ಸವದತ್ತಿ: ದೈವ ಕೃಪೆಗೆ ಪ್ರಾರ್ಥಿಸಿ ಜನಗುಡಿ-ಗುಂಡಾರ ಅಲೆಯುತ್ತಾರೆ. ಆದರೆ ಈ ಗ್ರಾಮದಲ್ಲಿ ಶಿಕ್ಷಕರು ಮತ್ತು ಮಕ್ಕಳು ಶೈಕ್ಷಣಿಕ ಚಟುವಟಿಕೆಗಳ ಆಯೋಜನೆಗಾಗಿ ಸರ್ಕಾರಿ ಕಟ್ಟಡದ ಜತೆಗೆ ಗುಡಿ-ಗುಂಡಾರ, ಸಮುದಾಯ ಭವನಕ್ಕೆ ಅಲೆಯುತ್ತಿದ್ದಾರೆ!
ತಾಲೂಕಿನ ಕಟಮಳ್ಳಿ ತಾಂಡಾದಲ್ಲಿ ಸುಮಾರ 50 ವರ್ಷದಷ್ಟು ಹಳೆಯದಾದ ಸರಕಾರಿ ಶಾಲೆಯು ಇದ್ದೂ ಇಲ್ಲದಂತಾಗಿದೆ. ಈ ಶಾಲೆ ಕೊಠಡಿಗಳ ಕೊರತೆಗೆ ನಲುಗಿ ಹೋಗಿದೆ. ಇಲ್ಲಿ 180ಕ್ಕೂ ಅಧಿಕ ವಿದ್ಯಾರ್ಥಿಗಳು 1-7ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆದರೆ ಇರುವ ಕೊಠಡಿಗಳು ಕೇವಲ ಮೂರು. ಇಷ್ಟೇ ಜಾಗದಲ್ಲಿ ಮಕ್ಕಳಿಗೆ ಪಾಠ ಮಾಡಲಾಗದೇ ಇಕ್ಕಟ್ಟಿಗೆ ಸಿಲುಕಿರುವ ಶಿಕ್ಷಕರು ಗ್ರಾಮದಲ್ಲಿ ಇರುವ ಸಮುದಾಯ ಭವನ ಮಾತ್ರವಲ್ಲ, ದೇವಸ್ಥಾನದಲ್ಲೂ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಗ್ರಾಮೀಣ ಮತ್ತು ಬುಡಕಟ್ಟು ಜನಾಂಗವೇ ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ನೆಲೆಸಿದೆ. ಐದು ದಶಕಗಳ ಹಿಂದೆ ಸರ್ಕಾರ ಕಟ್ಟಡ ನಿರ್ಮಿಸಿದೆ. ಆದರೆ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಷ್ಟು ಕೊಠಡಿಗಳಿಲ್ಲ. ಆಟವಾಡಲು ಮೈದಾನ ಇಲ್ಲ. ಇನ್ನೂ ಇರುವ ಕಟ್ಟಡದ ಮೇಲ್ಛಾವಣಿಯೂ ಹಾಳಾಗಿದ್ದು, ಮಕ್ಕಳು ಭಯದಲ್ಲೇ ಶಾಲೆಯಲ್ಲಿ ಇರುವ ಸ್ಥಿತಿ ಇದೆ. ಶಾಲೆಯಲ್ಲಿ ಮೇಲ್ಛಾವಣಿಯೂ ಇಲ್ಲ. ಶುದ್ಧ ಕುಡಿಯುವ ನೀರು, ಇದ್ದೂ ಇಲ್ಲದಂತಿರುವ ಪ್ರತ್ಯೇಕ ಶೌಚಗೃಹ, ಆಟದ ಮೈದಾನ ಮೊದಲಾದ ಸೌಲಭ್ಯಗಳು ಇಲ್ಲದ್ದರಿಂದ ಬೇರೆ ದಾರಿ ತೋಚದ ಪಾಲಕರು ಊರಲ್ಲಿರುವ ಶಾಲೆ ಬಿಡಿಸಿ ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸುವ ಚಿಂತನೆ ನಡೆಸಿದ್ದಾರೆ. ಕೆಲವರು ಶಾಲೆ ಬಿಡಿಸಿ ಕೃಷಿ ಭೂಮಿಯ ಹಾದಿ ಹಿಡಿಸಿದ್ದಾರೆ.
ಈ ಶಾಲೆಯ ಸ್ಥಿತಿ ‘ಒಂದು ಮನೆ, ಮೂರು ಬಾಗಿಲಿನಂತಾಗಿದ್ದು’ ಶಿಕ್ಷಕರು ಸ್ಥಳಾವಕಾಶದ ಕೊರತೆಯಿಂದ ಬಳಲಿ ಬೆಂಡಾಗಿ ಹೋಗಿದ್ದಾರೆ. ಈಗ ರಜೆಯ ಅವ ಧಿಯಲ್ಲಾದರೂ ಕಟ್ಟಡದ ಕೊರತೆ ನೀಗಬಹುದೆಂಬ ಗ್ರಾಮಸ್ಥರ ಆಶಯಕ್ಕೂ ಪೆಟ್ಟು ಬಿದ್ದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ ಗ್ರಾಮದ ಶಾಲೆಗೆ ಅಗತ್ಯ ಸೌಕರ್ಯ ಕಲ್ಪಿಸಲು ಮುಂದಾಗಬೇಕಾಗಿದೆ.
ವಿಶೇಷವೆಂದರೆ ಈ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲ. ಆಟದ ಮೈದಾನವೂ ಇಲ್ಲ. ಆದರೂ, ಸ್ಥಳೀಯ ಯುವಕರ ಮಾರ್ಗದರ್ಶನದಿಂದ ಶಾಲೆಯ ಮಕ್ಕಳು ಕಬಡ್ಡಿ ಮತ್ತು ಇತರ ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲಾಮಟ್ಟದವರೆಗೂ ಹೋಗಿ ಬೆರಗು ಮೂಡಿಸಿದ್ದಾರೆ. ಸೌಲಭ್ಯಗಳ ಕೊರತೆಯಿಂದ ಹೆಚ್ಚಿನ ಅವಕಾಶದಿಂದ ದೂರವುಳಿಯುತ್ತಿದ್ದಾರೆ.
ನಾನು ಕ್ಷೇತ್ರ ಶಿಕ್ಷಣಾ ಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಕೆಲವೇ ದಿನಗಳಾಗಿವೆ. ಶಾಲೆಗೆ ಸಂಬಂಧಪಟ್ಟ ಕಡತಗಳನ್ನು ತರಿಸಿ ಅ ಧಿಕಾರಗಳ ಜೊತೆ ಖುದ್ದು ಚರ್ಚಿಸಿ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಶೀಘ್ರ ಒದಗಿಸುವ ಕಾರ್ಯ ಮಾಡಲಾಗುತ್ತದೆ.
ಮಂಗಳಾ ತಾಪಸ್ಕರ್, ಬಿಇಒ ಸವದತ್ತಿ
ಪ್ರಧಾನ ಗುರುಗಳು ಈ ಬಗ್ಗೆ ಅಸಡ್ಡೆ ಭಾವನೆ ತೋರುತ್ತಿದ್ದಾರೆ. ಹಲವು ಬಾರಿ ಮೇಲಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿ ವರ್ಗ ಸಮಯ ವ್ಯರ್ಥ ಮಾಡುತ್ತಿದ್ದಾರೆಯೇ ಹೊರತು ಯಾವ ಕಾರ್ಯಗಳು ನಡೆಸುತ್ತಿಲ್ಲ. ಕೂಡಲೇ ಶಾಲೆಗೆ ಬೇಕಾಗಿರುವ ಮೂಲ ಸೌಲಭ್ಯಗಳ ಕುರಿತು ಮೇಲಧಿ ಕಾರಿಗಳು ಕ್ರಮ ಕೈಗೊಳ್ಳಬೇಕು.
ಮಹಾಂತೇಶ ಲಮಾಣಿ, ಎಸ್‌ಡಿಎಂಸಿ ಅಧ್ಯಕ್ಷ
ಶಾಲೆಗೆ ನಾಲ್ಕಾರು ಬಾರಿ ಭೇಟಿ ನೀಡಿದ್ದೇವೆ. ಈ ಕುರಿತು ಗ್ರಾಪಂ ಹಾಗೂ ಎಸ್‌ಡಿಎಂಸಿ ಸದಸ್ಯರ ಜೊತೆಗೆ ಚರ್ಚೆ ನಡೆಸಿ ಮೂಲ ಸೌಕರ್ಯ ಕಲ್ಪಿಸುವ ಕುರಿತು ಟಿಡಿಪಿ ಸಭೆಯಲ್ಲಿ ಎರಡ್ಮೂರು ಬಾರಿ ಚರ್ಚೆ ನಡೆಸಲಾಗಿದೆ. ಸದ್ಯದಲ್ಲಿಯೇ ಅಗತ್ಯ ಕ್ರಮ ಜರುಗಿಸಲು ಕೋರಲಾಗಿದೆ.
ಎಂ.ಎಸ್. ಹೀರೆಕುಂಬಿ, ಜಿಪಂ ಸದಸ್ಯರು
ಡಿ.ಎಸ್. ಕೊಪ್ಪದ