ಠಾಣೆಯಲ್ಲಿ ಶೂಟಿಂಗ್ ಕಂಪ್ಲೀಟ್! “ಪಿಸಿಡಿ 2 ಫಿಲಂ ಫ್ಯಾಕ್ಟರಿ’ ಬ್ಯಾನರಿನಲ್ಲಿ ಗಾಯತ್ರಿ ಎಂ ನಿರ್ಮಿಸಿರುವ “ಠಾಣೆ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಿತ್ರತಂಡ ಚಾಲನೆ ನೀಡಿದೆ.
ಇನ್ನು “ಠಾಣೆ’ 1968 ರಿಂದ 2000ವರೆಗಿನ ಕಾಲಘಟ್ಟದ ಕಥೆಯಾಗಿದ್ದು, ರೆಟ್ರೋ ಶೈಲಿಯಲ್ಲಿ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ. “ಠಾಣೆ’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಬೆಂಗಳೂರಿನ ಹಳೆಯ ಬಡಾವಣೆಗಳಲ್ಲಿ ನಡೆಸಲಾಗಿದೆ.
ಎಸ್. ಭಗತ್ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ “ಠಾಣೆ’ ಸಿನಿಮಾದಲ್ಲಿ ರಂಗಭೂಮಿ ಕಲಾವಿದ ಪ್ರವೀಣ್ ನಾಯಕನಾಗಿ ಮತ್ತು ಹರಿಣಾಕ್ಷಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪಿ. ಡಿ. ಸತೀಶ್, ಬಾಲರಾಜವಾಡಿ, ನಾಗೇಶ್, ರಾಜಾರಾಮ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸಿನಿಮಾದ ಎರಡು ಹಾಡುಗಳಿಗೆ ಮಾನಸ ಹೊಳ್ಳ ಸಂಗೀತ ಸಂಯೋಜಿಸುತ್ತಿದ್ದು, ಪ್ರಶಾಂತ್ ಸಾಗರ್ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನವಿದೆ. “ಇಡೀ ಸಿನಿಮಾದ ಕಥೆ ಮೊಬೈಲ್, ಡಿಶ್ ಇಲ್ಲದ ಕಾಲದಲ್ಲಿ ನಡೆಯುತ್ತದೆ. ಹಾಗಾಗಿ ಮೂರು ದಶಕಗಳ ಹಿಂದಿನ ಕಾಲಕ್ಕೆ ತಕ್ಕಂತೆ ಚಿತ್ರೀಕರಣ ಮಾಡುವುದು ದೊಡ್ಡ ಸವಾಲಾಗಿತ್ತು. ಅದರಂತೆ ಹಿಂದಿನ ಕಾಲದ ಬೆಂಗಳೂರಿನ ಪೊಲೀಸ್ ಠಾಣೆ, ರಸ್ತೆಗಳು, ಕಟ್ಟಡಗಳು, ಸ್ಲಂ ಹೀಗೆ ಎಲ್ಲ ಸ್ಥಳಗಳನ್ನು ಹುಡುಕಿ ಚಿತ್ರೀಕರಣ ಮಾಡಲಾಗಿದೆ. ಸದ್ಯ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಆದಷ್ಟು ಬೇಗ “ಠಾಣೆ’ಯನ್ನು ಥಿಯೇಟರ್ ಗೆ ತರುವ ಕೆಲಸ ಮಾಡುತ್ತಿ ದ್ದೇವೆ’ ಎಂಬುದು ಚಿತ್ರತಂಡದ ಮಾತು.
“ಠಾಣೆ’ ಸಿನಿಮಾಕ್ಕೆ “ಕೇರಾಫ್ ಶ್ರೀರಾಮಪುರ’ ಎಂಬ ಅಡಿಬರಹವಿದ್ದು, ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರುತ್ತಿದೆ.