯೇ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ. ಜತೆ ಜೊತೆಗೆ, ರಾಜ್ಯದಲ್ಲಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್‌ 20ಕ್ಕೂ ಹೆಚ್ಚು ಸ್ಥಾನ ಗೆದ್ದು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಸಾಮರ್ಥ್ಯ ಮೆರೆಯುವ ಆಲೋಚನೆಯೂ ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ ಎಂದೂ ಹೇಳಲಾಗುತ್ತಿದೆ.

ಡಿಕೆಶಿ “ಪವರ್‌’: ಇನ್ನು, ರಾಜ್ಯದ ಮಟ್ಟಿಗೆ ಹೇಳಬೇಕಾದರೆ ಸದ್ಯಕ್ಕೆ ಕಾಂಗ್ರೆಸ್‌ಗೆ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾದರೂ ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ ಬಿಜೆಪಿ ಪ್ರಯತ್ನಗೆ ತಡೆಯೊಡ್ಡಲು ಜೆಡಿಎಸ್‌ ಬೆಂಬಲಿಸದೇ ಬೇರೆ ಮಾರ್ಗವೇ ಇರಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಅವರನ್ನು ಒಪ್ಪಿಸಿಯೇ ಮೈತ್ರಿಕೂಟ ಸರ್ಕಾರ ರಚನೆಗೆ ಕೈ ಹಾಕಿದೆ.

ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ಮಹತ್ವಾಕಾಂಕ್ಷೆ ಹೊಂದಿರುವ ಡಿ.ಕೆ.ಶಿವಕುಮಾರ್‌, ಇದೀಗ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು “ಹೆಡ್‌ಮಾಸ್ಟರ್‌’ನಂತೆ ಕೆಲಸ ಮಾಡಿರುವುದರಿಂದ ಒಕ್ಕಲಿಗ ಸಮುದಾಯದಲ್ಲೂ ಅವರ ಬಗ್ಗೆ ಹೆಚ್ಚು ಒಲವು ಸೃಷ್ಟಿಯಾಗಿದೆ. ಐದು ವರ್ಷಗಳಲ್ಲಿ ಅಧಿಕಾರ ಹಂಚಿಕೆ ಸೂತ್ರವೇನಾದರೂ ಆದರೆ, ಎರಡನೇ ಅವಧಿಗೆ ಮುಖ್ಯಮಂತ್ರಿ ಪಟ್ಟ ದೊರೆಯಬಹುದು. ಒಂದೊಮ್ಮೆ ಆಗ, ದಲಿತರಿಗೆ ಕೊಡಬೇಕು ಎಂಬ ಕೂಗು ಬಂದರೆ ದಲಿತ ಕೋಟಾ ಸಹ ಕಾಂಗ್ರೆಸ್‌ನಲ್ಲಿ ಮುಗಿಯಲಿದೆ.

ಕಾಂಗ್ರೆಸ್‌ಗೆ 2023ರ ಗುರಿ: 2023ರ ಚುನಾವಣೆ ವೇಳೆಗೆ ಕೆಪಿಸಿಸಿ ನೇತೃತ್ವ ವಹಿಸಿ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಮತಬ್ಯಾಂಕ್‌ ಕಾಂಗ್ರೆಸ್‌ ಕಡೆ ವಾಲುವಂತೆ ಮಾಡುವುದು ಡಿ.ಕೆ.ಶಿವಕುಮಾರ್‌ ಲೆಕ್ಕಾಚಾರ. ಕುಮಾರಸ್ವಾಮಿಯವರಿಗೆ ಎರಡು ಬಾರಿ ಅವಕಾಶ ಸಿಕ್ಕಿದೆ. ಕಾಂಗ್ರೆಸ್‌ ಬೆಂಬಲಿಸುವ ಮೂಲಕ ನನಗೆ ಒಮ್ಮೆ ಅವಕಾಶ ಕೊಡಿ ಎಂದು ಮನವಿ ಮಾಡಬಹುದು.

Advertisement

1994 ರಲ್ಲಿ ಎಚ್‌.ಡಿ.ದೇವೇಗೌಡರನ್ನು ಬೆಂಬಲಿಸಿದ್ದ ಒಕ್ಕಲಿಗ ಸಮುದಾಯ, 1999 ರಲ್ಲಿ ಕಾಂಗ್ರೆಸ್‌ ನೇತೃತ್ವ ವಹಿಸಿದ್ದ ಎಸ್‌.ಎಂ.ಕೃಷ್ಣ ಅವರನ್ನು ಬೆಂಬಲಿಸಿತ್ತು. ಹೀಗಾಗಿ, ಅವರು ಮುಖ್ಯಮಂತ್ರಿಯೂ ಆದರು. ಮುಂದಿನ ಚುನಾವಣೆ ವೇಳಗೆ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ನೇತೃತ್ವ ವಹಿಸಿದರೆ ಒಕ್ಕಲಿಗ ಸಮುದಾಯ ಕಾಂಗ್ರೆಸ್‌ ಬೆನ್ನಿಗೆ ನಿಲ್ಲಬಹುದು ಎಂಬ ಲೆಕ್ಕಾಚಾರವಿದೆ.

ರಾಜ್ಯದಲ್ಲಿ  ಒಕ್ಕಲಿಗ, ಲಿಂಗಾಯಿತ ಸಮುದಾಯದ ಬೆಂಬಲ ಇಲ್ಲದೇ ಯಾವುದೇ ಪಕ್ಷ ಬಹುಮತ ಪಡೆಯಲು ಸಾಧ್ಯವಿಲ್ಲ. ಮುಸ್ಲಿಂ ಹೊರತುಪಡಿಸಿ, ಕುರುಬ ಸೇರಿದಂತೆ ಹಿಂದುಳಿದ ಹಾಗೂ ದಲಿತ ಸಮುದಾಯವೂ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್‌ ಜತೆಗಿಲ್ಲ ಎಂಬುದು ಕಾಂಗ್ರೆಸ್‌ಗೂ ಈ ಚುನಾವಣೆ ಫ‌ಲಿತಾಂಶದಿಂದ ಮನವರಿಕೆಯಾಗಿದೆ. ಹೀಗಾಗಿ, ದೂರವಾಗಿರುವ ಒಕ್ಕಲಿಗ ಮತಬ್ಯಾಂಕ್‌ ಕಾಂಗ್ರೆಸ್‌ ತೆಕ್ಕೆಗೆ ಮತ್ತೆ ತೆಗೆದುಕೊಳ್ಳುವ ಕಾರ್ಯತಂತ್ರವೂ ಎಚ್‌.ಡಿ.ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಹಿಂದಿದೆ ಎಂದು ಹೇಳಲಾಗುತ್ತಿದೆ.

ರಾಷ್ಟ್ರಮಟ್ಟದಲ್ಲೂ ಕರ್ನಾಟಕ ಮಾದರಿ ಬರಲಿ
ಈ ಮಧ್ಯೆ ಕರ್ನಾಟಕದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಕೂಟ ಅಸ್ತಿತ್ವಕ್ಕೆ ಬರಲು ಸಿದ್ಧವಾಗಿರುವಂತೆಯೇ ರಾಷ್ಟ್ರಮಟ್ಟದಲ್ಲೂ ಇದೇ ಮಾದರಿ ಅನುಸರಿಸುವಂತೆ ಕಾಂಗ್ರೆಸ್‌ ಮುಂದೆ ಪಟ್ಟು ಹಿಡಿಯಲು ಪ್ರಾದೇಶಿಕ ಪಕ್ಷಗಳು ನಾಯಕರು ಸಿದ್ಧರಾಗಿ ಕುಳಿತಿದ್ದಾರೆ.

ಈ ಬಗ್ಗೆ ಟಿಎಂಸಿಯ ಮಮತಾ ಬ್ಯಾನರ್ಜಿ, ಎಡರಂಗಗಳ ಡಿ.ರಾಜಾ ಅವರು ನೇರವಾಗಿಯೇ ಪ್ರಸ್ತಾಪಿಸಿದ್ದು 2019ಕ್ಕೆ ಯಾರು ಪ್ರಧಾನಿ ಅಭ್ಯರ್ಥಿಯಾಗಬೇಕು ಎಂಬುದು ಈಗಿನ ವಿಷಯವಲ್ಲ. ಅದು ಫ‌ಲಿತಾಂಶ ಬಂದ ನಂತರದ್ದು. ಆದರೆ, ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆ ರಾಜಕಾರಣ ಮಾಡಬೇಕು ಎಂಬುದು ಈ ಪಕ್ಷಗಳ ನಿಲುವಾಗಿದೆ.

ಪ್ರಾದೇಶಿಕ ಪಕ್ಷಗಳ ಲೆಕ್ಕಾಚಾರ ಹೇಗೆ?
ಸದ್ಯ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳ ಫೆಡರಲ್‌ ಫ್ರಂಟ್‌ ನಿರ್ಮಿಸಿಕೊಂಡು 2019ರ ಲೋಕಸಭೆ ಚುನಾವಣೆಗೆ ಸಿದ್ಧವಾಗುತ್ತಿರುವವರಲ್ಲಿ ಮಮತಾ ಬ್ಯಾನರ್ಜಿ ಅವರೇ ಮೊದಲಿಗರು. ಮೊದಲಿನಿಂದಲೂ ಮಮತಾಗೆ ರಾಹುಲ್‌ ನೇತೃತ್ವ ಇಷ್ಟವಿಲ್ಲ. ಕರ್ನಾಟಕದಲ್ಲಿ ಮೈತ್ರಿಕೂಟ ರಚನೆಯಾದ ಬಳಿಕ ಕುಮಾರಸ್ವಾಮಿ ಮತ್ತು ದೇವೇಗೌಡರಿಗೆ ಅಭಿನಂದಿಸಿ, ರಾಹುಲ್‌ ಮತ್ತು ಸೋನಿಯಾ ಗಾಂಧಿ ಹೆಸರಿಸದೇ ಜೆಡಿಎಸ್‌ ಜತೆ ಕೈಜೋಡಿಸಿರುವ ಕಾಂಗ್ರೆಸ್‌ಗೂ ಶ್ಲಾ ಸುತ್ತೇನೆ ಎಂಬ ಹೇಳಿಕೆ ನೀಡಿದ್ದರು. ಈ ಮೂಲಕ ಸ್ಪಷ್ಟವಾಗಿ ಪ್ರಾದೇಶಿಕ ಪಕ್ಷಗಳ ಕೈಗೆ ನೇತೃತ್ವ ಕೊಟ್ಟು ಕಾಂಗ್ರೆಸ್‌ ಪಕ್ಕಕ್ಕೆ ಸರಿಯಬೇಕು ಎಂಬ ಆಲೋಚನೆಯನ್ನೂ ಮುಂದೆ ಬಿಟ್ಟಿದ್ದಾರೆ.

ಡಿ.ರಾಜಾ, ಸಿಪಿಐ 2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಾತ್ರ ಹಿರಿದು. ಮಹಾಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಇದ್ದರೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅನ್ನು ದೂರ ಇರಿಸಬಹುದು. ಆದರೆ, ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಈಗಲೇ ನಿರ್ಧಾರ ಬೇಡ. ಚುನಾವಣೆ ಮುಗಿದು ಫ‌ಲಿತಾಂಶ ಬರಲಿ. ನಂತರ ನೋಡೋಣ ಎಂದಿದ್ದಾರೆ. ಜತೆಗೆ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ ಪ್ರಾದೇಶಿಕ ಪಕ್ಷಗಳ ಬೆಳವಣಿಗೆಗೆ ಅನುಕೂಲಕರವಾಗಿದೆ ಎಂಬುದೂ ರಾಜಾ ಅವರ ವಿಶ್ಲೇಷಣೆ. 

ತಾರೀಖ್‌ ಅನ್ವರ್‌, ಎನ್‌ಸಿಪಿ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್‌, “ಕೊಡುವ’ ಮತ್ತು 
“ತೆಗೆದುಕೊಳ್ಳುವ’ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲೇಬೇಕು ಎಂಬುದು ಎನ್‌ಸಿಪಿಯ ಅಭಿಮತ. ಆದರೆ, ಕಾಂಗ್ರೆಸ್‌ ತಾನು ದೊಡ್ಡ ಮತ್ತು ರಾಷ್ಟ್ರೀಯ ಪಕ್ಷ ಎಂಬ ವಿಚಾರ ಮುಂದಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದಿಲ್ಲ. ನಾನು ಕಾಂಗ್ರೆಸ್‌ನಲ್ಲೇ ಇದ್ದು ಬಂದವನಾಗಿರುವುದರಿಂದ ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್‌ ಅವಕಾಶ ನೀಡುವುದು ಕಡಿಮೆಯೇ ಎಂದು ಹೇಳಿದ್ದಾರೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next