ತಾಂಜಾನಿಯಾ: ತಾಂಜಾನಿಯಾದ ಕೋವಿಡ್ ಸೋಂಕಿತರು ಮತ್ತು ಸಾವನ್ನಪ್ಪಿದವರ ಮಾಹಿತಿ ನಿಗೂಢವಾಗಿ ಉಳಿದಿದೆ. ಇಲ್ಲಿನ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ತಾಂಜಾನಿಯಾದ ಅಮೆರಿಕ ರಾಯಭಾರಿ ಕಚೇರಿ ಹೇಳಿದೆ.
ಎಪ್ರಿಲ್ 29ರಿಂದೀಚೆಗೆ ತಾಂಜಾನಿಯಾ ಸರಕಾರ ಕೋವಿಡ್ -19 ಕುರಿತು ಯಾವುದೇ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ. ಅಧಿಕೃತ ವರದಿಗಳ ಹೊರತಾಗಿಯೂ ನಗರದಲ್ಲಿ ಕೋವಿಡ್ ಸೋಂಕು ಹೆಚ್ಚು ಹಾನಿಯನ್ನು ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಮೆರಿಕ ಹೇಳಿದೆ. ಆದರೆ ತನ್ನ ವರದಿಗೆ ಅದು ಯಾವುದೇ ಪುರಾವೆಗಳನ್ನು ನೀಡಿಲ್ಲ.
ಅಧ್ಯಕ್ಷ ಜಾನ್ ಮಾಗುಫುಲಿ ಜನರಿಗೆ ವೈರಸ್‌ನಿಂದ ದೂರವಿರಲು ಸೂಚಿಸಿದ್ದಾರೆ. ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಅಲ್ಲಿನ ಧಾರ್ಮಿಕ ಕೇಂದ್ರಗಳನ್ನು ತೆರೆದು ಪ್ರಾರ್ಥನೆಗೆ ಅವಕಾಶ ಮಾಡಿಕೊಡಲಾಗಿದೆ. ಈ ವರೆಗೆ ಲಾಕ್‌ಡೌನ್ ಹೇರಲಾಗಿಲ್ಲ. ಆದರೆ ಸಾಮಾಜಿಕ ಅಂತರ ಪಾಲನೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಜನರಲ್ಲಿ ಭಯ ಮೂಡಿಸಬಾರದು ಎಂಬ ಕಾರಣಕ್ಕೆ ಅಧ್ಯಕ್ಷ ಜಾನ್ ಮಾಗುಫುಲಿ ಅವರ ಸೂಚನೆ ಮೇರೆಗೆ ಎ. 29ರಿಂದ ಕೋವಿಡ್ ಪ್ರಕರಣಗಳ ಮಾಹಿತಿಯನ್ನು ಸರಕಾರ ಬಹಿರಂಗಪಡಿಸುತ್ತಿಲ್ಲ. ಶಾಲೆ – ಕಾಲೇಜುಗಳಿಗೆ ರಜೆ ಘೋಷಿಸಿದ್ದರೂ ಜನರು ಕೆಲಸ ಮಾಡುವುದನ್ನು ಹಾಗೂ ಚರ್ಚ್ ಹಾಗೂ ಮಸೀದಿಗಳಿಗೆ ಹೋಗುವುದನ್ನು ನಿಲ್ಲಿಸಿಲ್ಲ. ಹೀಗಾಗಿ, ಮಾರುಕಟ್ಟೆ, ವಾಣಿಜ್ಯ ಚಟುವಟಿಕೆ ತಡೆಯಿಲ್ಲದೆ ನಡೆದಿವೆ.
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ನಕೊಂಡೆ ಪಟ್ಟಣದಲ್ಲಿ ಪ್ರಕರಣಗಳು ಹೆಚ್ಚಿದ ಕಾರಣ ಜಾಂಬಿಯಾ – ತಾಂಜಾನಿಯಾ ಸಂಪರ್ಕಿಸುವ ಗಡಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ತಾಂಜಾನಿಯದಲ್ಲಿ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಿದ್ದು, ಇದು ಕೋವಿಡ್ ವಿರುದ್ಧ ಹೋರಾಡಲು ಸಮಸ್ಯೆಯಾಗಿದೆ. ಇಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳ ಕೊರತೆಯಿದ್ದು ಕೋವಿಡ್‌ನಂತಹ ಮಾರಣಾಂತಿಕ ವೈರಸ್ ಎದುರಿಸಲು ತೊಡಕಾಗಿದೆ.
ಎಪ್ರಿಲ್ 29ರಂದು ಪ್ರಧಾನಿ ಕಚೇರಿ ದೇಶದಲ್ಲಿ ಈ ವರೆಗೆ ಒಟ್ಟು 480 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿತ್ತು. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ತಾಂಜಾನಿಯಾಯಾದಲ್ಲಿ 509 ಪ್ರಕರಣಗಳು ದಾಖಲಾಗಿದ್ದು, 21 ಜನರು ಸಾವನ್ನಪ್ಪಿದ್ದಾರೆ.