Advertisement
“ಈ ಬಾರಿ ಯಾವುದೇ ಹೈಪ್ ಮಾಡ್ತಿಲ್ಲ. ಹೈಪ್ ಮಾಡಿದರೆ ತಪ್ಪು. ದೊಡ್ಡ ಸದ್ದು ಮಾಡಿದರೆ, ಜನ ಚಿತ್ರದ ಬಗ್ಗೆ ಏನೇನೋ ಕಲ್ಪನೆ ಇಟ್ಟುಕೊಂಡು ಬಂದಿರುತ್ತಾರೆ. ತಲೆಯಲ್ಲಿ ಕಥೆಯ ಬಗ್ಗೆ ಒಂದು ಚೌಕಟ್ಟು ಹಾಕಿಕೊಂಡು ಬಂದಿರುತ್ತಾರೆ. ಆ ಲೆವೆಲ್‌ಗೆ ಚಿತ್ರ ಇರದಿದ್ದರೆ ಬೇಸರ ಆಗೋದು ಖಂಡಿತಾ. ಹೈಪ್ ಇಲ್ಲದಿದ್ದರೆ ಸುಮ್ಮನೆ ಬಂದು ಚಿತ್ರ ನೋಡುತ್ತಾರೆ. ಅದೇ ಕಾರಣಕ್ಕೆ ಈ ಬಾರಿ ಹೈಪ್ ಮಾಡಿಲ್ಲ’ ಎನ್ನುತ್ತಾರೆ ದರ್ಶನ್. ಹೈಪ್ ಇಲ್ಲದಿದ್ದರೂ ಅಭಿಮಾನಿಗಳು ಬಂದು ಚಿತ್ರ ನೋಡಿ, ಇಷ್ಟಪಡುತ್ತಾರೆ ಎಂಬ ನಂಬಿಕೆ ಅವರದ್ದು.
Related Articles
Advertisement
ಗೆದ್ದರೆ ಎಲ್ಲರೂ ಅಪ್ಪಂದಿರು: ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಚಿತ್ರಗಳೆಂದರೆ ನೂರಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಎನ್ನುವಂತಿತ್ತು. ಆದರೆ, “ತಾರಕ್’ಗೆ ದರ್ಶನ್ ಅವರು ಕೊಟ್ಟಿದ್ದು 65 ದಿನ ಮಾತ್ರ. ಅಷ್ಟರಲ್ಲೇ ನಿರ್ದೇಶಕ ಪ್ರಕಾಶ್ ಈ ಚಿತ್ರವನ್ನು ಮುಗಿಸಿದ್ದಾರೆ. “ಕೆಲವರು ಸರಿಯಾಗಿ ಪ್ಲಾನ್ ಮಾಡುವುದಿಲ್ಲ. ಅದೇನು ದೊಡ್ಡಸ್ತಿಕೆಯೋ, ದುರಹಂಕಾರವೋ ಗೊತ್ತಿಲ್ಲ. 120-130 ದಿನಗಳ ಚಿತ್ರೀಕರಣ ಎನ್ನುತ್ತಾರೆ.
ನನ್ನ ಚಿತ್ರಗಳ ಒಂದು ದಿನದ ಚಿತ್ರೀಕರಣಕ್ಕೆ ಆರು ಲಕ್ಷ ಬೇಕು. 150 ದಿನ ಚಿತ್ರೀಕರಣ ಮಾಡಿದರೆ, ಒಂಬತ್ತು ಕೋಟಿ. ಬರೀ ಚಿತ್ರೀಕರಣಕ್ಕೇ ಅಷ್ಟು ಖರ್ಚಾದರೆ, ಒಂದು ಚಿತ್ರಕ್ಕೆ ಎಷ್ಟಾಗಬಹುದು. ಚಿತ್ರ ಗೆದ್ದರೆ ಎಲ್ಲಾ ಅಪ್ಪಂದಿರಾಗ್ತಾರೆ. ಸೋತರೆ ಹೀರೋ ತಲೆ ಮೇಲೆ ಬರುತ್ತೆ. ಹಾಗಾಗಿ 65 ದಿನ ಅಂತ ಫಿಕ್ಸ್ ಮಾಡಿದೆ. ಆಗ ಸರಿಯಾಗಿ ಪ್ಲಾನಿಂಗ್ ಮಾಡಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ ದರ್ಶನ್.
ಊಟ ಕೊಟ್ನಾ, ಬಟ್ಟೆ ಕೊಟ್ನಾ: ಇನ್ನು ಇತ್ತೀಚೆಗೆ “ತಾರಕ್’ ಚಿತ್ರದ ಟ್ರೇಲರ್ ಬಿಡುಗಡೆ ತಡವಾದಾಗ ಅವರ ಅಭಿಮಾನಿಗಳು ಸಾಕಷ್ಟು ಬೇಸರಗೊಂಡಿದ್ದರು. “ಅಭಿಮಾನಿಗಳು ಅವರು ತಮ್ಮೆಲ್ಲಾ ಕೆಲಸ ಬಿಟ್ಟು, ಟ್ರೇಲರ್‌ಗಾಗಿ ಕಾದಿರುತ್ತಾರೆ. ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೇಳಿ ಮಾಡದಿದ್ದರಿಂದ ಬೇಸರವಾಗಿದೆ. ತಡವಾಗಿದ್ದಕ್ಕೆ ನನಗೆ ಒಂದು ಮೆಸೇಜ್ ಹಾಕೋದಕ್ಕೆ ಹೇಳಿದರು. ಹೊಡೀತಾರೆ, ನಾ ಹಾಕಲ್ಲ ಅಂತ ಹೇಳಿದೆ. ಕೊನೆಗೆ ತಡವಾಗಿದ್ದಕ್ಕೆ ಒಂದು ಮೆಸೇಜ್ ಹಾಕಿ, ನಂತರ ಟ್ರೇಲರ್ ಹಾಕಿದರು.
ಪಾಪ ಅಭಿಮಾನಿಗಳು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಚಿತ್ರವನ್ನ ಪ್ರಮೋಟ್ ಮಾಡುತ್ತಾರೆ. ಎಷ್ಟೋ ಜನ ಎಲೆ ಮರೆ ಕಾಯಿ ತರಹ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಅತಿರೇಕದ ಅಭಿಮಾನ ತೋರಿಸುತ್ತಾರೆ. ಎಷ್ಟೋ ಜನ ಮೈ-ಕೈ ಮೇಲೆ ನನ್ನ ಹೆಸರು ಹೆಚ್ಚೆ ಹಾಕಿಸಿಕೊಂಡಿರುತ್ತಾರೆ. ನಾನು ಅವರಿಗೆಲ್ಲಾ ಏನು ಕೊಟ್ಟಿದ್ದೀನಿ. ಊಟ ಕೊಟ್ನಾ? ಬಟ್ಟೆ ಕೊಟ್ನಾ? ಏನೂ ಇಲ್ಲ. ನನ್ನ ಹೆಸರು ಹಾಕಿಸಿಕೊಳ್ಳೋಕಿಂತ ನಿಮ್ಮ ತಂದೆ-ತಾಯಿ ಹೆಸರು ಹೆಚ್ಚೆ ಹಾಕಿಸಿಕೊಳ್ಳಿ ಅಂತ ಹೇಳ್ತಾನೆ ಇರ್ತೀನಿ. ಈ ಜೀವನದಲ್ಲಿ ಅಭಿಮಾನಿಗಳ ಋಣ ತೀರಿಸೋಕೆ ಆಗಲ್ಲ’ ಎನ್ನುತ್ತಾರೆ ದರ್ಶನ್.