ವಾಷಿಂಗ್ಟನ್: ನಾನು ಹಿಂದೂ ಎಂಬ ಕಾರಣಕ್ಕೆ ವಿಪಕ್ಷಗಳು ನನ್ನ ಮೇಲೆ ವಾಗ್ಧಾಳಿ ನಡೆಸುತ್ತಿವೆ ಎಂದು ಡೆಮಾಕ್ರಾಟ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಣಕ್ಕಿಳಿ ಯಲಿರುವ ತುಳಸಿ ಗಬ್ಟಾರ್ಡ್ ಹೇಳಿ ದ್ದಾರೆ. ಹಿಂದೂ ಎಂಬ ಕಾರಣಕ್ಕೆ ಅಮೆರಿಕದ ಬಗ್ಗೆ ನನಗೆ ಇರುವ ದೇಶಭಕ್ತಿಯನ್ನು ಪ್ರಶ್ನಿಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.
ರಿಲೀಜಿಯಸ್ ನ್ಯೂಸ್ ಸರ್ವಿಸ್‌ಗೆ ಈ ಕುರಿತು ಸುದೀರ್ಘ ಲೇಖನ ಬರೆದಿರುವ ತುಳಸಿ, ದೇಶದ ಬಗ್ಗೆ ನನ್ನ ಬದ್ಧತೆಯನ್ನು ಪ್ರಶ್ನಿಸಲಾಗುತ್ತಿದೆ. ಆದರೆ ಇದೇ ಪ್ರಶ್ನೆಯನ್ನು ಹಿಂದೂಯೇತರ ನಾಯಕರಿಗೆ ಯಾರೂ ಕೇಳಲಿಲ್ಲ. ಇದು ದ್ವಿಮುಖ ನೀತಿಯನ್ನು ತೋರಿಸುತ್ತಿದೆ. ಅಲ್ಲದೆ, ಧರ್ಮಾಂಧತೆಯನ್ನು ಪ್ರದರ್ಶಿಸುತ್ತದೆ ಎಂದು ಅವರು ಕಿಡಿಕಾರಿದ್ದಾರೆ.
ನನಗೆ ಅಮೆರಿಕದ ಬಗ್ಗೆ ಬದ್ಧತೆಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ, ನಾನು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದನ್ನು ಉಲ್ಲೇಖೀಸಲಾಗುತ್ತಿದೆ. ಆದರೆ ಮೋದಿಯವರನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಎಲ್ಲರೂ ಭೇಟಿ ಮಾಡಿದ್ದರು ಸಂಸತ್ತಿಗೆ ಪ್ರವೇಶಿಸಿದ ಮೊದಲ ಹಿಂದೂ ಅಮೆರಿಕನ್ ನಾನು ಎಂಬ ಹೆಗ್ಗಳಿಕೆ ನನಗಿದೆ. ಹಾಗೆಯೇ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿಯುವಲ್ಲಿ ಮೊದಲ ಹಿಂದೂ ಅಮೆರಿಕನ್ ಎಂಬ ಹೆಮ್ಮೆಯೂ ನನಗಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗಷ್ಟೇ ತುಳಸಿ ಗಬ್ಟಾರ್ಡ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದು, ಅದರ ನಂತರ ಅನೇಕರು ಅಮೆರಿಕದ ಬಗೆಗಿನ ಅವರ ಬದ್ಧತೆಯನ್ನು ಪ್ರಶ್ನಿಸತೊಡಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.