Advertisement

ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಭಾರತೀಯ ಕ್ಯಾಬ್ ಡ್ರೈವರ್ ಮಗ

04:21 PM Mar 26, 2021 | ಕೀರ್ತನ್ ಶೆಟ್ಟಿ ಬೋಳ |

ಒಂದು ದೇಶದ ಆಟಗಾರರು ಮತ್ತೊಂದು ದೇಶಕ್ಕೆ ವಲಸೆ ಹೋಗಿ ಅಲ್ಲಿನ ರಾಷ್ಟ್ರೀಯ ತಂಡದಲ್ಲಿ ಆಡುವುದನ್ನು ನೋಡಿದ್ದೇವೆ. ಸದ್ಯದ ಇಂಗ್ಲೆಂಡ್ ತಂಡ ಇದಕ್ಕೆ ಉತ್ತಮ ಉದಾಹರಣೆ. ಭಾರತೀಯ ಮೂಲದ ಆಟಗಾರರು ಕೂಡಾ ಬೇರೆ ಬೇರೆ ದೇಶಗಳ ಪರವಾಗಿ ಆಡಿದ್ದಾರೆ. ಭಾರತದ ವಿರುದ್ಧವೂ ಆಡಿದವರಿದ್ದಾರೆ. ಇದಕ್ಕೆ ಇತ್ತೀಚಿನ ಸೇರ್ಪಡೆಯೆಂದರೆ ಲೆಗ್ ಸ್ಪಿನ್ನರ್ ತನ್ವೀರ್ ಸಂಘಾ.

Advertisement

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ಯಾಬ್ ಡ್ರೈವರ್ ಆಗಿರುವ ಜೋಗಾ ಸಿಂಗ್ ಸಂಘಾ ಮೂಲತಃ ಭಾರತದ ಪಂಜಾಬ್ ನ ಜಲಂಧರ್ ನವರು. ಜಲಂಧರ್ ನಲ್ಲಿ ಕೃಷಿಕರಾಗಿದ್ದ ಜೋಗಾ ಸಂಘಾ 1997ರಲ್ಲಿ ಆಸ್ಟ್ರೇಲಿಯಾಗೆ ತೆರಳುತ್ತಾರೆ. ಅಲ್ಲಿ ಕೆಲಸಕ್ಕೆ ಸೇರಿದ ಅವರು ನಂತರ ಕ್ಯಾಬ್ ಓಡಿಸಲು ಆರಂಭಿಸುತ್ತಾರೆ. ಈ ಜೋಗಾ ಸಂಘಾ ಮಗನೇ ಸದ್ಯ ಆಸ್ಟ್ರೇಲಿಯಾದಲ್ಲಿ ಮಿಂಚುತ್ತಿರುವ ತನ್ವೀರ್ ಸಂಘಾ.

ತನ್ವೀರ್ ಜನಿಸಿದ್ದು 2001ರ ನವೆಂಬರ್ 26ರಂದು. ಸಿಡ್ನಿಯಲ್ಲಿ. ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಆತ ವಾಲಿಬಾಲ್, ರಗ್ಬಿ, ಕಬಡ್ಡಿ ತಂಡದಲ್ಲಿ ಸ್ಥಾನ ಪಡೆದಿದ್ದ. ತನ್ನ ಹತ್ತನೇ ವಯಸ್ಸಿನಲ್ಲಿ ಈತನ ಕ್ರಿಕೆಟ್ ಮೇಲಿನ ಆಸಕ್ತಿ ಕಂಡ ಜೋಗಾ ಸಂಘಾ , ಮಗನನ್ನು ಕ್ರಿಕೆಟ್ ತರಬೇತಿಗೆ ಸೇರಿಸುತ್ತಾರೆ. ಮೊದಲೇ ಪ್ರತಿಭಾನ್ವಿತನಾಗಿದ್ದ ಬಾಲಕ ತನ್ವೀರ್ 12 ವರ್ಷವಿರುವಾಗಲೇ ಸ್ಥಳೀಯ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದ.

ತನ್ವೀರ್ ಸಂಘಾ ಆಸ್ಟ್ರೇಲಿಯಾದ ವಯೋಮಿತಿ ತಂಡದಲ್ಲಿ ಸ್ಥಾನ ಪಡೆದಿದ್ದ. 2018ರಲ್ಲಿ ಅಂಡರ್ -16 ಕೂಟದಲ್ಲಿ ಪಾಕ್ ವಿರುದ್ಧ ಆಡುತ್ತಿದ್ದ ವೇಳೆ ಪಾಕಿಸ್ಥಾನ ಮೂಲದ ಆಸೀಸ್ ಕ್ರಿಕೆಟಿಗ ಫಾವದ್ ಅಹಮದ್ ಕಣ್ಣಿಗೆ ಬಿದ್ದಿದ್ದ. ನಂತರ ಫಾವದ್ ಅಹಮದ್ ಜೊತೆ ಸೇರಿದ ತನ್ವೀರ್ ಲೆಗ್ ಸ್ಪಿನ್ ಬಗ್ಗೆ ಹೆಚ್ಚಿನ ತರಬೇತಿ ಪಡೆದ.

Advertisement

ಬೌಲಿಂಗ್ ಮಾತ್ರವಲ್ಲದೆ ತನ್ವೀರ್ ಉತ್ತಮ ಬ್ಯಾಟ್ಸಮನ್ ಕೂಡಾ. ಅಂಡರ್ 19 ವಿಶ್ವಕಪ್ ನಲ್ಲಿ 85ರ ಸ್ಟ್ರೇಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದರು.  ಅಂದಹಾಗೆ ತನ್ವೀರ್ ಆರಂಭಿಕ ದಿನಗಳಲ್ಲಿ ವೇಗದ ಬೌಲರ್ ಆಗಿದ್ದರು. ಆದರೆ ವೇಗದ ಬೌಲರ್ ಗಳಿಗೆ ಆಗಾಗ ಕಾಡುವ ಭುಜದ ನೋವು ಸಮಸ್ಯೆಯ ಕಾರಣ ಅವರು ಸ್ಪಿನ್ ಬೌಲರ್ ಆದರಂತೆ!

ಅಂಡರ್ 19 ವಿಶ್ವಕಪ್ ನಲ್ಲಿ 15 ವಿಕೆಟ್ ಕಿತ್ತು ಆಸೀಸ್ ತಂಡದ ಪರ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದರು.  ಬಿಗ್ ಬ್ಯಾಶ್ ಲೀಗ್ ನಲ್ಲೂ ಉತ್ತಮ ಪ್ರದರ್ಶನ ತೋರಿದ್ದರು. ಇದೇ ಕಾರಣದಿಂದ ಕಳೆದ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಗೆ ಆಸೀಸ್ ಪ್ರಧಾನ ತಂಡಕ್ಕೆ ಆಯ್ಕೆಯಾಗಿದ್ದರು.

ಈ ಹಿಂದೆಯೂ ಆಡಿದ್ದರು: ಭಾರತದಲ್ಲಿ ಜನಿಸಿದವರು, ಭಾರತೀಯ ಮೂಲದವರು ಆಸೀಸ್ ತಂಡದಲ್ಲಿ ಆಡಿದ್ದರು. ಆರು ವರ್ಷಗಳ ಹಿಂದೆ ಭಾರತೀಯ ಮೂಲದ ಗುರಿಂಧರ್ ಸಂಧು ಆಸೀಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ಹಿಂದೆ ಆಡಿದ್ದ ಆಸೀಸ್ ತಂಡದಲ್ಲಿ ರೆಕ್ಸ್ ಸೆಲ್ಲರ್ ಮತ್ತು ಬ್ರಾನ್ಸ್ಬಿ ಕೂಪರ್ ಭಾರತದಲ್ಲಿ ಜನಿಸಿದವರು.

Advertisement

Udayavani is now on Telegram. Click here to join our channel and stay updated with the latest news.

Next