ಡೆಹ್ರಾಡೂನ್: ಎರಡು ದಿನಗಳ ಹಿಂದಷ್ಟೇ ಅಮೃತಸರದಲ್ಲಿ ಬಾಂಬ್ ಸ್ಫೋಟ ನಡೆದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ, ದಿಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರ ಫೋಟೋ ಬಿಡುಗಡೆ ಮಾಡಿದ್ದಾರೆ. ಇವರು ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದು, ವಿಧ್ವಂಸಕ ಕೃತ್ಯ ನಡೆಸಲು ದೆಹಲಿಗೆ ಬಂದಿರಬಹುದೆಂದು ಪೊಲೀಸರು ಅನುಮಾನಿಸಿದ್ದು, ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಈ ಇಬ್ಬರು ಕಿ.ಮೀ. ಗುರುತಿನ ಕಲ್ಲೊಂದರ ಆಜುಬಾಜಿನಲ್ಲಿ ನಿಂತು ಕ್ಲಿಕ್ಕಿಸಿದ ಫೋಟೋ ಇದಾಗಿದ್ದು, ಆ ಕಲ್ಲಿನ ಮೇಲೆ ಫಿರೋಜು³ರ 9 ಕಿ.ಮೀ., ದೆಹಲಿ 360 ಕಿ.ಮೀ. ಎಂದು ಉರ್ದುವಿನಲ್ಲಿ ಬರೆಯಲಾಗಿದೆ.
ಐಎಸ್‌ಐ ಕೈವಾಡ?: ಇದೇ ವೇಳೆ, ಪಟಿಯಾಲಾದಲ್ಲಿ ಇತ್ತೀಚೆಗೆ ಬೇಧಿಸಲಾಗಿದ್ದ ವಿಧ್ವಂಸಕ ಕೃತ್ಯದ ಸಂಚಿನ ರೂಪುರೇಷೆಗಳು ಹಾಗೂ ಅಮೃತಸರ ದಾಳಿಯ ರೂಪುರೇಷೆಗಳಲ್ಲಿ ಸಾಮ್ಯತೆ ಇದ್ದು, ಇವು ಪಾಕಿಸ್ತಾನದ ಐಎಸ್‌ಐ ಮಾದರಿಯದ್ದಾಗಿವೆ ಎಂದು ತನಿಖೆಯಲ್ಲಿ ಶಂಕಿಸಲಾಗಿದೆ.