ರಣಜಿ ಇತಿಹಾಸದಲ್ಲಿ ತಂಡವೊಂದರ 10ನೇ ಹಾಗೂ 11ನೇ ಕ್ರಮಾಂಕದ ಆಟಗಾರರು ಒಟ್ಟೊಟ್ಟಿಗೆ ಶತಕ ಬಾರಿಸಿದ ಮೊದಲ ನಿದರ್ಶನ ಇದಾಗಿದೆ. ಇದು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದ ಕೇವಲ 2ನೇ ದೃಷ್ಟಾಂತ. ಮೊದಲ ನಿದರ್ಶನಕ್ಕೂ ಭಾರತ ಸಾಕ್ಷಿಯಾಗಿರುವುದು ವಿಶೇಷ. 1946ರ ಇಂಗ್ಲೆಂಡ್ ಪ್ರವಾಸದ ವೇಳೆ ಸರ್ರೆ ಕೌಂಟಿ ವಿರುದ್ಧ ಓವಲ್‌ನಲ್ಲಿ ಆಡಲಾದ ಪಂದ್ಯದಲ್ಲಿ ಚಂದು ಸರ್ವಟೆ ಮತ್ತು ಶುತೆ ಬ್ಯಾನರ್ಜಿ ಶತಕ ಬಾರಿಸಿದ್ದರು.
Advertisement
232 ರನ್ ಜತೆಯಾಟಬರೋಡ ವಿರುದ್ಧ ತನುಷ್ ಕೋಟ್ಯಾನ್ ಅಜೇಯ 120 ರನ್ ಬಾರಿಸಿದರೆ (10 ಬೌಂಡರಿ, 4 ಸಿಕ್ಸರ್), ತುಷಾರ್ ದೇಶಪಾಂಡೆ 123 ರನ್ ಹೊಡೆದರು (10 ಬೌಂಡರಿ, 8 ಸಿಕ್ಸರ್). ಇಬ್ಬರೂ 129 ಎಸೆತ ಎದುರಿಸಿದ್ದು, 10 ಬೌಂಡರಿ ಹೊಡೆದದ್ದನ್ನು ಕ್ರಿಕೆಟಿನ ಸ್ವಾರಸ್ಯ ಎನ್ನಲಡ್ಡಿಯಿಲ್ಲ.
ಈ ಜೋಡಿಯಿಂದ ಅಂತಿಮ ವಿಕೆಟಿಗೆ 232 ರನ್ ಒಟ್ಟುಗೂಡಿತು. ಕೇವಲ 2 ರನ್ನಿನಿಂದ ರಣಜಿಯಲ್ಲಿ ಕೊನೆಯ ವಿಕೆಟಿಗೆ ನೂತನ ದಾಖಲೆ ತಪ್ಪಿಹೋಯಿತು. 1991-92ರ ಸೀಸನ್‌ನಲ್ಲಿ ದಿಲ್ಲಿಯ ಅಜಯ್ ಶರ್ಮ ಮತ್ತು ಮಣಿಂದರ್ ಸಿಂಗ್ ಮುಂಬಯಿ ವಿರುದ್ಧ 233 ರನ್ ಪೇರಿಸಿದ್ದು ದಾಖಲೆ ಆಗಿದೆ.
606 ರನ್ನುಗಳ ಗೆಲುವಿನ ಗುರಿ ಪಡೆದ ಬರೋಡ, ಪಂದ್ಯದ ಮುಕ್ತಾಯದ ವೇಳೆ 3 ವಿಕೆಟಿಗೆ 121 ರನ್ ಮಾಡಿತ್ತು.
ಸಂಕ್ಷಿಪ್ತ ಸ್ಕೋರ್: ಮುಂಬಯಿ-384 ಮತ್ತು 569. ಬರೋಡ-348 ಮತ್ತು 3 ವಿಕೆಟಿಗೆ 121.