ಮಂಗಳೂರು: ಇಡೀ ಜಗತ್ತಿನಲ್ಲಿ ಮಾರಕ ಕೊರೊನಾ ವೈರಸ್ ವ್ಯಾಪಿಸುತ್ತಿದ್ದು, ಆ ಕುರಿತು “ಉದಯವಾಣಿ’ ಪತ್ರಿಕಾ ಬಳಗದ “ತರಂಗ’ ವಾರಪತ್ರಿಕೆಯಲ್ಲಿ 31 ವರ್ಷಗಳ ಹಿಂದೆಯೇ ಬರೆದಿದ್ದ ಲೇಖನ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1989ರ ಜುಲೈ 16ರ “ತರಂಗ’ ವಾರಪತ್ರಿಕೆಯಲ್ಲಿ “ನೆಗಡಿ-ನಗಬೇಡಿ’ ಎನ್ನುವ ಶೀರ್ಷಿಕೆಯಲ್ಲಿ ಈ ಲೇಖನ ಪ್ರಕಟವಾಗಿತ್ತು. ನಾಲ್ಕು ಪುಟಗಳ ಈ ಲೇಖನವನ್ನು ಕೊಳ್ಳೆಗಾಲ ಮೂಲದ ಕಲ್ಯಾಣ ವೆಂಕಟ ಸುಬ್ರಹ್ಮಣ್ಯ ಶರ್ಮ (ಕೊಳ್ಳೆಗಾಲ ಶರ್ಮ) ಅವರು ಬರೆದಿದ್ದರು.
ಶರ್ಮ ಅವರು ತಮ್ಮ 28ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ಪಿಎಚ್.ಡಿ.ಮಾಡುತ್ತಿದ್ದ ವೇಳೆ ಜನರಲ್ಲಿ ಸಾಮಾನ್ಯವಾಗಿ ಕಂಡು ಬರುವ ನೆಗಡಿ-ಶೀತದ ಕುರಿತಂತೆ ಈ ವಿಸ್ತೃತ ಲೇಖನವನ್ನು ಬರೆದಿದ್ದರು. 59ರ ಹರೆಯದ ಶರ್ಮ ಅವರು ಈಗ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನ ಸಂಸ್ಥೆ (ಸಿಎಫ್‌ಟಿಆರ್‌ಐ)ಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.
31 ವರ್ಷಗಳ ಹಿಂದಿನ “ತರಂಗ’ದಲ್ಲಿನ ಲೇಖನದ ತುಣುಕೊಂದು ಈಗ ಎಲ್ಲೆಡೆ ವೈರಲ್ ಆಗಿರುವುದು ಅವರ ಗಮನಕ್ಕೂ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು “ಉದಯವಾಣಿ’ಯೊಂದಿಗೆ ಮಾತನಾಡಿದ್ದು, ಬಹಳ ವರ್ಷಗಳ ಹಿಂದೆ “ತರಂಗ’ಕ್ಕೆ ಬರೆದಿದ್ದ ಲೇಖನ ಈಗ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ನಮಗೆ ವೈರಸ್‌ನಿಂದ ನೆಗಡಿ ಹೇಗೆ ಬರುತ್ತದೆ ಎನ್ನುವುದನ್ನು ಉಲ್ಲೇಖೀಸುವಾಗ ಕೊರೋನಾ ವೈರಸ್ ಬಗ್ಗೆ ಬರೆದಿದ್ದೆ.
ಕೊರೋನಾದಲ್ಲಿ ಹಲವು ಮಾದರಿಯ ವೈರಸ್‌ಗಳಿವೆ. ನೆಗಡಿ ಕೂಡ ಒಂದು ಗುಂಪಿನ ಕೊರೋನಾ ವೈರಸ್‌ನಿಂದಲೇ ಬರುವಂಥದ್ದು. ಎಷ್ಟೋ ಬಾರಿ ಪ್ರಾಣಿಗಳಲ್ಲಿಯೂ ಕೊರೋನಾ ವೈರಸ್ ಕಾಣಿಸಿಕೊಂಡು ಮನುಷ್ಯನಿಗೆ ಹರಡುತ್ತದೆ ಎಂದು ತಿಳಿಸಿದ್ದಾರೆ. ಕೊರೋನಾ ಕುರಿತಂತೆ “ತರಂಗ’ದಲ್ಲಿ 31 ವರ್ಷ ಗಳ ಹಿಂದೆ ಪ್ರಕಟವಾಗಿದ್ದ ಲೇಖನದ ತುಣುಕೊಂದನ್ನು ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಮುಕುಂದ ಚಿಪ್ಳೂಂಕರ್.