ಚಿಂಚೋಳಿ: ತಾಲೂಕಿನ ಚಂದಾಪುರ, ಕಲ್ಲೂರ, ಪೋಲಕಪಳ್ಳಿ ಗ್ರಾಮಗಳ ಮೂಲಕ ಹಾಯ್ದು ಹೋಗಿರುವ ತಾಂಡೂರ-ಚಿಂಚೋಳಿ ರಾಜ್ಯ ಹೆದ್ದಾರಿ ಹದಗೆಟ್ಟಿದ್ದು, ರಸ್ತೆಗಳಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತೆ ಆಗಿದೆ ಎಂದು ಸಮಾಜ ಸೇವಕ ಭೀಮಶೆಟ್ಟಿ ಮುಕ್ಕಾ ದೂರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಂದಾಪುರ ನಗರದಿಂದ 10 ಕಿ.ಮೀ ರಸ್ತೆ ಕೆಟ್ಟಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ. ರಾತ್ರಿ ವೇಳೆ ಅನೇಕರು ಬಿದ್ದು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಚಿಂಚೋಳಿ-ಮಿರಿಯಾಣ ರಾಜ್ಯ ಹೆದ್ದಾರಿ ಅಭಿವೃದ್ದಿಗೆ ಸರಕಾರ 27ಕೋಟಿ ರೂ. ಮಂಜೂರಿ ಮಾಡಲಾಗಿತ್ತು. ಕಾಮಗಾರಿಯನ್ನು ಬೀದರ ಜಿಲ್ಲೆಯ ಕೊಟ್ರಕಿ ಕನ್‌ಷ್ಟ್ರಕ್ಷನ್ ಕಂಪನಿಗೆ ವಹಿಸಲಾಗಿತ್ತು. ಈ ಕಂಪನಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಅತ್ಯಂತ ಕಳೆಪೆಮಟ್ಟ ನಡೆದ ಪರಿಣಾಮ ಕೇವಲ ಎರಡು ವರ್ಷಗಳಲ್ಲಿಯೇ ಡಾಂಬರ್ ಕಿತ್ತು ಹೋಗಿದೆ ಎಂದು ದೂರಿದರು.
ಪೋಲಕಪಳ್ಳಿ ಗ್ರಾಮದ ಹತ್ತಿರ ಮತ್ತು ಚಂದಾಪುರ ವಿದ್ಯುತ್ ಉತ್ಪಾದನಾ ಘಟಕದ ಹತ್ತಿರ ಅನೇಕ ಅಪಘಾತಗಳು ಸಂಭವಿಸಿ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇನ್ನುವರೆಗೆ ದುರಸ್ತಿ ಕಾರ್ಯ ಕೈಗೊಂಡಿಲ್ಲವೆಂದು ಹೇಳಿದರು.
ಕಲ್ಲೂರ ಗ್ರಾಮದ ಬಳಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಸೇತುವೆ ಮೂರು ವರ್ಷಗಳಲ್ಲಿಯೇ ಹದಗೆಟ್ಟಿದೆ. ರಾಜ್ಯ ಹೆದ್ದಾರಿಯಲ್ಲಿ ಭಾರಿ ತೆಗ್ಗು ಬಿದ್ದಿರುವುದರಿಂದ ಸಿಮೆಂಟ ಮತ್ತು ಕಲ್ಲು ಪರಸಿ ತುಂಬಿದ ಲಾರಿಗಳು ಕೆಸರಿನಲ್ಲಿ ಸಿಕ್ಕಿಕೊಳ್ಳುತ್ತಿವೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಹದಗೆಟ್ಟಿರುವ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ಇಲ್ಲದಿದ್ದಲ್ಲಿ ಲೋಕೋಪಯೋಗಿ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.