Advertisement

ತೋಟಗಾರಿಕೆ ಬೆಳೆಗೂ ಟ್ಯಾಂಕರ್‌ ನೀರು!

09:25 AM Jan 26, 2019 | |

ವಿಜಯಪುರ: ಭೀಕರ ಬರ ಒಂದೆಡೆ ಕೃಷಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರೆ ಮತ್ತೂಂದೆಡೆ ತೋಟಗಾರಿಕೆ ಬೆಳೆಗಾರರನ್ನು ಕಂಗಾಲು ಮಾಡಿದೆ. ನೀರಿಲ್ಲದೇ ಒಣಗುತ್ತಿರುವ ದೀರ್ಘಾವಧಿ ತೋಟಗಾರಿಕೆ ಬೆಳೆಗಳ ಸಂರಕ್ಷಣೆಗೆ ಸಾವಿರಾರು ರೂ. ಖರ್ಚು ಮಾಡಿ ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿದ್ದಾರೆ. ಇತ್ತ ಮಹಾರಾಷ್ಟ್ರ ಮಾದರಿ ಪ್ಯಾಕೇಜ್‌ ಘೋಷಿಸಿ ಎಂಬ ಬೇಡಿಕೆ ಮಾತ್ರ ಈಡೇರಿಲ್ಲ. ನೆರೆ ರಾಜ್ಯಕ್ಕೆ ಅಧ್ಯಯನಕ್ಕೆ ಹೋಗಿದ್ದ ಅಧಿಕಾರಿಗಳ ತಂಡ ಬರಿಗೈಲಿ ಬಂದಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ರಫ್ತು ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಅದರಲ್ಲೂ ಸುಮಾರು 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ, 11,900 ಹೆಕ್ಟೇರ್‌ ಪ್ರದೇಶದಲ್ಲಿ ಲಿಂಬೆ, ಸುಮಾರು 3,500 ಹೆಕ್ಟೇರ್‌ ದಾಳಿಂಬೆ ಬೆಳೆಯುವ ಜೊತೆಗೆ ಮಾವು, ಪೇರಲ, ಸಪೋಟ, ಎಲೆಬಳ್ಳಿ ನೀರಿಲ್ಲದೇ ಒಣಗುತ್ತಿದ್ದು, ರೈತರು ನಷ್ಟದ ದುಸ್ಥಿತಿ ತಲುಪಿದ್ದಾರೆ.

ಮಳೆ ಇಲ್ಲದೇ ಭೀಕರ ಬರದಿಂದ ನೀರಿನ ಕೊರತೆ ಎದುರಿಸುತ್ತಿರುವ ತೋಟಗಾರಿಕೆ ಬೆಳಗಾರರು ಅದರಲ್ಲೂ ಇಂಡಿ, ಚಡಚಣ, ವಿಜಯಪುರ, ತಿಕೋಟಾ, ಸಿಂದಗಿ ತಾಲೂಕಿನ ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳೆಗಾರರು ತಮ್ಮ ಬೆಳೆಗಳ ಸಂರಕ್ಷಣೆಗೆ ಟ್ಯಾಂಕರ್‌ ನೀರು ಖರೀದಿಸಿ ಬೆಳೆ ರಕ್ಷಣೆಗೆ ನಿಂತಿದ್ದಾರೆ. ನೀರು ದೊರೆಯುವ ಅಂತರದ ಮೇಲೆ ಟ್ಯಾಂಕರ್‌ ನೀರಿನ ಬೆಲೆ ಇದ್ದು, ಪ್ರತಿ ಟ್ಯಾಂಕರ್‌ ನೀರಿಗೆ 250-500 ರೂ. ಖರ್ಚು ಮಾಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ಬಹುತೇಕ ತೋಟಗಾರಿಕೆ ಬೆಳೆಗಾರರು ಭೀಕರ ಬರದಲ್ಲಿ ಟ್ಯಾಂಕರ್‌ ನೀರು ಕೊಳ್ಳಲು ಲಕ್ಷಾಂತರ ರೂ. ವೆಚ್ಚ ಮಾಡುವುದು ಸಾಮಾನ್ಯ ಎಂಬಂತಾಗಿದೆ. ಟ್ಯಾಂಕರ್‌ ನೀರು ಕೊಳ್ಳಲಾಗದ ರೈತರು ಒಣಗಿನಿಂತ ತಮ್ಮ ಬೆಳೆ ಕಳೆದುಕೊಂಡಿದ್ದು, ರಕ್ಷಣೆಗೆ ಬರುವಂತೆ ಸರ್ಕಾರಕ್ಕೆ ಮಾಡಿಕೊಂಡ ಮನವಿಗೆ ಸ್ಪಂದನೆ ಸಿಕ್ಕಿಲ್ಲ.

ಪ್ಯಾಕೇಜ್‌ ಕೇಳದರೆ ಮಾತೇ ಇಲ್ಲ:
ನೆರೆಯ ಮಹಾರಾಷ್ಟ್ರದಲ್ಲಿ ವಿಜಯಪುರ ಜಿಲ್ಲೆಯ ಪರಿಸ್ಥಿತಿಯೇ ಇದ್ದು, ಅಲ್ಲಿನ ಸರ್ಕಾರ ತೋಟಗಾರಿಕೆ ಬೆಳೆಗಾರರ ಬೆಳೆ ಸಂರಕ್ಷಣೆಗೆ ಪ್ಯಾಕೇಜ್‌ ನೀಡುತ್ತಿದೆ. ಇದೇ ಮಾದರಿ ಸೌಲಭ್ಯ ಕಲ್ಪಿಸಿ ಎಂದು ಕಳೆದ ಒಂದು ದಶಕದಿಂದ ಕೇಳಿ ಬರುತ್ತಿರುವ ರೈತರ ಕೂಗಿಗೆ ಸರ್ಕಾರ ಸ್ಪಂದಿಸಿಲ್ಲ. ಈ ಪ್ಯಾಕೇಜ್‌ ವಿಷಯದಲ್ಲಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಸರ್ಕಾರದ ಧೋರಣೆ ವಿರುದ್ಧ ಬರ ಪರಿಶೀಲನೆ ಸಭೆಯಲ್ಲಿ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ವಿರುದ್ಧವೇ ಹರಿಹಾಯ್ದಿದ್ದರು. ಆಗ ಸಚಿವ ದೇಶಪಾಂಡೆ ಅವರ ಸೂಚನೆ ಮೇರೆಗೆ ವಿಜಯಪುರ ತೋಟಗಾರಿಕೆ ಅಧಿಕಾರಿಗಳ ತಂಡ ಸದರಿ ಯೋಜನೆ ಅಧ್ಯಯನಕ್ಕೆ ಸೊಲ್ಲಾಪುರಕ್ಕೆ ತೆರಳಿತ್ತು. ಜೊತೆಗೆ ಅಲ್ಲಿನ ಸರ್ಕಾರದ ಆದೇಶದ ಪತ್ರ ತರುವುದಕ್ಕಾಗಿ ಸೂಚಿಸಲಾಗಿತ್ತು.

ಆದರೆ ಅಧ್ಯಯನಕ್ಕೆ ಹೋಗಿದ್ದ ಅಧಿಕಾರಿಗಳು ಮಹಾರಾಷ್ಟ್ರ ಸರ್ಕಾರದ ಮೂಲ ಆದೇಶದ ಪ್ರತಿ ದೊರೆಯದೇ ಬರಿಗೈಲಿ ಬಂದಿದ್ದಾರೆ. ಅಲ್ಲಿನ ಅಧಿಕಾರಿಗಳು ಸದರಿ ಸೌಲಭ್ಯವನ್ನು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಸಂವಿಧಾನದ ಕಲಂ 371 (2) ಅನ್ವಯ ವಿಶೇಷ ಸ್ಥಾನಮಾನದ ಆಧಾರದಲ್ಲಿ ಜಾರಿಗೆ ತರಲಾಗಿದೆ ಎಂದು ಮೌಖೀಕವಾಗಿ ಹೇಳಿದ್ದನ್ನು ಕೇಳಿಸಿಕೊಂಡು ಬಂದಿದೆ ಅಷ್ಟೇ. ಮೌಖೀಕ ಮಾಹಿತಿಯನ್ನೇ ಆಧರಿಸಿ ಸರ್ಕಾರಕ್ಕೆ ತೋಟಗಾರಿಕೆ ಬೆಳೆ ಸಂರಕ್ಷಣೆಗೆ ಟ್ಯಾಂಕರ್‌ ನೀರು ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದು ಕುತುಹೂಲ ಮೂಡಿಸಿದೆ.

Advertisement

ಇದೇ ವೇಳೆ ಕಳೆದ ಎರಡು ದಿನಗಳ ಹಿಂದೆ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಲಿಂಬೆ ಬೆಳೆ ಹಾನಿಗೆ ಪರಿಹಾರ ನೀಡಲು ಯೋಚಿಸಲಾಗಿದೆ. ಸರ್ಕಾರ ಮಂಡಳಿಗೆ ನೀಡಿರುವ 2 ಕೋಟಿ ರೂ. ಹಣದಲ್ಲಿ 1.50 ಕೋಟಿ ರೂ. ಹಣವನ್ನು ಲಿಂಬೆ ಬೆಳೆ ಹಾನಿ ಪರಿಹಾರಕ್ಕೆ ಮೀಸಲಿಡಲು ಚಿಂತಿಸಲಾಗಿದೆ. ಶೀಘ್ರವೇ ಸ್ಪಷ್ಟ ನಿರ್ಧಾರ ಹೊರ ಬೀಳಲಿದೆ ಎಂಬ ಮಾತುಗಳೇ ಲಿಂಬೆ ಬೆಳೆಗಾರರಿಗೆ ಕೊಂಚ ಸಮಾಧಾನ ತರಿಸಿದೆ.

ಬರದ ಹಿನ್ನೆಲೆಯಲ್ಲಿ ಆರಂಭಿಸಿರುವ ತೋಟಗಾರಿಕೆ ಬೆಳೆ ಹಾನಿ ಸಮೀಕ್ಷೆ 3-4 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಮಾಸಾಂತ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಯೋಜನೆ ಅಧ್ಯಯನಕ್ಕಾಗಿ ನಮ್ಮ ಅಧಿಕಾರಿಗಳು ಮಹಾರಾಷ್ಟ್ರಕ್ಕೆ ತೆರಳಿದ್ದರು. ಆದರೆ ಅಲ್ಲಿನ ಸರ್ಕಾರದ ಮೂಲ ಆದೇಶ ದೊರೆಯದೇ ಮೌಖೀಕ ಮಾಹಿತಿ ಸಂಗ್ರಹಿಸಿ ಮರಳಿದ್ದಾರೆ. ಇದನ್ನೇ ಆಧರಿಸಿ ರೈತರಿಗೆ ಟ್ಯಾಂಕರ್‌ ನೀರು ಪೂರೈಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
•ಸಂತೋಷ ಇನಾಮದಾರ,
ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ವಿಜಯಪುರ

ತೆಂಗು ಅಭಿವೃದ್ಧಿ ಮಂಡಳಿಯಲ್ಲಿ ತೆಂಗು ಬೆಳೆ ಹಾನಿಯಾದರೆ ಪ್ರತಿ ಗಿಡದ ನಷ್ಟಕ್ಕೆ ಪರಿಹಾರ ನೀಡುವ ಮಾದರಿಯಲ್ಲೇ ಲಿಂಬೆ ಬೆಳಗಾರರಿಗೆ ಪರಿಹಾರ ನೀಡಲು ಚಿಂತಿಸಲಾಗಿದೆ. ದೀರ್ಘಾವಧಿ ಬೆಳೆಯಾಗಿರುವ ಲಿಂಬೆ ಗಿಡ ಹಾಳಾದರೆ ಒಂದು ತಲೆ ಮಾರಿನ ಜೀವನ ನಿರ್ವಹಣೆ ಆಧಾರವೇ ಕಳಚಲಿದೆ. ಹೀಗಾಗಿ ಪರಿಹಾರ ನೀಡಲು ಯೋಚಿಸುತ್ತಿದ್ದು, ಶೀಘ್ರವೇ ಮಂಡಳಿ ಈ ಕುರಿತು ನಿರ್ಧಾರ ಕೈಗೊಳ್ಳಲಿದೆ.
ಯಶವಂತರಾಯಗೌಡ ಪಾಟೀಲ,
ಇಂಡಿ ಕ್ಷೇತ್ರದ ಶಾಸಕ

•ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next