Advertisement

ತಾಂಡವವಾಡುತ್ತಿದೆ ಮಾನವೀಯತೆ ಬರ

02:09 PM Sep 15, 2017 | |

ಹೊಸಪೇಟೆ: ನೀರಿನ ಬರಕ್ಕಿಂತ ಮಾನವೀಯತೆಯ ಬರ ತಾಂಡವಾಡುತ್ತಿದ್ದು, ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳದೆ ಅವರ ವಸ್ತುಗಳನ್ನು ಕಡಿಮೆ ಬೆಲೆಗೆ ಕೊಳ್ಳಲು ಹವಣಿಸುವುದೇ ಅಮಾನವೀಯ ಎನ್ನಿಸುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್‌ ಮಟ್ಟು ಬೇಸರ ವ್ಯಕ್ತಪಡಿಸಿದರು. ಕನ್ನಡ ವಿಶ್ವವಿದ್ಯಾಲಯದ ರಜತ ಮಹೋತ್ಸವ ಅಂಗವಾಗಿ ಮಂಟಪ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕರ್ನಾಟಕದ ಜ್ವಲಂತ ಸಮಸ್ಯೆಗಳು; ನೀರು, ಬರ ನಿರ್ವಹಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ನೀರು, ಬರ, ಕೃಷಿ ನಡುವೆ ಪರಸ್ಪರ ಸಂಬಂಧ ಇದೆ. ನೀರು, ಬರ ನಿರ್ವಹಣೆಯಲ್ಲಿ ಪ್ರಭುತ್ವದೊಂದಿಗೆ ನಾಗರಿಕರ ಪಾತ್ರವೂ ಇದೆ. ನಾವೆಲ್ಲ ಆತ್ಮ ವಂಚಕರಾಗಿದ್ದೇವೆ. ರೈತರ ಸಮಸ್ಯೆ ಅರ್ಥ ಮಾಡಿಕೊಳ್ಳಬೇಕು. ರೈತರಿಂದ ಕಡಿಮೆ ಬೆಲೆಗೆ ವಸ್ತುಗಳನ್ನು ಪಡೆಯಲು ಯೋಚಿಸುವುದೇ ಅಮಾನವೀಯ ಅನಿಸುತ್ತದೆ ಎಂದು ಹೇಳಿದರು.

Advertisement

ಪ್ರತಿ 2 ಗಂಟೆಗೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯ ಲೇವಾದೇವಿಗಾರರ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ವಿಷಯದಲ್ಲಿ ರಾಜಕೀಯ ಸಲ್ಲದು. ಸಮೀಕ್ಷೆ ಪ್ರಕಾರ ರೈತನ ಮಾಸಿಕ ಆದಾಯ 3,080 ರೂ. ಇದೆ. ಭೂ ಸ್ವಾಧೀನ ತಡೆಯಲು ಸಾಧ್ಯವಾಗುತ್ತಿಲ್ಲ. ಭೂ ಸುಧಾರಣಾ ಕಾಯಿದೆ ರೈತರಿಗೆ ಅನುಕೂಲವಾಗಿಲ್ಲ. ರೈತರ ಸಾಲ ಮನ್ನಾ ಅನಿವಾರ್ಯ ಆದರೆ ರಾಜಕೀಯಕರಣಗೊಂಡಿದೆ ಎಂದರು. ವಿಶ್ರಾಂತ ಪ್ರಾಧ್ಯಾಪಕ ಡಾ|ಟಿ.ಆರ್‌. ಚಂದ್ರಶೇಖರಯ್ಯ ಮಾತನಾಡಿ, ಬರ, ನೀರು, ನಿರ್ವಹಣೆ, ಜಾಗತಿಕ ಮಟ್ಟದ ಸಮಸ್ಯೆಯಾಗಿದ್ದರೂ ಎಲ್ಲರಿಗೂ ಸಮಸ್ಯೆ ತರುವುದಿಲ್ಲ. ವಾಣಿಜ್ಯ ಉದ್ದಿಮೆಗಳು, ನೌಕರಶಾಹಿ, ರಾಜಕಾರಣಿಗಳು, ಬರದ ಲಾಭ ಪಡೆಯುತ್ತಿದ್ದಾರೆ. ರೈತರು, ವಿಕಲಚೇತನರು ಅಂಚಿನಲ್ಲಿರುವವರು ತೊಂದರೆ ಅನುಭವಿಸುವಂತಾಗಿದೆ ಎಂದರು. ಪ್ರಾಧ್ಯಾಪಕ ಡಾ| ಸಿ.ಜಿ. ಲಕ್ಷ್ಮೀ ಪತಿ, ಸಾಮಾಜಿಕ ಕಾರ್ಯಕರ್ತ ಜನಾರ್ದನ ಕೆಸರಗದ್ದೆ ಮಾತನಾಡಿದರು. ಕುಲಪತಿ ಡಾ| ಮಲ್ಲಿಕಾ ಎಸ್‌. ಘಂಟಿ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ| ಡಿ. ಪಾಂಡುರಂಗಬಾಬು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next