Advertisement
ಬೆಳಗ್ಗೆ ಎಂಟು ಗಂಟೆಯಿಂದಲೇ ನಗರದ ಎಪಿಎಂಸಿ, ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಯಶವಂತಪುರ ಮಾರುಕಟ್ಟೆಗಳು, ಮೆಜೆಸ್ಟಿಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಜನಸಂಚಾರ ಇರಲಿಲ್ಲ. ಬೆಳಗ್ಗೆ 7 ಗಂಟೆಯೊಳಗೆ ಹಾಲು, ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಖರೀದಿಗೆ ಜನ ಮುಗಿಬಿದ್ದ ದೃಶ್ಯ ಕಂಡುಬಂತು. ಔಷಧ, ಹಾಲು, ಪತ್ರಿಕೆ, ಸರ್ಕಾರಿ ಆಸ್ಪತ್ರೆಗಳ ಸೇವೆಗಳು ಲಭ್ಯವಿದ್ದು, ಪಟ್ರೋಲ್ ಬಂಕ್ ಗಳು ಎಂದಿನಿಂತೆ ಕಾರ್ಯನಿರ್ವಹಿಸಿದವು. ಬಸ್, ಆಟೋ, ಟ್ಯಾಕ್ಸಿ, ಕ್ಯಾಬ್, ಸರಕು ಸಾಗಣೆ ವಾಹನಗಳ ಸಂಚಾರ ಸಹ ಸ್ಥಗಿತವಾಗಿತ್ತು.
Related Articles
Advertisement
ರಾಜ್ಯ ಸರ್ಕಾರಕ್ಕೆ ಜಿಎಸ್‌ಟಿ ಮತ್ತು ಸೇವಾ ತೆರಿಗೆಯೇ ಮೂಲಾಧಾರವಾಗಿದ್ದು, ಶೇ. 60-65ರಷ್ಟು ಬೆಂಗಳೂರಿನಿಂದಲೇ ತೆರಿಗೆ ಸಂಗ್ರಹವಾಗಲಿದೆ. ಆರ್ಥಿಕ ಎಂಜಿನ್ ಸ್ಥಗಿತಗೊಂಡಿದ್ದರಿಂದ ಈ ತಿಂಗಳ ತೆರಿಗೆಯಲ್ಲಿ ಭಾರಿ ಪ್ರಮಾಣದ ಖೋತಾ ಆಗಲಿದೆ. ಕೊರೊನಾ ವೈರಸ್ ಭೀತಿಯಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಬೃಹತ್ ಕೈಗಾರಿಕೆಗಳಿಗೆ ಭಾರೀ ಹೊಡೆತ ಬಿದ್ದಿದ್ದು, ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರಿದೆ ಎಂದು ರಾಜ್ಯ ಜಿಎಸ್‌ಟಿ ಜಿಆರ್‌ಸಿ ಸದಸ್ಯ ಬಿ.ಟಿ. ಮನೋಹರ್ ತಿಳಿಸಿದ್ದಾರೆ.
ಇಂದು ಕೂಡ ಬಂದ್?: ಕೊರೊನ ವೈರಸ್ ನಿಯಂತ್ರಣಕ್ಕಾಗಿ ಕೈಜೋಡಿಸಿರುವ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಸಾರಿಗೆ ಸಂಸ್ಥೆಗಳು ಸೋಮವಾರ ಕೂಡ ಬಸ್‌ಗಳನ್ನು ರಸ್ತೆಗಿಳಿಸದಿರಲು ನಿರ್ಧರಿಸಿವೆ. ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಸೋಮವಾರ ಯಾವುದೇ ಬಸ್ ಸೇವೆ ಇರುವುದಿಲ್ಲ. ಅಲ್ಲದೆ, ಆರೋಗ್ಯ ಇಲಾಖೆ ಸೂಚಿಸಿರುವ ಒಂಬತ್ತು ಜಿಲ್ಲೆಗಳಲ್ಲಿ ಅಂತರಜಿಲ್ಲಾ ಬಸ್ ಸೇವೆ ಕೂಡ ಇರುವುದಿಲ್ಲ. ಬಿಎಂಟಿಸಿಯಿಂದ ಕೇವಲ ಶೇ. 50ರಷ್ಟು ಬಸ್ ಸೇವೆ ಇರಲಿದೆ.
ಅದೇ ರೀತಿ, ಬೆಂಗಳೂರಿನಿಂದ ಶನಿವಾರ ರಾತ್ರಿ ಪ್ರಯಾಣಿಸಿದ್ದ ಖಾಸಗಿ ಬಸ್‌ಗಳು, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ಬೆಳಗಾವಿ ಸೇರಿ ಜಿಲ್ಲಾ ಕೇಂದ್ರಗಳಲ್ಲೇ ಇವೆ. ಸೋಮವಾರ ಕೂಡ ಯಾವುದೇ ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡುವುದಿಲ್ಲ ಎಂದು ವಿವಿಧ ಖಾಸಗಿ ಟ್ರಾವೆಲ್ ಮಾಲಿಕರು ತಿಳಿಸಿದ್ದಾರೆ. “9 ಜಿಲ್ಲೆಗಳಲ್ಲಿ ವಾಣಿಜ್ಯ ವಹಿವಾಟು ಬಂದ್ ಮಾಡಿರುವ ಕಾರಣ ಪ್ರವಾಸಿ ಟ್ಯಾಕ್ಸಿ ಸಂಚಾರ ಕೂಡ ಸೋಮವಾರ ಸ್ಥಗಿತವಾಗಲಿದೆ.
ಕಳೆದ 15 ದಿನಗಳಿಂದ ಬಹುತೇಕ ಪ್ರವಾಸಿ ಟ್ಯಾಕ್ಸಿಗಳ ಸಂಚಾರ ಸ್ಥಗಿತಗೊಂಡಿದೆ. ಕೋವಿಡ್-19 ಹಿಮ್ಮೆಟ್ಟಿಸಲು ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಕೈಜೋಡಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ಟ್ರಾವಲ್ ಆಪರೇಟರ್ ಸಂಘ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ. “ಐಟಿ ಕಂಪನಿಗಳ ಉದ್ಯೋಗಿಗಳು ಮನೆ ಯಲ್ಲೇ ಕೆಲಸ ಮಾಡಲು ಸೂಚಿಸಿರುವ ಕಾರಣ ಮ್ಯಾಕ್ಸಿಕ್ಯಾಬ್‌ಗಳ ಸಂಚಾರ 15 ದಿನಗಳಿಂದ ವಿರಳವಾಗಿದೆ.
ಸರ್ಕಾರದ ನಿರ್ದೇಶನದಂತೆ ಸೋಮವಾರ ಯಾವುದೇ ಮ್ಯಾಕ್ಸಿ ಕ್ಯಾಬ್ ಸಂಚಾರ ಇರುದಿಲ್ಲ’ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘದ ಅಧ್ಯಕ್ಷ ಭೈರವ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸರಕು-ಸಾಗಣೆ ಲಾರಿಗಳ ಸಂಚಾರ ಕೂಡ ಸೋಮವಾರ ಸ್ಥಗಿತಗೊಳಿಸಲಾಗುತ್ತಿದೆ. ಹಾಲು, ಅಡಿಗೆ ಅನಿಲ, ಪೆಟ್ರೋಲ್-ಡೀಸೆಲ್ ಸಾಗಣೆ ಹೊರತುಪಡಿಸಿ ಬೇರೆ ಸರಕು ಸಾಗಣೆ ಇರುವುದಿಲ್ಲ. ಸರ್ಕಾರ ನಿರ್ದೇಶನ ನೀಡಿದರೆ, ಇನ್ನಷ್ಟು ದಿನ ಬಂದ್ ಮುಂದುವರಿಸಲಾಗು ವುದು ಎಂದು ರಾಜ್ಯ ಲಾರಿ ಮಾಲಿಕರು ಮತ್ತು ಏಜೆಂಟರ ಒಕ್ಕೂಟದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದರು.